ಮಡಿಕೇರಿ, ಮೇ 25: ಕೊರೊನಾದಿಂದಾಗಿ ಕಾರ್ಮಿಕರ ಕೊರತೆಯಿಂದ ಕಾಫಿ ತೋಟದ ನಿರ್ವಹಣೆ ಸಮಸ್ಯೆ ಯಾದರೆ, ಕೆದಕಲ್, ಮೋದೂರು, ಹೊರೂರು, ಭೂತನಕಾಡು ಮತ್ತು ಅಭ್ಯತ್‍ಮಂಗಲ ಗ್ರಾಮದ ಕಾಫಿ ಬೆಳೆಗಾರರಿಗೆ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ 5 ಆನೆಗಳ ಹಿಂಡು ಕೆಲವು ದಿನಗಳಿಂದ ಬೀಡು ಬಿಟ್ಟಿದ್ದು, ಕಾಫಿ ತೋಟಗಳಿಗೆ ಬಹಳಷ್ಟು ನಷ್ಟ ಉಂಟುಮಾಡುತ್ತಿದೆ.

ಆನೆಗಳ ಹಿಂಡು ಹೊರೂರು ಗ್ರಾಮದ ಪ್ರಭಾಕರ್ ಅವರಿಗೆ ಸೇರಿದ ತೋಟಕ್ಕೆ ನುಗ್ಗಿ ನೂರಾರು ಕಾಫಿ ಗಿಡಗಳನ್ನು ಭಾಗಶಃ ಮುರಿದು ನಷ್ಟ ಉಂಟುಮಾಡಿದೆ. ಈ ಗುಂಪಿನ ಒಂದು ಮರಿಯಾನೆಯಿಂದ ತೋಟಕ್ಕೆ ಹೆಚ್ಚಿನ ಹಾನಿಯಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಮರಿಯಾನೆಯನ್ನು ಅರವಳಿಕೆ ಉಪಯೋಗಿಸಿ ಹಿಡಿದು ದುಬಾರೆ ಆನೆ ಶಿಬಿರಕ್ಕೆ ಕಳುಹಿಸುವದು ಸೂಕ್ತ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.