ಗೋಣಿಕೊಪ್ಪಲು, ಮೇ 22: ಬಿಪಿಎಲ್ ಪಡಿತರ ಚೀಟಿಗೆ ಸಿಕ್ಕಿದ್ದ ಅಕ್ಕಿಯನ್ನು ಮಾರ್ಜಿನ್ ಫ್ರೀ ಅಂಗಡಿಗೆ ತಂದು ಮಾರಾಟ ಮಾಡುವ ಸಂದರ್ಭ ಸಿಕ್ಕಿಬಿದ್ದ ಘಟನೆ ಗೋಣಿಕೊಪ್ಪ ಮುಖ್ಯ ರಸ್ತೆಯ ಸಿ.ಹೆಚ್. ಸೂಪರ್ ಮಾರ್ಕೆಟ್‍ನಲ್ಲಿ ನಡೆದಿದೆ. ಬಿಪಿಎಲ್ ಪಡಿತರ ಅಕ್ಕಿಯನ್ನು ಕೆ.ಜಿ.ಗೆ ರೂ.18ರಂತೆ ಖರೀದಿಸಿದ ಅಂಗಡಿ ಮಾಲೀಕರು ಈ ಹಣಕ್ಕೆ ಅಂಗಡಿಯಲ್ಲಿದ್ದ ದಿನಸಿ ಸಾಮಗ್ರಿಗಳನ್ನು ನೀಡಿದ್ದಾರೆ.ಪಡಿತರ ಅಕ್ಕಿಯನ್ನು ಕಾರಿನಲ್ಲಿ ತಂದ ವ್ಯಕ್ತಿ ಅಂಗಡಿ ಮುಂಭಾಗ ಕಾರು ನಿಲ್ಲಿಸಿ ಅಕ್ಕಿ ಚೀಲವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ಮೊಬೈಲ್ ಮೂಲಕ ಸೆರೆ ಹಿಡಿದ ನಾಗರಿಕರು ಈ ವೀಡಿಯೋವನ್ನು ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಅವರಿಗೆ ನೀಡಿದ್ದಾರೆ. ಚಲನ್ ವೀಡಿಯೋ ತುಣುಕುಗಳನ್ನು ಜಿಲ್ಲಾ ಆಹಾರ ನಿರೀಕ್ಷಕರಿಗೆ ಹಾಗೂ ಗೋಣಿಕೊಪ್ಪ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ. ಜಿಲ್ಲಾ ಆಹಾರ ನಿರೀಕ್ಷಕರ ಸೂಚನೆ ಮೇರೆಗೆ ಆಗಮಿಸಿದ ವೀರಾಜಪೇಟೆ ತಾಲೂಕು ಆಹಾರ ನಿರೀಕ್ಷಕ ಚಂದ್ರ ನಾಯಕ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ಹಾಗೂ ಪಂಚಾಯ್ತಿ ಸದಸ್ಯರುಗಳಾದ ಸುರೇಶ್ ರೈ ಸಮ್ಮುಖದಲ್ಲಿ ಮಾರ್ಜಿನ್ ಫ್ರೀ ಅಂಗಡಿಗೆ ಭೇಟಿ ನೀಡಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯುವ ಮೂಲಕ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಖ್ಯ ರಸ್ತೆಯಲ್ಲಿ ನಡೆದ ಈ ಬೆಳವಣಿಗೆಯನ್ನು ನೂರಾರು ನಾಗರಿಕರು ಕುತೂಹಲದಿಂದ ವೀಕ್ಷಿಸಿದರು.

