ಶ್ರೀ ಕೃಷ್ಣನು ಕಾವೇರಿಯ ಮಹಿಮಾ ವರ್ಣನೆಯನ್ನು ಮುಂದುವರಿಸುತ್ತಾ ರುಕ್ಮಿಣಿಗೆ ಹೇಳುತ್ತಾನೆ ಎಂದು ಶಿವನು ಪಾರ್ವತಿಗೆ ವಿವರಿಸುತ್ತಾನೆ.

ಕನಕಾಯಾಶ್ಚ ಕಾವೇರ್ಯಾಸ್ಸಂಗಮಂ ಪಾಪ ನಾಶಕಂ, ತತ್ರ ತೀರ್ಥಾನಸಂಖ್ಯಾನಿ ಪ್ರಧಾನಾನ್ಯಮಲೇ ಶೃಣು. ಬ್ರಹ್ಮತೀರ್ಥಂ, ವಿಷ್ಣುತೀರ್ಥಂ, ಸ್ಕಂದತೀರ್ಥಂ ಶುಭಪ್ರದಂ. ಶಿವತೀರ್ಥಂ, ಚಂದ್ರತೀರ್ಥಂ, ಗಜತೀರ್ಥಂ, ವಿನಾಯಕಂ. ಕಪಾಲಮೋಚನಂ ತೀರ್ಥಂ ಶಾರ್ಙಂ ಪಾಪವಿಮೋಚನಂ. ಅನಂತಂ ನಾಮ ಸಂತೀರ್ಥಂ ನಾಗತೀರ್ಥಂ ಚ ತತ್ರ ವೈ. ತಕ್ಷಕಸ್ಯ ವನಂ ಚೈವ ಪ್ರೇತಾರಣ್ಯ ಮನುತ್ತಮಂ. ಸೇವಂತೇ ತಾನಿ ಕಾವೇರೀಂ ಕನಕಾಂ ಚ ವಿಶೇಷತಃ. ಕನಕಾಸಂಗಮೇ ಸ್ನಾತ್ವಾ ನರಃ ಪಾಪೈಃ ಪ್ರಮುಚ್ಯತೇ, ತಸ್ಮಾತ್ಪುಣ್ಯತಮಂ ತೀರ್ಥಂ ಕನಕಾ ಸಂಗಮಂ ಕಲೌ, ಅನಾಯಾಸೇನ ಲಭತೇ ಮಹತ್ ಪುಣ್ಯಂ ಕಲೌ ನೃಣಾಂ, ಅಹೋ ವಿಹಾಯ ಕಾವೇರೀಂ ಕಲಿಕಲ್ಮಷ ನಾಶಿನೀಂ:-ಕನಕಾ-ಕಾವೇರಿ ಸಂಗಮವು ಪಾಪನಾಶಕವಾಗಿರುವದು. ಆ ಸಂಗಮದಲ್ಲಿ ಲೆಕ್ಕವಿಲ್ಲದಷ್ಟು ತೀರ್ಥಗಳಿವೆ. ಎಲೈ ಪಾವನೆಯೇ, ಅವುಗಳಲ್ಲಿ ಮುಖ್ಯವಾದವುಗಳ ಬಗ್ಗೆ ಹೇಳುತ್ತೇನೆ, ಕೇಳು:- ಬ್ರಹ್ಮತೀರ್ಥವೂ, ವಿಷ್ಣುತೀರ್ಥವೂ, ಶುಭದಾಯಕವಾದ ಸ್ಕಂದತೀರ್ಥವೂ, ಶಿವತೀರ್ಥವೂ, ಚಂದ್ರತೀರ್ಥವೂ, ಗಜತೀರ್ಥವೂ, ವಿನಾಯಕ ತೀರ್ಥವೂ, ಕಪಾಲಮೋಚನ ತೀರ್ಥವೂ, ಪಾಪ ವಿಮೋಚಕವಾದ ಶಾರ್ಙತೀರ್ಥವೂ, ಅನಂತವೆಂಬ ತೀರ್ಥವೂ, ನಾಗತೀರ್ಥವೂ, ತಕ್ಷಕ ವನವೂ ಹಾಗೂ ಅತ್ಯುತ್ತಮವಾದ ಪ್ರೇತಾರಣ್ಯವೂ ಅತಿ ಮುಖ್ಯವಾದವುಗಳಾಗಿವೆ. ವಿಶೇಷವಾಗಿ ಆ ತೀರ್ಥಗಳೆಲ್ಲವೂ ಕಾವೇರಿಯನ್ನೂ, ಕನಕೆಯನ್ನೂ ಆಶ್ರಯಿಸುವವು.. ಮಾನವನು ಕನಕಾ ಸಂಗಮದಲ್ಲಿ ಸ್ನಾನ ಮಾಡುವದರಿಂದ ಪಾಪ ವಿಮುಕ್ತನಾಗುತ್ತಾನೆ. ಕಾವೇರಿ, ಕನಕಾ, ಸುಜ್ಯೋತಿಕಾ ಸಂಗಮವು ಕಲಿಯುಗದಲ್ಲಿ ಅತ್ಯಂತ ಪುಣ್ಯಪ್ರದವಾದ ತೀರ್ಥವಾಗಿರುವದು. ಆಹಾ, ಏನಾಶ್ಚರ್ಯ ಸ್ವಲ್ಪವೂ ಆಯಾಸವಿಲ್ಲದೆ, ಮಹತ್ತಾದ ಪುಣ್ಯವು ಕಲಿಯುಗದಲ್ಲಿ ಮನುಷ್ಯರಿಗೆ ಲಭ್ಯವಾಗುವದು. ಅದೃಷ್ಟಹೀನರಾದ ಮಾನವರು ಮಾತ್ರ ದಾರಿದ್ರ್ಯವನ್ನೂ, ಪಾಪವನ್ನೂ ಹೋಗಲಾಡಿ ಸುವ ಕಾವೇರಿಯನ್ನು ಬಿಟ್ಟು ಅಜ್ಞಾನಿಗಳಾಗಿ ಪ್ರಯೋಜನವಿಲ್ಲದೆ ಭೂಮಿಯಲ್ಲಿ ತಿರುಗಾಡುತ್ತಿರುವರಲ್ಲಾ....

ಪ್ರಥಮಂ ಕುಂಡಿಕಾ ತೀರ್ಥಂ ಪುನರ್ಜಾತಂ ದ್ವಿತೀಯಕಂ. ಗೋವತ್ಸಕ ತಟಾಕಂ ಚ ಬ್ರಹ್ಮಾಣೀ ಸಂಗಮಂ ತಥಾ. ಕರಸ್ಥಾ ಸಂಗಮಂ ತದ್ವತ್ ವಸುಮತ್ಯಾಸ್ತು ಸಂಗಮಂ. ಫಣಿಯೋಗಮುಮಾಯೋಗಂ ಕನಕಾ ಸಂಗಮಂ ತಥಾ. ಸ್ವಾಹಾಯೋಗಂ ಸ್ವಧಾಯೋಗಂ ಕಾವೇರ್ಯಾಸ್ಸಂಗಮಂ ಪುನಃ ವೈಣವ್ಯಾಃ ಸಂಗಮಂ ಪಶ್ಚಾತ್ ಭಾರ್ಗವ್ಯಾಃ ಸಂಗಮಂ ಪುನಃ. ವೈತವತ್ಯಾ ಯುತಂ ಶ್ರೇಷ್ಠಂ ರುದ್ರಾಣೀ ಸಂಗಮಂ ತಥಾ. ಹರಿಶ್ಚಂದ್ರಂ ಪರಂ ತೀರ್ಥಂ ಹಿಮತ್ಯಾಸ್ತು ಸಂಗಮಂ. ವಲಂಬುರೀ ಪಿತೃಮತೀ ಲಾವಣೀ ಲವಣೀ ತಥಾ. ಕೌಬೇರಂ ದುರ್ಗಮಾಗಸ್ತ್ಯಂ ನವನೀತಾಯುತಂ ಪುನಃ. ದಂತಿತೀರ್ಥಂ ಗೋಮುಖಂ ಚ ಗೌರೀಪಾದಂ ಸುಧಾಲಯಂ. ಶಿಲಾಭೇದಂ, ಕರ್ಣತೀರ್ಥಂ, ಚಂದ್ರಪುಷ್ಕರಣೀ ತಥಾ. ವೇದಾರಣ್ಯಂ, ಕುಂಭಕೋಣಂ, ಮಧ್ಯಾರ್ಜುನಮತಃ ಪರಂ. ಶಿವತೀರ್ಥಾಸ್ಪದಂ ತದ್ವತ್ ಅಂಭೋಧೇಃ ಸಂಗಮಂ ಶುಭಂ ಅಸಹ್ಯಸಾಗರಾಂತಾ ಸಾ ಕಾವೇರೀ ತೀರ್ಥರೂಪಿಣೀ ಕನಕಾ ಪುಣ್ಯಸಲಿಲಾ ಕ್ಷೇತ್ರಂ ತದ್ಧಿ ಜಗನ್ಮಯೇ:-ತೀರ್ಥಗಳ ಪೈಕಿ ಕುಂಡಿಕಾ(ತಲಕಾವೇರಿಯಲ್ಲಿ) ತೀರ್ಥವು ಮೊದಲನೆಯದಾಗಿದೆ. ಎರಡನೆಯದಾಗಿ ಪುನರ್ಜಾತ ತೀರ್ಥವಿದೆ. ಬಳಿಕ ಗೋವತ್ಸಕ ತಟಾಕವೂ, ಹಾಗೆಯೇ ಬ್ರಹ್ಮಾಣೀ ಸಂಗಮವೂ, ಕರಸ್ಥಾ ಸಂಗಮವೂ, ವಸುಮತೀ ಸಂಗಮವೂ, ಫಣಿಯೋಗವೂ, ಉಮಾಯೋಗವೂ, ಕನಕಾ ಸಂಗಮವೂ (ಭಾಗಮಂಡಲ ದಲ್ಲಿ), ಶೈಲೂಷೀ ಸಂಗಮವೂ, ಮತ್ತೆ ಕಾವೇರೀ ಸಂಗಮವೂ, ವೈಣವೀ ಸಂಗಮವೂ, ಭಾರ್ಗವೀ ಸಂಗಮವೂ, ವೈತವತೀ ಸಂಗಮವೂ, ಶ್ರೇಷ್ಠವೆನಿಸಿದ ರುದ್ರಾಣೀ ಸಂಗಮವೂ, ಹರಿಶ್ಚಂದ್ರ (ಹರಿಶ್ಚಂದ್ರ ದೇವಾಲಯ)ವೆಂಬ ಉತ್ತಮ ತೀರ್ಥವೂ, ಹಿಮವತೀ ಸಂಗಮವೂ, ವಲಂಬುರಿಯೂ(ಬಲಮುರಿ), ಪಿತೃಮತಿಯೂ, ಲಾವಣಿಯೂ, ಲವಣಿಯೂ, ಕೌಬೇರದುರ್ಗವೂ(ಈಗಿನ ಗುಹ್ಯ ಕ್ಷೇತ್ರ), ಅಗಸ್ತ್ಯತೀರ್ಥವೂ, ನವನೀತಾ ಸಂಗಮವೂ, ದಂತಿತೀರ್ಥವೂ, ಗೋಮುಖವೂ, ಗೌರೀಪಾದವೂ, ಸುಧಾಲಯವೂ, ಶಿಲಾಭೇದವೂ, ಕರ್ಣತೀರ್ಥವೂ, ಚಂದ್ರಪುಷ್ಕರಣಿಯೂ, ವೇದಾರಣ್ಯವೂ, ಕುಂಭಕೋಣವೂ(ತಮಿಳುನಾಡು), ಮಧ್ಯಾರ್ಜುನವೂ, ಶಿವತೀರ್ಥವೂ ಹಾಗೂ ಸಮುದ್ರ ಸಂಗಮವೂ(ಬಂಗಾಳಕೊಲ್ಲಿ) ಇದೆ. ಸಹ್ಯ ಪರ್ವತದಿಂದ ಸಮುದ್ರದವರೆಗೂ ಕಾವೇರಿಯು ತೀರ್ಥರೂಪಿಣಿ ಯಾಗಿರುವಳು. ಎಲೈ, ಜಗದ್ರೂಪಿಣಿಯೇ, ಕನಕೆಯು