ಮಡಿಕೇರಿ, ಮೇ 25: ಕೊಡಗು ಜಿಲ್ಲೆಯ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗರಗಂದೂರು ಗ್ರಾಮದಲ್ಲಿ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವಾಹನ ಸಮೇತ ಅಕ್ರಮ ಮದ್ಯದೊಂದಿಗೆ ಬಂಧಿಸುವಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರ ತಂಡ ಯಶಸ್ವಿಯಾಗಿದೆ.

ಇಂದು ಬೆಳಿಗ್ಗೆ ಮಡಿಕೇರಿಯ ಕಾವೇರಿ ವೈನ್ಸ್‍ನಿಂದ ಮದ್ಯವನ್ನು ಸುಂಟಿಕೊಪ್ಪದ ಗರಗಂದೂರು ಗ್ರಾಮದ ಅಂಬೇಡ್ಕರ್ ಕಾಲೋನಿಗೆ ಸಾಗಿಸುತ್ತಿದ್ದ ವೇಳೆ ಮಾರುತಿ 800 ಕಾರ್ (ಕೆಎ 12 ಎನ್ 3026)ನಲ್ಲಿ ಮೂರು ಜನ ಆರೋಪಿಗಳನ್ನು ಹಾಗೂ 42 ಸಾವಿರ ಮೌಲ್ಯದ ಸುಮಾರು 106 ಲೀಟರ್ ಮದ್ಯದ ಬಾಟಲಿಗಳೊಂದಿಗೆ ಆರೋಪಿಗಳಾದ ಗರಗಂದೂರು ಅಂಬೇಡ್ಕರ್ ಕಾಲೋನಿಯ ಕೂಲಿ ಕಾರ್ಮಿಕ ಹೆಚ್.ಕೆ. ಲವ, ಮಡಿಕೇರಿಯ ಟ್ಯಾಕ್ಸಿ ಚಾಲಕ ಫ್ರಾಂಸಿಸ್, ಮಡಿಕೇರಿ ಕಾವೇರಿ ವೈನ್ಸ್‍ನ ಕ್ಯಾಷಿಯರ್ ಸುರೇಶ್ ಎಂಬವರುಗಳನ್ನು ಬಂಧಿಸಲಾಗಿದೆ.

ಎಸ್ಪಿ ಡಾ. ಸುಮನ್ ಡಿ.ಪಿ., ಸೋಮವಾರಪೇಟೆ ಡಿವೈಎಸ್‍ಪಿ ಹೆಚ್.ಎಂ. ಶೈಲೇಂದ್ರ ಮಾರ್ಗದರ್ಶ ನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ಸುಂಟಿಕೊಪ್ಪ ಪೊಲೀಸ್ ಉಪನಿರೀಕ್ಷಕ ತಿಮ್ಮಪ್ಪ, ಸಿಬ್ಬಂದಿಗಳಾದ ಪ್ರಕಾಶ್, ಸಂಪತ್ ರೈ, ಲೋಕೇಶ್, ದಯಾನಂದ, ಉಮೇಶ್, ಸಂಪತ್ ಜಿ.ಜಿ. ಇವರುಗಳು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು. ತನಿಖಾ ತಂಡಕ್ಕೆ ಎಸ್ಪಿಯವರು ನಗದು ಬಹುಮಾನವನ್ನು ಘೋಷಿಸಿದ್ದಾರೆ.