ಸೋಮವಾರಪೇಟೆ,ಮೇ 22: ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡುವ ಪ್ರವೃತ್ತಿ ನಡೆಯುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಚಿವ ವಿ.ಸೋಮಣ್ಣ ಅವರ ಉಪಸ್ಥಿತಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆಗ್ರಹಿಸಿದರು.
ಜಂಬೂರು ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭ, ಜಿಲ್ಲಾ ಪೊಲೀಸ್ ವರಿಷ್ಠಾಧಿಗಳೊಂದಿಗೆ ಮಾತನಾಡಿದ ಶಾಸಕ ರಂಜನ್, ಕೊಡಗಿನಲ್ಲಿ ಕೊಡವ ಮತ್ತು ಗೌಡ ಜನಾಂಗದ ಬಗ್ಗೆ ಕೆಲವರು ಅವಹೇಳನಕಾರಿಯಾಗಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದು, ಇದರಿಂದಾಗಿ ಸಾಮರಸ್ಯ ಹಾಳಾಗುವ ಸಂಭವವಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸ ಬೇಕೆಂದು ರಂಜನ್ ಒತ್ತಾಯಿಸಿದರು.
ಇದರೊಂದಿಗೆ ಕೊಡಗಿನ ಹುಡುಗರು, ಕೊಡಗಿನ ಕುವರರು, ಹಿತಚಿಂತಕರು ಎಂಬಿತ್ಯಾದಿ ಹೆಸರಿನಲ್ಲಿ ಫೇಸ್‍ಬುಕ್ ಖಾತೆ ತೆರೆದು ಅನಾವಶ್ಯಕ ಆರೋಪ, ಅವಹೇಳನಕಾರಿ ಪೋಸ್ಟ್‍ಗಳನ್ನು ಹಾಕುತ್ತಿದ್ದು, ಇಂತಹವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್ ಅವರಿಗೆ ಹೇಳಿದರು.
ಸಮಾಜದಲ್ಲಿ ಯಾರೇ ಸಾಮರಸ್ಯ ಕದಡಲು ಮುಂದಾದರೆ, ಅವಹೇಳನಕಾರಿ ಪೋಸ್ಟ್‍ಗಳನ್ನು ಹಾಕಿದರೆ ದೂರು ಬಂದಾಕ್ಷಣ ಕಟ್ಟುನಿಟ್ಟಿನ ಕ್ರಮ ವಹಿಸಿ ಎಂದು ಉಸ್ತುವಾರಿ ಸಚಿವ ಸೋಮಣ್ಣ ಅವರು ನಿರ್ದೇಶನ ನೀಡಿದರು.