ಸೋಮವಾರಪೇಟೆ, ಮೇ 22: ಕಳೆದ 2018ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರೊಂದಿಗೆ ಸರ್ಕಾರ ಇಂದಿಗೂ ಇದೆ ಎಂದು ಸಂತ್ರಸ್ತರಿಗೆ ಭರವಸೆ ನೀಡಿದ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು, ಜಂಬೂರಿನಲ್ಲಿ ಪೂರ್ಣಗೊಳ್ಳುವ ಹಂತದಲ್ಲಿರುವ ಬಡಾವಣೆಯ ಕೆಲಸಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೊಡಗು ಜಿಲ್ಲಾಡಳಿತ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಮೂಲಕ ಮಾದಾಪುರ ಸಮೀಪದ ಜಂಬೂರು ಗ್ರಾಮದಲ್ಲಿ ಪೂರ್ಣಗೊಳ್ಳುವ ಹಂತದಲ್ಲಿರುವ ಬಡಾವಣೆ ಕಾಮಗಾರಿಯನ್ನು ಖುದ್ದು ವೀಕ್ಷಿಸಿ, ಸ್ಥಳದಲ್ಲಿದ್ದ ಸಂತ್ರಸ್ತರು ಮತ್ತು ಅಧಿಕಾರಿಗಳೊಂದಿಗೆ ಸಚಿವರು ಮಾತನಾಡಿದರು.ದೇಶದ ಪ್ರತಿಯೊಬ್ಬರಿಗೂ ಸೂರು ದೊರಕಬೇಕೆಂಬದು ಪ್ರಧಾನಿ ಮೋದಿ ಅವರ ಕನಸಾಗಿದ್ದು, ಪ್ರಾಕೃತಿಕ ವಿಕೋಪ ಸಂದರ್ಭ ಮನೆಗಳನ್ನು ಕಳೆದುಕೊಂಡ ಮಂದಿಗೆ ಸರ್ಕಾರದ ವತಿಯಿಂದ ನೂತನ ಮನೆಗಳನ್ನು

(ಮೊದಲ ಪುಟದಿಂದ) ಕಟ್ಟಿಕೊಡಲಾಗುತ್ತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜೂನ್ 4 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಆಗಮಿಸಿ ಬಡಾವಣೆಗಳನ್ನು ಉದ್ಘಾಟಿಸಿ, ಸಂತ್ರಸ್ತರೊಂದಿಗೆ ಸಹ ಭೋಜನ ಮಾಡಲಿದ್ದಾರೆ ಎಂದು ಸೋಮಣ್ಣ ಹೇಳಿದರು.

ಬೃಹತ್ ಕಾಮಗಾರಿಯಾದ್ದರಿಂದ ಸಣ್ಣಪುಟ್ಟ ಲೋಷದೋಷಗಳು ಆಗುವದು ಸಹಜ. ಅಂತಹ ಲೋಪದೋಷಗಳು ಆಗಿರುವದು ಕಂಡುಬಂದರೆ ತಕ್ಷಣ ಸರಿಪಡಿಸಲಾಗುವದು. ಸಂತ್ರಸ್ತರು ಖುದ್ದು ಅಧಿಕಾರಿಗಳ ಗಮನ ಸೆಳೆದರೆ ತಕ್ಷಣ ಸರಿಪಡಿಸುವ ಕೆಲಸ ಆಗಲಿದೆ. ಯಾರೂ ಸಹ ಕಾಮಗಾರಿಗೆ ಹಣ ನೀಡುವದು ಬೇಡ ಎಂದು ಸಚಿವರು ತಿಳಿಸಿದರು.

ಕಳೆದ ಐದಾರು ತಿಂಗಳಿನಿಂದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಈ ಮಳೆಗಾಲ ಪ್ರಾರಂಭ ವಾಗುವದರೊಳಗೆ ಗರಿಷ್ಠ ಪ್ರಮಾಣದ ಮನೆಗಳ ನಿರ್ಮಾಣ ಮಾಡಲಾಗುವದು. ಜನಸಾಮಾನ್ಯರ ತೆರಿಗೆ ಹಣದಿಂದ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ ಎಂದರು.

