ಮಡಿಕೇರಿ, ಮೇ 22: ಕೊಡಗಿನಲ್ಲಿ ಸಂಭವಿಸಿರುವ 2018ರ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ, ಪುನರ್ವಸತಿ ಯೋಜನೆಯ ಅಡಿಯಲ್ಲಿ ನಿರ್ಮಿಸಿರುವ ಮನೆಗಳನ್ನು ಜೂನ್ ಮೊದಲ ವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಂಚಿಕೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು. ಇಂದು ಜಿ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.ಕೊಡಗು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಸಲಹೆಯಂತೆ, ಇದೇ ತಾ. 29 ರಂದು ಮನೆಗಳನ್ನು ಹಸ್ತಾಂತರಿಸಲು ನಿರ್ಧರಿಸಿದ ದಿನಾಂಕವನ್ನು ಜೂ. 4ಕ್ಕೆ ಮುಂದೂಡಿದ್ದು, ಮುಖ್ಯಮಂತ್ರಿಗಳ ಸಲಹೆ ಪಡೆದು ಈ ದಿನದ ಒಂದು ದಿನ ಹಿಂದೆ ಅಥವಾ ಮುಂದೆ ಕಾರ್ಯಕ್ರಮ ರೂಪಿಸಲಾಗುವದು ಎಂದು ಮಾರ್ನುಡಿದರು.ಲೋಪ ಸರಿಪಡಿಸುವ ಭರವಸೆ : ಸಂತ್ರಸ್ತರಿಗೆ ಹಂಚಿಕೆ ಮಾಡಲಿರುವ ಮನೆಗಳನ್ನು ಈ ಮೊದಲಿನ ನಿರ್ಧಾರದಂತೆ ಅಂದಾಜು ರೂ. 10 ಲಕ್ಷದಲ್ಲಿ ನಿರ್ಮಿಸಿದ್ದು, ಕೆಲಸವನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಕೈಗೊಳ್ಳಲಾಗಿದೆ. ಒಂದು ವೇಳೆ ಕೆಲಸದಲ್ಲಿ ಲೋಪವಾಗಿದ್ದರೆ ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಮನೆಯಲ್ಲಿ ಬಿರುಕು ಕಾಣಿಸಿ ಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, (ಮೊದಲ ಪುಟದಿಂದ) ಆ ಮಾತ್ರಕ್ಕೆ ಕೆಲಸ ಕಳಪೆಯಲ್ಲವೆಂದು ಮಾದ್ಯಮಗಳ ಪ್ರಶ್ನೆಗೆ ಸಮರ್ಥನೆ ನೀಡಿದರು.

10 ಲಕ್ಷ ಮನೆ : ಮುಂದಿನ 2 ವರ್ಷಗಳಲ್ಲಿ ಕರ್ನಾಟಕದಲ್ಲಿ ವಸತಿ ರಹಿತರಿಗೆ 10 ಲಕ್ಷ ಮನೆಗಳನ್ನು ಕಲ್ಪಿಸಲಾಗುವದು ಎಂದು ಘೋಷಿಸಿದ ಅವರು, ಗ್ರಾಮೀಣ ಭಾಗದ ವಸತಿ ರಹಿತರಿಗೆ 5.50 ಲಕ್ಷ ಹಾಗೂ ನಗರ ವ್ಯಾಪ್ತಿಯ ಮಂದಿಗೆ 4.50 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಟಿಸಿದರು.

