ಮಡಿಕೇರಿ, ಮೇ 22: ಮಾನ್ಯ ಸಚಿವರೇ.., ‘ಶಂಖದಿಂದ ಬಂದರೆ ಮಾತ್ರ ತೀರ್ಥ’ ಎಂಬ ಮಾತಿದೆ, ನಮ್ಮೂರಿಗೆ ತೆರಳುವ ಹಟ್ಟಿ - ಹಮ್ಮಿಯಾಲ ಮಾರ್ಗದ ಮೂರು ಸೇತುವೆಗಳ ಅಡಿ, 2018ರ ಮಳೆಯಿಂದ ಬೃಹತ್ ಗಾತ್ರದ ಮರಗಳು ಅಪ್ಪಳಿಸಿ ಹಾನಿ ಉಂಟು ಮಾಡುತ್ತಿವೆ. ಈ ಬಗ್ಗೆ ಎಷ್ಟು ಹೇಳಿದರೂ ಅರಣ್ಯಾಧಿಕಾರಿಗಳು ತೆರವುಗೊಳಿಸಿಲ್ಲ. ಮೊನ್ನೆ ಮಳೆಯಿಂದ ಮತ್ತೆ ಅದೇ ಸಮಸ್ಯೆಯಾಗಿದೆ. ತಾವು ಈ ಮರಗಳನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿ ತೆರವುಗೊಳಿಸದಿದ್ದರೆ, ಮುಂದೆ ನಾನೇ ಧರಣಿ ಕೂರುವೆ ಎಂದು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರು ಇಂದಿನ ಸಭೆಯಲ್ಲಿ ಗಮನ ಸೆಳೆದರು.

ಅಪ್ಪಚ್ಚು ರಂಜನ್ ಸಾಥ್ : ಈ ವೇಳೆ ಧನಿಗೂಡಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಅರಣ್ಯಾಧಿಕಾರಿಗಳಿಂದ ಈ ಕೆಲಸ ಆಗದಿದ್ದರೆ, ಮರಗಳ್ಳರು ತೆರವುಗೊಳಿಸುವ ಕೆಲಸ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಚಿವರ ಎಚ್ಚರಿಕೆ : ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ, ಮೂರು ದಿನಗಳಲ್ಲಿ ಮರ ತೆರವುಗೊಳಿಸದಿದ್ದರೆ ಹುದ್ದೆಗೆ ಕುತ್ತು ತಂದುಕೊಳ್ಳುತ್ತೀರಾ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಸಿದರು.

ಅಲ್ಲದೆ, ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದು, ಕೇವಲ ಮುಂಬಡ್ತಿಗಾಗಿ ವಿವಿಧ ಆಂತರಿಕ ವಿಭಾಗಗಳನ್ನು ಸೃಷ್ಟಿಸಿಕೊಂಡಿರುವದು ಅರಿವಿಗೆ ಬಂದಿದೆ. ಈ ಸಂಬಂಧ ಸಧ್ಯದಲ್ಲೇ ಪರಿಶೀಲಿಸಿ ಅವಶ್ಯಕ ಹುದ್ದೆಗಳಿಗೆ ಸೀಮಿತ ಕ್ರಮಕೈಗೊಳ್ಳಲಾಗುವದು ಎಂದು ಸುಳಿವು ನೀಡಿದರು.