ಸೋಮವಾರಪೇಟೆ, ಮೇ 22: ಕಳೆದ ತಾ. 19ರಂದು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಂಧಲೆ ನಡೆಸಿದವರು ಹಾಗೂ ಅದೇ ದಿನ ರಾತ್ರಿ ಸೋಮವಾರಪೇಟೆಯಲ್ಲಿ ಟಾಟಾ 407 ವಾಹನಕ್ಕೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.

ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್‍ಕುಮಾರ್ ಅವರು, ಶನಿವಾರಸಂತೆ ಅಕ್ಮಲ್ ಹಾಗೂ ಇತರರ ನಡುವೆ ನಡೆದ ಚಿಕ್ಕ ಘಟನೆಯನ್ನು ಠಾಣಾಧಿಕಾರಿ ಸೌಹಾರ್ದಯುತವಾಗಿ ಬಗೆಹರಿಸಿದ್ದಾರೆ. ಆದರೆ ಇದನ್ನು ಸಹಿಸಿದ ಕೆಲವರು ಹಾಸನ ಜಿಲ್ಲೆಯಿಂದ ಆರ್‍ಎಸ್‍ಎಸ್‍ನ ಕಾರ್ಯಕರ್ತರನ್ನು ಕರೆಸಿ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿದರು.

ಅದೇ ದಿನ ರಾತ್ರಿ ಹುಲ್ಲೂರಿಕೊಪ್ಪ ಗ್ರಾಮದ ತೋಟವೊಂದರಲ್ಲಿ ಟಿಂಬರ್ ಕೆಲಸಕ್ಕೆ ನಿಲ್ಲಿಸಿದ್ದ ಜಾಕಿರ್ ಪಾಷ ಎಂಬವರ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಈ ಘಟನೆಗಳ ಬಗ್ಗೆ ಪೊಲೀಸ್ ಇಲಾಖೆ ಮೃಧು ಧೋರಣೆ ತಾಳಿರುವದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.

ರಾಜ್ಯದಲ್ಲಿ ಅವಧಿಪೂರ್ವ ವಿಧಾನ ಸಭಾ ಚುನಾವಣೆ ನಡೆಯುವ ಸನ್ನಿವೇಶವಿದ್ದು, ಜಿಲ್ಲೆಯಲ್ಲಿ ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಗಲಭೆ ಸೃಷ್ಟಿಸಿ, ಮತಬ್ಯಾಂಕ್ ಸ್ಥಾಪಿಸಿಕೊಳ್ಳುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.

ನೈತಿಕವಾಗಿ ಆಡಳಿತ ನಡೆಸುವದು ಬಿಜೆಪಿಗೆ ಗೊತ್ತಿಲ್ಲ. ವಾಮಮಾರ್ಗದಲ್ಲಿ ಗ್ರಾಮ ಪಂಚಾಯಿತಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಕುತಂತ್ರ ಮಾಡಲಾಗುತ್ತಿದೆ. ಅಧಿಕಾರ ಮುಗಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ, ಬಿಜೆಪಿ ಕಾರ್ಯಕರ್ತರ ಆಡಳಿತವನ್ನು ಸ್ಥಾಪಿಸುವ ಪ್ರಜಾಪ್ರಭುತ್ವ ವಿರೋಧಿ ಕಾನೂನು ತರಲು ಹುನ್ನಾರ ನಡೆಸಲಾಗುತ್ತಿದೆ. ಇಂತಹ ಕಾನೂನು ಜಾರಿಗೆ ತಂದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರಲ್ಲದೇ, ಮುಂದಿನ ಚುನಾವಣೆಯವರೆಗೆ ಈಗಿರುವ ಆಡಳಿತ ಮಂಡಳಿಯನ್ನೇ ಮುಂದುವರಿಸಬೇಕು ಎಂದರು.

ಭಾನುವಾರ ರಂಜಾನ್ ಹಬ್ಬವಿದ್ದು, ಸರಕಾರ ಅಂದು ಕಫ್ರ್ಯೂ ಘೋಷಿಸಿದೆ. ಅಲ್ಪಸಂಖ್ಯಾತರು ಹಬ್ಬ ಆಚರಿಸಿಕೊಳ್ಳಲು ಜಿಲ್ಲಾಡಳಿತ ಬಂದ್ ಸಡಿಲಿಸಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಮನವಿ ಮಾಡಿದರು. ಅಲ್ಪಸಂಖ್ಯಾತರೊಬ್ಬರ ಲಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಅತೀ ಶೀಘ್ರ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಹಾಗೂ ಅಲ್ಪಸಂಖ್ಯಾತರು ರಂಜಾನ್ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿ, ಸಹಕಾರ ಸಂಘಗಳಿಗೆ ಹೊರಡಿಸಿದ್ದ ಆದೇಶವನ್ನು ಸರ್ಕಾರ ಇದೀಗ ಹಿಂಪಡೆದಿದೆ. ಈಗಾಗಲೇ ಹಲವು ರೈತರು ಕೆಸಿಸಿ ಸಾಲಕ್ಕೆ ಶೇ. 7ರ ಬಡ್ಡಿ ಕಟ್ಟಿದ್ದಾರೆ. ಬಿಜೆಪಿ ಸರ್ಕಾರ ಅವೈಜ್ಞಾನಿಕ ಆದೇಶಗಳನ್ನು ಹೊರಡಿಸುವ ಮೂಲಕ ಸಹಕಾರ ಕ್ಷೇತ್ರವನ್ನು ನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹಿದ್ ಖಾನ್, ಅಸಂಘಟಿತ ಕಾರ್ಮಿಕರ ರಾಜ್ಯ ಸಮಿತಿ ಸದಸ್ಯ ಅಶ್ರಫ್ ಉಪಸ್ಥಿತರಿದ್ದರು.