ಜಿಲ್ಲಾಡಳಿತಕ್ಕೆ ಪ್ರಶಂಸೆ : ಜಿಲ್ಲಾಡಳಿತವು ಸ್ಥಳೀಯ ಜನಪ್ರತಿನಿಧಿಗಳು, ಪೊಲೀಸ್, ಆರೋಗ್ಯ ಮುಂತಾದ ಇಲಾಖೆಗಳ ಸಹಕಾರದಿಂದ 13 ಚೆಕ್‍ಪೋಸ್ಟ್ ಮಾರ್ಗಗಳನ್ನು ನಿರ್ಬಂಧಿಸಿ ಕೊಡಗಿನ ಜನತೆಯ ಹಿತ ಕಾಪಾಡುವ ಮೂಲಕ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವದು ಶ್ಲಾಘನೀಯವೆಂದ ಸಚಿವರು, ಈ ಸಂದರ್ಭ ಸ್ಪಂದಿಸಿರುವ ಕೊಡಗಿನ ಜನತೆ ಸ್ವಾಭಿಮಾನಿಗಳೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಂಸದರಿಂದ ಶ್ಲಾಘನೆ : ಸಂಸದ ಪ್ರತಾಪ್ ಸಿಂಹ ಅವರು ಕೊಡಗು ಮೈಸೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಚಿವ ಸೋಮಣ್ಣ ಅವರ ಕಾಳಜಿ ಹಾಗೂ ಕೊಡಗಿನ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ದಿಟ್ಟ ಕ್ರಮ ಶ್ಲಾಘನೀಯವೆಂದು ಮುಕ್ತಕಂಠದಿಂದ ಪ್ರಶಂಸೆ ಮಾಡಿದರು.

ಸರಕಾರಗಳ ನೆರವಿಗೆ ಮೆಚ್ಚುಗೆ : ಕೊರೊನಾ ನಡುವೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿಶೇಷ ಪ್ಯಾಕೇಜ್‍ನಿಂದ ಎಲ್ಲಾ ಬಡವರಿಗೆ ಸಹಾಯಧನ ಘೋಷಿಸಿದ್ದು, ಒಂದು ಕೋಟಿ ವೆಚ್ಚದ ಪ್ರಯೋಗಾಲಯ ನಿರ್ಮಿಸಿ, ಪ್ರತಿದಿನ ಒಂದು ನೂರು ಮಂದಿಯ ತಪಾಸಣೆಗೆ ಮಡಿಕೇರಿಯಲ್ಲೇ ವ್ಯವಸ್ಥೆ ಕಲ್ಪಿಸಿರುವದು ಮೆಚ್ಚುವಂಥದ್ದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರಶಂಸಿಸಿದರು. ಅಲ್ಲದೆ ಉದ್ಯಮಗಳ ಪುನಶ್ಚೇತನಕ್ಕೆ ಮುಂದಾಗಿರುವ ಸರಕಾರದ ತೀರ್ಮಾನವನ್ನು ಅವರು ಸ್ವಾಗತಿಸಿದರು.

ಸಚಿವರ ಭರವಸೆ : ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು, ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ತಿದ್ದಲು ಜಿಲ್ಲೆಯೊಳಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿ ಮಾತನಾಡಿದ ಸಚಿವ ಸೋಮಣ್ಣ, ಈ ಉಪನ್ಯಾಸಕರು ಹೊರ ಜಿಲ್ಲಾ ಕೇಂದ್ರಗಳಿಗೆ ಹೋಗಿ ಬರುವ ವೇಳೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವದಾಗಿ ಭರವಸೆ ನೀಡಿದರು. ಈ ನಡುವೆ ಪೊಲೀಸರು ಅಕ್ರಮ ಗಾಂಜಾ ಅಡ್ಡೆ ಭೇದಿಸಿದ ಬಗ್ಗೆಯೂ ಸುನಿಲ್ ಸುಬ್ರಮಣಿ ಗಮನ ಸೆಳೆದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕ ರಾಂ ಪ್ರಸಾದ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ. ಸ್ನೇಹಾ, ಉಪವಿಭಾಗಾಧಿಕಾರಿ ಟಿ. ಜವರೇಗೌಡ ಸೇರಿದಂತೆ ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೊಡಗು ಜಿಲ್ಲಾಡಳಿತದ ಮಾಹಿತಿಯನ್ನು ಸಚಿವರಿಗೆ ಒದಗಿಸುವದರೊಂದಿಗೆ ಸ್ವಾಗತಿಸಿದರು.