ಪವಿತ್ರವಾದ ಉದಕವುಳ್ಳವಳು, ಅದೂ ಒಂದು ಕ್ಷೇತ್ರವೇ ಆಗಿದೆ ಎಂದು- ಶ್ರೀ ಕೃಷ್ಣನು ಹೇಳಿದ ಈ ಪುಣ್ಯ ವಿವರಣೆ ಕೇಳಿ ಆತನ ಪ್ರಿಯ ಭಾರ್ಯೆ ರುಕ್ಮಿಣಿ ವಿಸ್ಮಿತವದನಳಾದಳು ಎಂದು ಶಿವನು ಪಾರ್ವತಿಯೊಂದಿಗೆ ನುಡಿದನು. ಬಳಿಕ ಶಿವನು ಕಾವೇರಿಯ ಮಹಿಮೆಯ ಕುರಿತು ಪತ್ನಿಯ ಕುತೂಹಲ ತಣಿಸಲು ಮತ್ತೆಯೂ ವಿವರಿಸಿದನು” ಪಾರ್ವತಿಯೇ ಕೇಳು, ಈ ಹಿಂದೆ ಯತಿಶ್ರೇಷ್ಠನಾದ ಶ್ಶೇನ ಎಂಬಾತನು ಮುಕ್ತಿಪಥದತ್ತ ಚಿಂತಿಸಿ ತೀರ್ಥ ಯಾತ್ರೆ ಕೈಗೊಂಡನು. ಆ ಸಂದರ್ಭ ಆತನಿಗೆ ತ್ರಿಜಟನೆಂಬ ರಾಜನು ಎದುರಾದನು. ತ್ರಿಜಟನು ಶ್ಯೇನನಿಗೆ ಪ್ರಣಾಮ ಮಾಡಿ ಕೇಳಿದನು:- ಯತಿಶ್ರೇಷ್ಠನೇ, ಪುಣ್ಯಫಲ ನೀಡುವ ತೀರ್ಥಗಳಲ್ಲೆಲ್ಲಾ ಅತಿ ಶ್ರೇಷ್ಠವಾದ ತೀರ್ಥವು ಯಾವದು? ನದಿಗಳಲ್ಲೆಲ್ಲಾ ಶ್ರೇಷ್ಠವಾದ ನದಿಯು ಯಾವದು ಎಂದು ಮಾರ್ಗದರ್ಶನ ನೀಡುವಂತೆ ಕೋರಿದನು. ಅದಕ್ಕೆ ಯತಿವರ್ಯನಾದ ಶ್ಯೇನನು ತ್ರಿಜಟ ರಾಜನನ್ನು ದ್ದೇಶಿಸಿ ಹೇಳುತ್ತಾನೆ:” ರಾಜ, ಸಾಧುಗಳ ದರ್ಶನವೇ ತೀರ್ಥವು, ಅದೇ ಮಾನವರಿಗೆ ಪುಣ್ಯಪ್ರದ ವಾಗಿರುವದು. ಅದಲ್ಲದೆ, ಅನ್ಯರ ಮನಸ್ಸಿಗೆ ಪ್ರೀತಿಯನ್ನುಂಟು ಮಾಡುವ ಮಾತೂ ತೀರ್ಥ ಎನಿಸಿ ಕೊಳ್ಳುತ್ತದೆ. ನಿರ್ಮಲವಾದ ಮನಸ್ಸು ತೀರ್ಥಕ್ಕಿಂತಲೂ ಅಧಿಕ ತೀರ್ಥವೆಂದು ಹೇಳಲ್ಪಟ್ಟಿದೆ. ಎಲೈ ರಾಜನೇ, ತ್ರಿಲೋಕದಲ್ಲಿ ಪುಣ್ಯ ತೀರ್ಥಗಳು ಅಧಿಕ ಇವೆ. ಹಾಗೆಯೇ, ಪುಣ್ಯಪ್ರದ ಆಶ್ರಮ ಗಳೂ, ಕ್ಷೇತ್ರಗಳೂ ನದಿಗಳೂ ಇವೆ.

