ಪೆರಾಜೆ, ಮೇ 24: ನಿಡ್ಯಮಲೆಯಿಂದ ಗಡಿಗುಡ್ಡೆ ಅಮಚೂರ್ “ಕಾವೇರಿರಸ್ತೆಯ” ಮಾರ್ಗವಾಗಿ ಪೆರಾಜೆ ಸಂಪರ್ಕದ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ ರಸ್ತೆಯು ಸುಮಾರು 95 ಲಕ್ಷ ವೆಚ್ಚದಲ್ಲಿ ಮರುಡಾಂಬರೀಕರಣ ನಡೆಯುತ್ತಿದ್ದು ಇದು ತೀರ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಪಂಚಾಯತ್ ವ್ಯಾಪ್ತಿಯ ಕೆಂಚನಮೂಲೆಯ ಸಮೀಪದಿಂದ ಮರುಡಾಂಬರೀಕರಣ ಕಾಮಗಾರಿ ಆರಂಭಗೊಡಿಂದ್ದು, ರಸ್ತೆಯ ಉದ್ದಕ್ಕೂ ತೀರಾ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ರಸ್ತೆಯ ಕೆಲವು ಕಡೆ ಅಗಲ ಹಾಗೂ ದಪ್ಪಳತೆ ಕಡಿಮೆ ಮಾಡಿದ್ದು ಹಳೆ ರಸ್ತೆ ಕಾಣುವುದರ ಜೊತೆಗೆ ಜಲ್ಲಿ ಮಿಶ್ರಿತ ಡಾಂಬರು ಒಂದೆರಡು ದಿನದಲ್ಲಿ ಮೇಲೆದ್ದು ಸಣ್ಣಪುಟ್ಟ ಗುಂಡಿಗಳು ಉಂಟಾಗಿವೆ. ಈ ಕಳಪೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು, ಗುತ್ತಿಗೆದಾರರಿಗೆ ಮತ್ತು ಇಂಜಿನಿಯರ್‍ಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲವೆಂದು ದೂರಲಾಗಿದೆ. ಈ ಬಗ್ಗೆ ಕಳಪೆ ಗುಣಮಟ್ಟದ ಕೆಲಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ವ್ಯಾಟ್ಸಪ್ ಮೂಲಕ ಫೋಟೋಗಳನ್ನು ಕಳುಹಿಸಿದ್ದಾರೆ.

- ಕಿರಣ್ ಕುಂಬಳಚೇರಿ