ಕೂಡಿಗೆ, ಮೇ 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಗಂಗೆಕಲ್ಯಾಣ ಗ್ರಾಮದಲ್ಲಿರುವ ರೇಷ್ಮೆ ಇಲಾಖೆಯ ರೇಷ್ಮೆ ಚಾಕಿ ಕೇಂದ್ರವನ್ನು ಸ್ಥಳೀಯ ಗ್ರಾಮಸ್ಥರ ಉಪಯೋಗಕ್ಕೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಿಲ್ಲಾ ಪಂಚಾಯತ್ ರೇಷ್ಮೆ ಇಲಾಖೆ ವತಿಯಿಂದ 15 ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ರೇಷ್ಮೆ ಹುಳು ಸಾಕಾಣಿಕೆ ಮಾಡಲು ಗಿರಿಜನ ಯೋಜನೆಯ ಅಡಿ ರೇಷ್ಮೆ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ. ಅದರೆ ಈ ಸಮುದಾಯ ಭವನವು ಪಾಳು ಬಿದ್ದು, ಗಿರಿಜನರಿಗಾಗಿ ಕಾದಿರಿಸಿದ ಜಾಗದಲ್ಲಿ ಬೇರೆಯವರು ಬಳಕೆಗೆ ಮುಂದಾಗುತ್ತಿರುವುದರಿಂದ ಈ ಸಮುದಾಯ ಭವನವನ್ನು ಗ್ರಾಮಸ್ಥರ ಉಪಯೋಗಕ್ಕೆ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರೇಷ್ಮೆ ಹುಳು ಉತ್ಪಾದನಾ ಕೇಂದ್ರವು ಕಳೆದ 5 ವರ್ಷಗಳಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಗ್ರಾಮದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮತ್ತು ಇತರ ಸಭೆಗಳನ್ನು ನಡೆಸಲು ಅನುಕೂಲವಾಗಿರುವುದರಿಂದ ಗ್ರಾಮಸ್ಥರಿಗೆ ವಹಿಸಿಕೊಂಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಮಂಜಯ್ಯ ಸೇರಿದಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.