ನದಿಗಳಲ್ಲಿ ಗಂಗೆ ಮೊದಲ್ಗೊಂಡು,

ನರ್ಮದೆ, ಯಮುನೆ, ಸರಸ್ವತಿ, ಕಾವೇರಿ, ಗೌತಮಿ ನದಿಗಳು ಉತ್ತಮವೆನಿಸಿವೆ. ಅಲ್ಲದೆ, ತುಂಗಭದ್ರೆ, ಕೃಷ್ಣವೇಣಿ, ಗಂಡಕಿ, ಭವನಾಶಿನಿ, ಘೃತಮಾಲೆ, ವೇಗವತಿ, ಮಹಾನದಿಯಾದ ತಾಮ್ರಪರ್ಣಿ ಇವೆಲ್ಲಾ ಜನರ ಪಾಪಗಳನ್ನು ಕೂಡಲೇ ಹೋಗಲಾಡಿಸುವವಲ್ಲದೆ, ಪೂರ್ವ ಪಶ್ಚಿಮ ಸಮುದ್ರಗಳಿಗೆ ಪ್ರವಹಿಸುವವು. ಸರ್ವಾಸಾಂ ಸರಿತಾಂ ಶ್ರೇಷ್ಠಾ ಕಾವೇರೀ ಕಲಿನಾಶಿನಿ, ಅಸಹ್ಯಸಾಗರಾಂತಂ ಸಾ ಸರ್ವತೀರ್ಥಮಯೀ ನದೀ, ಜಗತ್ಸ್ರಷ್ಟುಸ್ಸುತಾ ದಿವ್ಯಾ ಲೋಪಾಮುದ್ರೇತಿ ಸಂಜ್ಞಿಕಾ, ಅಗಸ್ತ್ಯಸ್ಯ ಮುನೇಃ ಪತ್ನೀ ಸರ್ವಭೂತಹಿತೈಷಿಣೀ, ಯಯೇದಂ ಧಾರ್ಯತೇ ವಿಶ್ವಂ ಮಯಾ ಸಮ್ಮೋಹಿತಂ ಜಗತ್, ಸಾ ದತ್ತಾ ಬ್ರಹ್ಮಣಾ ಪೂರ್ವಂ ಕವೇರಾಯದ್ವಿಜಾತಯೇ ಕವೇರತನಯಾತ್ವಾಚ್ಚ ಕಾವೇರೀತಿಚ ವಿಶ್ರುತಾ, ಗಂಗಾಸ್ನಾನಾಚ್ಛುದ್ಧಿಕರೀ ದರ್ಶನಾನ್ನರ್ಮದಾ ನದೀ, ಕಾವೇರೀ ಸ್ಮರಣಾತ್ಪುಂಸಾಂ ಸಂಸಾರ ಮಲನಾಶಿನೀ. ತ್ರಿರಾತ್ರಂ ಜಾಹ್ನವೀ ತೀರೇ, ಪಂಚರಾತ್ರಂತು ಯಾಮುನೇ, ಸದ್ಯಃ ಪುನಾತಿ ಕಾವೇರೀ ಪಾಪಮಾಮರಣಾಂತಿಕಂ. ಕಾವೇರಿಕಾ ಪುಷ್ಕರಿಣೀ ಪಂಚಾಶತ್ಕೋಟಿ ತೀರ್ಥಕಾ, ಮೋಕ್ಷಪ್ರದಾ ಮನುಷ್ಯಾಣಾಂ ನದೀಣಾಂ ಜನನೀ ಸ್ಮøತಾ.

