ಶನಿವಾರಸಂತೆ, ಮೇ 22: ಶನಿವಾರಸಂತೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ರಂಜಾನ್ ಹಬ್ಬದ ಬಗ್ಗೆ ಶಾಂತಿ ಸಭೆಯ ಅಧ್ಯಕ್ಷತೆಯನ್ನು ಡಿವೈಎಸ್ಪಿ ಶೈಲೇಂದ್ರ ಅವರು ವಹಿಸಿ ಮಾತನಾಡಿದರು.
ಕೊಡಗು ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯಾಗಿದ್ದು, ಇಲ್ಲಿನ ಪ್ರತಿಯೊಬ್ಬ ನಾಗರಿಕರು ಕೊರೊನಾ ಹೋರಾಟಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದ್ದು, ಮುಂದೆ ಬರುವ ರಂಜಾನ್ ಹಬ್ಬವನ್ನು ಸರಕಾರದ ಮತ್ತು ವಕ್ಫ್‍ಬೋರ್ಡಿನ ನಿರ್ದೇಶನದಂತೆ ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸುವಂತೆ ಸೂಚಿಸಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಆದಿಲ್ ಪಾಶಾ ಅವರು ಮಾತನಾಡಿ, ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಿದ್ದ ಸಂದರ್ಭ ಬಹಳ ಬಂದೋಬಸ್ತ್‍ಯಿದ್ದು, ನಂತರ ಪೀಡಿತರ ಸಂಖ್ಯೆ ಹೆಚ್ಚಾದ ಸಂದರ್ಭ ಮದ್ಯದಂಗಡಿಗಳನ್ನು ತೆರೆದಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಅಪಘಾತಗಳಾಗಿ ಅನೇಕ ಸಾವು - ನೋವುಗಳುಂಟಾಗಿ ಸಾಮಾಜಿಕ ಅಂತರವೇ ಇಲ್ಲದಂತಾಗಿದೆ. ಇದನ್ನು ಮುಚ್ಚಿಸುವಂತೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಮಾಜಿ ಜಿ.ಪಂ. ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿ, ಶನಿವಾರಸಂತೆ ನಾಗರಿಕರು ಸಾಮರಸ್ಯದಿಂದ ಬದುಕುತ್ತಿದ್ದು, ಇದು ಹೀಗೆಯೇ ಮುಂದುವರೆಯಲಿದೆ ಎಂದರು. ಕಾಂಗ್ರೆಸ್ ನಾಯಕರುಗಳಾದ ಶರತ್‍ಶೇಖರ್, ಬಿ.ಟಿ. ರಂಗಸ್ವಾಮಿ, ದಲಿತ ಮುಖಂಡ ಈರಪ್ಪ, ಪ್ರಮುಖರಾದ ಎಸ್.ಡಿ. ಅರವಿಂದ್, ಶಾಹಿದ್, ಅಬ್ದುಲ್ ರಜಾಕ್, ಸೈಯದ್ ಅಹಮದ್, ಹಮೀದ್, ಹನೀಫ್, ಅಕ್ಮಲ್ ಪಾಶ, ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಕೃಷ್ಣನಾಯಕ್, ಎಎಸ್‍ಐಗಳಾದ ಗೋವಿಂದ್, ಶಿವಲಿಂಗ, ಸಿಬ್ಬಂದಿಗಳಾದ ಬೋಪಣ್ಣ, ಮುರುಳಿ, ವಿನಯ, ಶಶಿ, ರಾಧ, ಪೂರ್ಣಿಮ, ಸವಿತ, ಸೋನಿ, ಉಷಾ ಹಾಜರಿದ್ದು, ಪಿ.ಎಸ್.ಐ. ಕೃಷ್ಣನಾಯಕ್ ಸ್ವಾಗತಿಸಿ ವಂದಿಸಿದರು.