ವೀರಾಜಪೇಟೆ, ಮೇ 22: ವೀರಾಜಪೇಟೆ - ಗೋಣಿಕೊಪ್ಪಲು ರಸ್ತೆಯ ಮಾಂಸ ಮಾರುಕಟ್ಟೆಯ ಬಳಿಯ ಉದ್ಯಮಿ ಶಬೀರ್ ಅಹಮ್ಮದ್ (68) ಎಂಬವರ ಮನೆಗೆ ದರೋಡೆ ಮಾಡಲು ಯತ್ನಿಸಿ ದರೋಡೆ ದುಷ್ಕರ್ಮಿಗಳಿಂದ ಮನೆಯ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿ ದರೋಡೆಕೋರರು ತಲೆಮರೆಸಿಕೊಂಡ ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ.

ಶಬೀರ್ ಅಹಮ್ಮದ್ ಕಾಫಿ, ಕರಿಮೆಣಸು ಖರೀದಿಸುವ ವ್ಯವಹಾರ ನಡೆಸುತ್ತಿದ್ದರು. ಶಬೀರ್ ತನ್ನ ಆರ್.ಸಿ.ಸಿಯ ಮೊದಲ ಅಂತಸ್ತಿನ ಮನೆಯಲ್ಲಿ ಎಂದಿನಂತೆ ನಿನ್ನೆ ರಾತ್ರಿ ತನ್ನ ಬೆಡ್ ರೂಮಿನಲ್ಲಿ ಮಲಗಿದ್ದರು. ಇಂದು ಬೆಳಗಿನ ಜಾವ 2-ಗಂಟೆಗೆ ಶಬೀರ್ ಅವರ ಮನೆಯ ಡೈನಿಂಗ್ ರೂಮಿನ ಕಿಟಿಕಿಯ ಒಂದು ಬಾಗಿಲಿನ ಕಬ್ಬಿಣದ ಗ್ರಿಲ್ಸ್‍ನ್ನು ಚಾಕ ಚಕ್ಯತೆಯಿಂದ ಕತ್ತರಿಸಿದ ದುಷ್ಕರ್ಮಿಗಳು ಒಳ ನುಗ್ಗಿ ಶಬೀರ್ ಅವರ ತಂಗಿ ಮಗ ಮಹಮ್ಮದ್ ತಾಹ(22) ಮಲಗಿದ್ದ ಬೆಡ್ ರೂಮಿಗೆ ತೆರಳಿ ಆತನು ಬೊಬ್ಬೆ ಇಡದಂತೆ ಬಾಯಿಯನ್ನು ಪ್ಲಾಸ್ಟರಿಂದ ಬಿಗಿದು ತಲೆಗೆ ಬೆಡ್‍ಶೀಟ್ ಸುತ್ತಿದ್ದಾರೆ. ಇದರ ಸದ್ದು ಕೇಳಿದ ಶಬೀರ್ ಇನ್ನೊಂದು ಬೆಡ್ ರೂಮಿನಿಂದ ಬರುವಾಗ ಮತ್ತೊಬ್ಬ ಶಬೀರ್‍ನನ್ನು ಹಿಡಿದು ನಗದು ಚಿನ್ನಾಭರಣ ಎಲ್ಲಿದೆ ಎಂದು ಕುತ್ತಿಗೆಯ ಬಳಿ ಚಾಕು ಹಿಡಿದು ಗದರಿಸಿದ್ದಾನೆ.

(ಮೊದಲ ಪುಟದಿಂದ) ಶಬೀರ್ ತಪ್ಪಿಸಿಕೊಳ್ಳುವ ಹಂತದಲ್ಲಿದ್ದಾಗ ಶಬೀರ್ ಸೇರಿದಂತೆ ಇಬ್ಬರು ಬೆಡ್ ರೂಮಿನ ಬಾಗಿಲ ಬಳಿ ಬಿದ್ದಿದ್ದಾರೆ. ಅಷ್ಟರಲ್ಲಿ ಸದ್ದು ಕೇಳಿದ ಶಬೀರ್‍ನ ಪತ್ನಿ ಕೈರುನ್ನಿಸಾ (58) ಮೊದಲು ಮಹಮ್ಮದ್ ತಾಹ ಇದ್ದ ರೂಮಿನಲ್ಲಿ ಇಬ್ಬರು ದರೋಡೆಕೋರರು ಚಾಕು ಹಿಡಿದು ಬೆದರಿಸುತ್ತಿದ್ದುದನ್ನು ನೋಡಿ ಆಜುಬಾಜುದಾರರು ಕೇಳಿಸುವಂತೆ ಜೋರಾಗಿ ಬೊಬ್ಬೆ ಮಾಡಿದ್ದಾರೆ. ಬೊಬ್ಬೆಯಿಂದ ಆಜು ಬಾಜುದಾರರು ತಕ್ಷಣ ಬರಬಹುದೆಂದು ಹೆದರಿದ ಮೂವರು ದುಷ್ಕರ್ಮಿಗಳು ಮಹಮ್ಮದ್ ತಾಹ ಹಾಗೂ ಶಬೀರ್‍ನನ್ನು ಅಲ್ಲಿಯೇ ಬಿಟ್ಟು ಮನೆಯ ಹಿಂಭಾಗದಿಂದ ಕೆಳಗೆ ಹಾರಿ ದೂರದಲ್ಲಿ ಯಾರಿಗೂ ಕಾಣದಂತೆ ನಿಲ್ಲಿಸಿದ್ದ ಕಾರಿನಲ್ಲಿ ತಲೆ ಮರೆಸಿಕೊಂಡರು ಎಂದು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರಿಗೆ ಕೈರುನ್ನಿಸಾ ತಿಳಿಸಿದರು.