ಪುಣ್ಯಾಘಮರ್ಷಣಶತೈರ್ಗಂಗಾಪಾಪಂ ಪುನಾತ್ಯಲಂ, ಕಾವೇರೀ ಶ್ರವಣಾತ್ಪುಂಸಾಂ ಅಘ ಹೇತಿಷ ವಿಶ್ರುತಾ. ಕೀರ್ತನಾದ್ದರ್ಶ ನಾತ್ಸ್ನಾನಾತ್ಸ್ಪರ್ಶನಾತ್ಸೇವನಾನ್ನøಣಾಂ, ಗಂಗಾ ಶ್ರೇಯಸ್ಕರೀ ನಿತ್ಯಂ ಕಾವೇರೀ ಸ್ಮರಣಾದಪಿ. ಕಾವೇರೀ ಪುಣ್ಯಸಲಿಲಾ ಯತ್ರ ಯತ್ರ ಗತಾ ನದೀ, ಮಹತ್ ಕ್ಷೇತ್ರಂ ತತ್ರ ತತ್ರ ಭೂರಿಪುಣ್ಯಫಲಪ್ರದಂ.

ಸಹ್ಯಪರ್ವತದಿಂದ ಸಮುದ್ರದವರೆಗೆ ಕಾವೇರಿಯು ದಾರಿದ್ರ್ಯ ನಾಶಿನಿಯೂ, ಸರ್ವ ತೀರ್ಥಸ್ವರೂಪಿಣಿಯಾದ ನದಿಯೂ ಆಗಿರುವ ಕಾರಣ ಶ್ರೇಷ್ಠಳೆನಿಸಿರುವಳು. ಅವಳು ಸೃಷ್ಟಿಕರ್ತನ ಪುತ್ರಿಯಾಗಿದ್ದು, ಲೋಪಾಮುದ್ರಾ ಎಂಬ ದಿವ್ಯನಾಮವನ್ನು ಹೊಂದಿರುವಳು.ಅಲ್ಲದೆ, ಅಗಸ್ತ್ಯನ ಪತ್ನಿ ಎನಿಸಿ ಸರ್ವಜೀವಿಗಳಿಗೂ ಹಿತಕಾರಿಣಿಯೆನಿಸಿರು ವಳು. ಪೂರ್ವದಲ್ಲಿ ಬ್ರಹ್ಮದೇವನು ವಿಶ್ವಾಧಾರೆಯೂ, ವಿಶ್ವ ಮೋಹಕಳೂ ಆದ ಪುತ್ರಿಯನ್ನು ಕವೇರನೆಂಬ ವೇದಜ್ಞನಿಗೆ ಕೊಟ್ಟನು. ಕವೇರನಿಗೆ ಮಗಳಾದುದರಿಂದ ಅವಳು ಕಾವೇರಿಯೆಂದು ವಿಖ್ಯಾತೆ ಯಾದಳು. ಗಂಗೆಯು ಸ್ನಾನದಿಂದ, ನರ್ಮದೆಯು ದರ್ಶನದಿಂದ, ಕಾವೇರಿಯು ಸ್ಮರಣೆಯಿಂದ ಮಾನವರ ಸಾಂಸಾರಿಕ ಪಾಪಗಳನ್ನು ಹೋಗಲಾಡಿಸುವರು. ಗಂಗಾ ತೀರದಲ್ಲಿ ಮೂರು ರಾತ್ರಿಯೂ, ಯಮುನಾ ತಟದಲ್ಲಿ ಐದು ರಾತ್ರಿಯೂ, ತಂಗುವದರಿಂದ ಪಾಪಗಳು ಪರಿಹಾರ ಆಗುವವು. ಕಾವೇರಿಯ ದಡದಲ್ಲಿ ಒಂದು ಕ್ಷಣ ಕಾಲ ತಂಗಿದರೆ ಮರಣ ಪರ್ಯಂತ ಒಟ್ಟಾದ ಪಾಪಗಳೆಲ್ಲವೂ ನಿರ್ಮೂಲವಾಗುವವು. ಪುಷ್ಕರಣಿಗಳಿಂದ ಕೂಡಿರುವ ಕಾವೇರಿಯು ಐವತ್ತು ಕೋಟಿ ತೀರ್ಥಗಳಿಂದ ಕೂಡಿರುವಳು. ಅಲ್ಲದೆ, ಮಾನವರಿಗೆ ಮೋಕ್ಷವನ್ನು ನೀಡುವಳೆಂದೂ, ನದಿಗಳ ತಾಯಿಯೆಂದೂ ಹೇಳಲ್ಪಡುವಳು.

