ಹೆಣ್ಣು ಮಕ್ಕಳ ಫೋಟೋ ಹಾಕದಂತೆ ಮನವಿ

ಬೆಂಗಳೂರು, ಮೇ 25 : ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ ಮಾಡುತ್ತಾರೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಮಾಧ್ಯಮಗಳ ಜೊತೆ ಮಾತನಾಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಲಾಕ್‍ಡೌನ್ ಸಂದರ್ಭದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಎಲ್ಲರೂ ಮನೆಯಲ್ಲೇ ಕೂತು ಸೈಬರ್ ಕ್ರೈಂ ಮಾಡಿದ್ದಾರೆ. ಈ ಬಗ್ಗೆ ದೂರು ಬಂದರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಸೈಬರ್ ಕೂಡ ಮನೆಯಿದ್ದಂತೆ ಅದಕ್ಕೆ ಕಿಟಕಿ ಬಾಗಿಲು ಇರುತ್ತೆ. ಮನೆಯನ್ನ ಹೇಗೆ ಕಾಪಾಡುತ್ತೀವೋ ಹಾಗೆ ಆನ್‍ಲೈನ್ ಬಗ್ಗೆನೂ ಎಚ್ಚರಿಕೆ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಶೋಭಾ ಹೆಸರಲ್ಲಿ ನಕಲಿ ಟ್ವೀಟ್

ಉಡುಪಿ, ಮೇ 25 : ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಮತ್ತು ಸಮಾಜದಲ್ಲಿ ಸಾಮಾಜಿಕ ಶಾಂತಿ ಭಂಗಗೊಳಿಸುವ ಉದ್ದೇಶದಿಂದ ದುಷ್ಕರ್ಮಿಗಳು ಅವರ ಹೆಸರಲ್ಲಿ ನಕಲಿ ಟ್ವೀಟ್‍ಗಳನ್ನು ಹರಡುತ್ತಿದ್ದಾರೆ ಎಂದು ಶೋಭಾ ಅವರು ಆರೋಪಿಸಿದ್ದಾರೆ. ಅಲ್ಲದೆ ಈ ಕುರಿತಂತೆ ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಒತ್ತಾಯಿಸಿದ್ದಾರೆ. ಕಲ್ಲಡ್ಕದ ನಿಶಾಂತ್ ಎಂಬ ಯುವಕನ ಸಾವಿಗೆ ಸಂಬಂಧಿಸಿದ ತನ್ನ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ ಶೋಬಾ ಟ್ವೀಟ್ ಸುದ್ದಿ ನಕಲಿ ಎಂದು ಹೇಳಿದ್ದಾರೆ. ಮೇ 24 ರ ಭಾನುವಾರ, ನಿಶಾಂತ್ ಪಾಣಿಮಂಗಳೂರಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ವೇಳೆ ಸ್ಥಳದಲ್ಲಿದ್ದ ನಾಲ್ವರು ಮುಸ್ಲಿಂ ಯುವಕರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲ ನೀಡದೆ ಆತ ಸಾವನ್ನಪ್ಪಿದ್ದಾನೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಲಿದೆ

ಬೆಂಗಳೂರು, ಮೇ 25 : ಮುಂದಿನ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರುವಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ ಮುನ್ಸೂಚನೆ ನೀಡಿದ್ದಾರೆ. ಅರಬ್ಬೀ ಸಮುದ್ರ, ಬಂಗಾಳಕೊಲ್ಲಿಯ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ ಎಂದಿದ್ದಾರೆ. ಬುಧವಾರದಿಂದ ಮಳೆ ಹೆಚ್ಚಾಗಿ ಅಬ್ಬರಿಸುವ ಸಾಧ್ಯತೆಯಿದೆ. ಮೂರು ದಿನ ಸಂಜೆ ಹೊತ್ತಿಗೆ ಮಳೆಸುರಿಯುವುದರಿಂದ ಕಚೇರಿಯಿಂದ ಹೊರಬರುವ ಸಮಯವಿದಾಗಿದ್ದು, ಮರ ಬೀಳುವ, ವಿದ್ಯುತ್ ಕಂಬ ಬೀಳುವ ಸಂಭವವಿದೆ. ಚರಂಡಿ, ರಸ್ತೆ ಗುಂಡಿಯಿಂದ ರಕ್ಷಿಸಿಕೊಳ್ಳುವಂತೆ ಮಳೆಯಲ್ಲಿ ಓಡಾಡದಂತೆ ಎಚ್ಚರಿಕೆಯಿಂದಿರಲು ಹೇಳಿದ್ದಾರೆ.

ಬಲ್ಬೀರ್ ಸಿಂಗ್ ಸೀನಿಯರ್ ಇನ್ನಿಲ್ಲ

ನವದೆಹಲಿ, ಮೇ 25: 1948 ರಲ್ಲಿ ಲಂಡನ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮೇಲಕ್ಕೇರಿಸಿದ ಹಾಕಿ ಮಾಂತ್ರಿಕ ಬಲ್ಬೀರ್ ಸಿಂಗ್ ಸೀನಿಯರ್ (96) ಅವರು ಮೊಹಾಲಿಯ ಫೆÇೀರ್ಟಿಸ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕಾಯಿಲೆ ಸೇರಿದಂತೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯತೆ ಗಂಭೀರ ಸ್ಥಿತಿಗೆ ತಲುಪಿದ ಕಾರಣ ತಾ 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸದ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ.