ಕುಶಾಲನಗರ, ಮೇ 22: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲೆಯ ಗಡಿ ಕುಶಾಲನಗರ ಸೇತುವೆ ಬಳಿ ನಡೆಯುತ್ತಿರುವ ಕಾವೇರಿ ನದಿ ನಿರ್ವಹಣೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ರೂ. 88 ಲಕ್ಷ ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಕೈಗೊಂಡಿರುವ ಗಿಡ ಗಂಟಿ ತೆರವು, ಜೆಂಡು ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಸಚಿವರು ಮಳೆ ಆರಂಭಕ್ಕೂ ಮುನ್ನ ತುರ್ತಾಗಿ ಕಾಮಗಾರಿ ಪೂರ್ಣ ಗೊಳಿಸಲು ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತವಾಗಬಾರದು. ಈ ಹಿಂದಿನ ಪ್ರವಾಹ ಪರಿಸ್ಥಿತಿಯನ್ನು ತಾನು ಕಣ್ಣಾರೆ ಕಂಡಿದ್ದು ಭವಿಷ್ಯದಲ್ಲಿ ಮತ್ತಷ್ಟು ಭೀಕರತೆ ಉಂಟಾಗುವ ಸಾಧ್ಯತೆಯಿರುವ ಕಾರಣ ಇದೀಗ ಕೈಗೊಂಡಿರುವ ಕಾಮಗಾರಿ ಸ್ವಾಗತಾರ್ಹ ಮತ್ತು ಸಮಯೋಚಿತ ವಾಗಿದೆ ಎಂದರು.

ವೇದಿಕೆ ಪ್ರಮುಖರನ್ನು ಶಾಲು ಹೊದಿಸಿ ಗೌರವಿಸಿ ಅಭಿನಂದಿಸಿದರು. ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೆ ನಷ್ಟ ಉಂಟಾದಲ್ಲಿ ತಾನು ಭರಿಸುವುದಾಗಿ ಭರವಸೆ ನೀಡಿದರು. ಈ ಹಿಂದೆ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕೂಡ ಪ್ರಾರಂಭಿಕ ಕಾಮಗಾರಿಯ ಅನುದಾನ ದೊರಕದಿದ್ದಲ್ಲಿ ತಾನು ಭರಿಸುವುದಾಗಿ ಅಭಯ ನೀಡಿರುವುದನ್ನು ಗಮನಿಸಬಹುದು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ ನದಿ ತಟದಲ್ಲಿರುವ ಬಡಾವಣೆಗಳ ಮತ್ತು ನೆರೆಯ ಕೊಪ್ಪ ಗ್ರಾಮದ ಹೆದ್ದಾರಿ ಬದಿಯಿರುವ ನಿವಾಸಿಗಳು ಇದೀಗ ನಿಟ್ಟುಸಿರು ಬಿಡುವಂತಾಗಿದೆ.

ಈ ಸಂದರ್ಭ ಸ್ಥಳದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚುರಂಜನ್, ನದಿ ಪ್ರವಾಹ ಸಂತ್ರಸ್ತರ ವೇದಿಕೆ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಕಾರ್ಯಾಧ್ಯಕ್ಷ ಎಂ.ಎಂ. ಚರಣ್, ಉಪಾಧ್ಯಕ್ಷ ತೋರೇರ ಉದಯಕುಮಾರ್, ಕಾರ್ಯದರ್ಶಿ ವರದ, ಖಜಾಂಚಿ ಕೊಡಗನ ಹರ್ಷ ಮತ್ತಿತರರು ಇದ್ದರು.