ಸಿದ್ದಾಪುರ, ಮೇ 25: ಭಾನುವಾರದಂದು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಸೋಮವಾರದಂದು ಜನಸಂದಣಿ ಹೆಚ್ಚಾಗಿ ಕಂಡು ಬಂದಿತು. ಸಿದ್ದಾಪುರದಲ್ಲಿ ಪ್ರತಿ ಭಾನುವಾರ ಸಂತೆಯ ದಿನವಾಗಿದ್ದು, ಭಾನುವಾರದಂದು ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದವು. ವಾಹನಗಳ ಸಂಚಾರ ಇರಲಿಲ್ಲ. ಇದರಿಂದಾಗಿ ಸೋಮವಾರದಂದು ಸಿದ್ದಾಪುರ ಸುತ್ತಮುತ್ತಲಿನ ಗ್ರಾಮಸ್ಥರು ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಮುಚ್ಚಿದ್ದ ಸಮುದ್ರದ ಹಸಿಮೀನು ಮಳಿಗೆಗಳಲ್ಲಿ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ದಲ್ಲಿ ಹಸಿಮೀನು ವ್ಯಾಪಾರ ಭರ್ಜರಿ ಯಾಗಿ ನಡೆಯಿತು. ಮೀನು ಖರೀದಿಸಲು ಜನ ಮುಗಿಬಿದ್ದರು. ಆದರೆ ಮೀನುಗಳ ಬೆಲೆ ದುಬಾರಿಯಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ಕೆಲವು ದಿನಗಳಿಂದ ರಸ್ತೆ ಸಾರಿಗೆ ಸಂಚಾರ ಆರಂಭಿಸಿದ್ದರೂ ಸಿದ್ದಾಪುರಕ್ಕೆ ಯಾವುದೇ ಬಸ್ಸುಗಳು ಬರಲಿಲ್ಲ.