ಪುಣ್ಯಕರವಾದ ಅಘಮರ್ಷಣ ಸೂಕ್ತವನ್ನು ನೂರು ಬಾರಿ ಜಪಿಸಿ, ಗಂಗೆಯಲ್ಲಿ ಸ್ನಾನ ಮಾಡಿದರೆ ಅವಳು ಪಾಪವನ್ನು ಪರಿಹರಿಸಿ ರಕ್ಷಿಸುವಳು. ಕಾವೇರಿಯಾದರೋ ಕಾವೇರಿ ಎಂಬ ನಾಮೋಚ್ಚಾರಣೆಯ ಶ್ರವಣ ಮಾತ್ರದಿಂದ ಜನರ ಪಾಪವನ್ನು ಪರಿಹರಿಸುವಳು ಎಂದು ಪ್ರಖ್ಯಾತಿಗೊಂಡಿರುವಳು. ಗಂಗೆಯು ಕೀರ್ತನ, ದರ್ಶನ, ಸ್ನಾನ. ಸ್ಪರ್ಶನ ಹಾಗೂ ಸೇವನೆಗಳಿಂದ ಮನುಜರಿಗೆ ಶ್ರೇಯಸ್ಸನ್ನುಂಟು ಮಾಡುವಳು. ಆದರೆ, ಕಾವೇರಿಯು ಅವಳ ನಿತ್ಯ ಸ್ಮರಣೆ ಮಾತ್ರದಿಂದ ಮನುಜರಿಗೆ ಶ್ರೇಯಸ್ಸನ್ನು ಉಂಟು ಮಾಡುವಳು. ಪವಿತ್ರ ನದಿಯಾದ ಕಾವೇರಿಯು ಹರಿಯುತ್ತಿರುವ ಪ್ರತಿಯೊಂದು ಸ್ಥಳದಲ್ಲಿಯೂ ಪುಣ್ಯಫಲಗಳನ್ನು ನೀಡುವ ಪುಣ್ಯ ಕ್ಷೇತ್ರಗಳು ಇರುವುವು. ಯತಿಶ್ರೇಷ್ಠನಾದ ಶ್ಯೇನನಿಂದ ತ್ರಿಜಟ ರಾಜನು ಕಾವೇರಿಯ ಈ ಮಾಹಾತ್ಮೈಯನ್ನು ಆಲಿಸಿ ಕಾವೇರಿಯನ್ನೇ ನಿತ್ಯ ಸ್ಮರಿಸುತ್ತಾ, ಸೇವಿಸುತ್ತಾ ಮೋಕ್ಷವನ್ನು ಹೊಂದಿದನು ಎಂದು ಪರಶಿವನು ತನ್ನ ಪತ್ನಿ ಪಾರ್ವತಿಗೆ ತಿಳಿಸಿದನು.

( ಪಂಚಮೋಧ್ಯಾಯದ ಉಳಿಕೆ ಭಾಗ, ಷಷ್ಠೋಧ್ಯಾಯ ಹಾಗೂ ಸಪ್ತಮೋಧ್ಯಾಯಗಳು ಮುಗಿದವು. ಕೃಪೆ; ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮ್ಯೆ. ಅನುವಾದಕರು: ದಿ.ಟಿ.ಪಿ ನಾರಾಯಣಾಚಾರ್ಯರು)