61 ಕೆ.ಜಿ. ಪಡಿತರ ಅಕ್ಕಿಯು ಮಾರಾಟ ಮಾಡಿರುವುದಾಗಿ ಹಾಗೂ ಇದನ್ನು 18 ರೂ.ನಲ್ಲಿ ಖರೀದಿ ಮಾಡಿರುವುದಾಗಿ ಅಂಗಡಿ ಮಾಲೀಕರು ಮಾಹಿತಿ ನೀಡಿದ ಮೇರೆ ಪಡಿತರ ಅಕ್ಕಿ ಹಾಗೂ ಅಕ್ಕಿಯನ್ನು ತಂದ ಕಾರನ್ನು ವಶಪಡಿಸಿಕೊಂಡ ಗೋಣಿಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪೊಲೀಸರು ಈ ಬಗ್ಗೆ ವಿಚಾರಿಸಿದಾಗ ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಧನುಗಾಲ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರದಾರರಾದ ಸೈದು ಎಂಬವರು ಪಡಿತರ ಅಕ್ಕಿಯನ್ನು ಪಡೆದು ಇದನ್ನು ಮಾರ್ಜಿನ್ ಫ್ರೀ ಅಂಗಡಿಯಲ್ಲಿ ಮಾರಾಟ ಮಾಡಿ ಬದಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಪಿಡಿಒ ಶ್ರೀನಿವಾಸ್ ಹಾಗೂ ಆಹಾರ ನಿರೀಕ್ಷಕ ಚಂದ್ರನಾಯಕ್ ಅಕ್ಕಿಯನ್ನು ವಶ ಪಡಿಸಿಕೊಂಡು ಮಹಜರು ನಡೆಸಿದ ನಂತರ ಸಿಹೆಚ್. ಸೂಪರ್ ಮಾರ್ಕೆಟ್ ಮಾಲೀಕರ

(ಮೊದಲ ಪುಟದಿಂದ) ಮೇಲೆ ಪೊಲೀಸ್ ದೂರು ನೀಡಿ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಡವರ ಹಸಿವು ತಣಿಸಲು ಉಚಿತವಾಗಿ ನ್ಯಾಯ ಬೆಲೆ ಅಂಗಡಿಯ ಮೂಲಕ ಅಕ್ಕಿಯನ್ನು ವಿತರಿಸುವ ಮೂಲಕ ಬಡವರ ಕಷ್ಟದಲ್ಲಿ ಭಾಗಿಯಾಗಿದೆ. ಈ ಬಾರಿ ಕೊರೊನಾ ವೈರಸ್ ಹಿನೆÀ್ನಲೆಯಲ್ಲಿ ದೇಶದಾದ್ಯಂತ ಲಾಕ್‍ಡೌನ್ ಆದ ಪರಿಣಾಮ ಯಾರೂ ಕೂಡ ಹಸಿವಿನಿಂದ ಬಳಲದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ 3 ತಿಂಗಳಿಗಾಗುವಷ್ಟು ಅಕ್ಕಿಯನ್ನು ವಿತರಿಸಿತ್ತು. ರಾಜ್ಯ ಸರ್ಕಾರದಿಂದ ತಲಾ ಓರ್ವ ವ್ಯಕ್ತಿಗೆ ಮೂರು ತಿಂಗಳಿಗೆ 21 ಕೆ.ಜಿ.ಹಾಗೂ ಕೇಂದ್ರ ಸರ್ಕಾರದ ತಲಾ 10 ಕೆ.ಜಿ. ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಯ ಮೂಲಕ ಬಿಪಿಎಲ್ ಪಡಿತರದಾರರಿಗೆ ವಿತರಿಸಲಾಗಿತ್ತು. ಇದರಿಂದ ಕಷ್ಟದಲ್ಲಿದ್ದ ಕುಟುಂಬಗಳು ನಿಟ್ಟುಸಿರು ಬಿಟ್ಟಿದ್ದವು.

ಬಡ ಜನತೆಗೆ ಸಿಗುವ ಬಿಪಿಎಲ್ ಅಕ್ಕಿಯು ಈ ರೀತಿ ಕಾಳಸಂತೆಯ ಮೂಲಕ ಮಾರಾಟವಾಗುವುದನ್ನು ನಾಗರಿಕರು ಖಂಡಿಸಿದ್ದಾರೆ. ಅಲ್ಲದೆ ಅಕ್ಕಿಯನ್ನು ತಂದು ಮಾರಾಟ ಮಾಡಿದ ಪಡಿತರದಾರರ ಪಡಿತರ ಚೀಟಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

-ಹೆಚ್.ಕೆ.ಜಗದೀಶ್