ಮನೆಯ ಮಾಲೀಕ ಶಬೀರ್ ಅಹಮ್ಮದ್ ಅವರಿಗೆ ದರೋಡೆಕೋರರು ಚಾಕುವನ್ನು ತೋರಿಸಿ ಬೆದರಿಸಿದ ಸಂದರ್ಭದಲ್ಲಿ ಅಲ್ಮೇರಾದಲ್ಲಿ ರೂ 40,000 ನಗದು ಹಣ ಇದೆ ಅದನ್ನು ಬೇಕಾದರೆ ತೆಗೆದುಕೊಂಡು ಹೋಗಿ, ಪ್ರಾಣ ಹಾನಿ ಮಾತ್ರ ಮಾಡಬೇಡಿ ಎಂದು ಕೇಳಿಕೊಳ್ಳುವ ಸಮಯದಲ್ಲಿ ಪತ್ನಿಯ ಬೊಬ್ಬೆಯಿಂದ ಅವರು ಪಲಾಯನಗೈದರೆಂದು ಶಬೀರ್ ತಿಳಿಸಿದ್ದಾರೆ. ಘಟನೆಯ ಕೆಲವು ಸಮಯದಲ್ಲಿಯೇ ಶಬೀರ್ ಪೊಲೀಸ್ ಠಾಣೆಗೆ ಮೊಬೈಲ್ ಮೂಲಕ ದೂರು ನೀಡಿದಾಗ ಕೆಲ ಹೊತ್ತಿನಲ್ಲಿಯೇ ಡಿ.ವೈಎಸ್‍ಪಿ. ಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಆಗಮಿಸಿ ದೂರನ್ನು ಸ್ವೀಕರಿಸಿದರೊಂದಿಗೆ ಘಟನೆ ನಡೆದ ಸ್ಥಳದ ಮಹಜರು ನಡೆಸಿದರು.

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಪನ್ನೇಕರ್ ಇಂದು ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೀರಾಜಪೇಟೆ ಪಟ್ಟಣದಲ್ಲಿ ರಾತ್ರಿ ವೇಳೆಯಲ್ಲಿ ಗಸ್ತು ಸಂಚಾರ ಹೆಚ್ಚಿಸುವುದಾಗಿ ತಿಳಿಸಿದರಲ್ಲದೆ ಘಟನೆ ನಡೆದ ಕುರಿತು ಮೂವರಿಂದಲೂ ಚಿತ್ರಣ ಪಡೆದರು.ಶಬೀರ್ ಅವರ ಮನೆಯ ಕೆಳಗೆ ಕಾಫಿ ಖರೀದಿಯ ಮಳಿಗೆ ಇತರ ಉದ್ಯಮಗಳ ಮಳಿಗೆಗಳಿವೆ.

ದುಷ್ಕರ್ಮಿಗಳು ಮನೆಯಿಂದ ತಲೆಮರೆಸಿಕೊಳ್ಳುವ ಸಮಯದಲ್ಲಿ ಶಬೀರ್‍ಗೆ ಸೇರಿದ ರೂ. 25000 ಮೌಲ್ಯದ ಎರಡು ಮೊಬೈಲ್‍ಗಳು, ಒಂದು ಪವರ್ ಬ್ಯಾಂಕ್‍ನ್ನು ದೋಚಿದ್ದಾರೆ. ಶಬೀರ್‍ನ ಮನೆಯ ಪಕ್ಕದ ಮಳಿಗೆಯಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿದ್ದು ಅದನ್ನು ದುಷ್ಕರ್ಮಿಗಳು ತಿರುಗಿಸಿಟ್ಟಿದ್ದರು. ಮನೆಯ ಹಿಂಬದಿಯಲ್ಲಿ ಬ್ರೈಟ್ ಪಬ್ಲಿಕ್ ಶಾಲೆ ಇದ್ದು ಶಾಲೆಗೆ ರಜೆ ಇದ್ದುದರಿಂದ ಸಿ.ಸಿ.ಕ್ಯಾಮೆರಾ ಚಾಲನೆಯಲ್ಲಿರಲಿಲ್ಲವೆನ್ನಲಾಗಿದೆ.

ಕಳೆದ 20 ದಿನಗಳ ಹಿಂದೆ ವೀರಾಜಪೇಟೆ ಪಟ್ಟಣದಲ್ಲಿ ರೂ 5ಲಕ್ಷ ಮೌಲ್ಯದ ಚಿನ್ನಾಭರಣಗಳ ಕಳವು ಪ್ರಕರಣ ಇನ್ನು ಮಾಸದಿರುವ ಬೆನ್ನಲ್ಲೇ ಈ ದರೋಡೆ ಪ್ರಕರಣ ನಡೆದಿರುವುದು ಪಟ್ಟಣದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.