ಜಂಬೂರು ಗ್ರಾಮದಲ್ಲಿ ನಿರ್ಮಾಣವಾಗಿರುವ 383 ಮನೆಗಳ ಬಡಾವಣೆಯ ಕಾಮಗಾರಿ ಇಂದಿಗೂ ಪ್ರಗತಿಯಲ್ಲಿರುವದನ್ನು ವೀಕ್ಷಿಸಿದ ಸಚಿವರು, ಇನ್ನೆರಡು ದಿನಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಅಧಿಕಾರಿಗಳು ಪೂರ್ಣಗೊಳಿಸಬೇಕು. ಈ ಬಗ್ಗೆ ಗಮನ ಹರಿಸುವಂತೆ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಹೇಳಿದರು.

ಮನೆಗಳ ಕಾಮಗಾರಿಯಲ್ಲಿ ಲೋಪಗಳು ಕಂಡುಬಂದರೆ ಸಂತ್ರಸ್ತರು ಅಧಿಕಾರಿಗಳ ಗಮನಕ್ಕೆ ತರಬೇಕು. ಮೂರನೇ ವ್ಯಕ್ತಿಗಳು ಹೇಳುವ ಮಾತಿಗೆ ಕಿವಿಗೊಡಬಾರದು. ನಿಮ್ಮ ಸಮಸ್ಯೆಗಳೇನಿದ್ದರೂ ಸರ್ಕಾರ ಬಗೆಹರಿಸಲಿದೆ ಎಂದು ಸಂತ್ರಸ್ತ ಫಲಾನುಭವಿಗಳಿಗೆ ತಿಳಿಸಿದರು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್, ಉಪ ವಿಭಾಗಾಧಿಕಾರಿ ಜವರೇಗೌಡ, ನಿಗಮದ ವ್ಯವಸ್ಥಾಪಕ ರಾಮ್‍ಪ್ರಸಾದ್, ಗ್ರಾ.ಪಂ. ಸದಸ್ಯ ನಾಪಂಡ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಚಿವರಿಗೆ ಮನವಿ ಸಲ್ಲಿಕೆ: ಇದೇ ಸಂದರ್ಭ ಜಂಬೂರು ಸಂತ್ರಸ್ತರ ಸಂಘದ ವತಿಯಿಂದ ಸಂತ್ರಸ್ತರಿಗೆ ಬಾಡಿಗೆ ಹಣವನ್ನು ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಲಾಕ್‍ಡೌನ್‍ನಿಂದಾಗಿ ಸಂತ್ರಸ್ತರ ಬದುಕು ದುಸ್ತರವಾಗಿದೆ. ಈಗಿರುವ ಮನೆಗಳಿಗೆ ಬಾಡಿಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಕಳೆದ 5 ತಿಂಗಳಿನಿಂದ ಸರ್ಕಾರದಿಂದ ಬಾಡಿಗೆ ಹಣ ಬಂದಿಲ್ಲ. ಈ ಬಗ್ಗೆ ಗಮನ ಹರಿಸಬೇಕೆಂದು ಸಂಘದ ಅಧ್ಯಕ್ಷ ಗಾಂಧಿ ಸೇರಿದಂತೆ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

2018ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಮನೆಗೆ ಹಾನಿಯಾಗಿದ್ದರೂ ಈವರೆಗೆ ತನ್ನ ಹೆಸರಿಗೆ ಮನೆ ನೀಡಿಲ್ಲ. ಭೂ ಕುಸಿತದಿಂದ ಮನೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಈವರೆಗೆ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಜಂಬೂರಿನಲ್ಲಿ ಒಂದು ಮನೆಯನ್ನು ಒದಗಿಸುವಂತೆ ಗರ್ವಾಲೆ ಗ್ರಾಮದ ಟಿ.ಟಿ. ಬೆಳ್ಯಪ್ಪ ಅವರು ಸಚಿವರಿಗೆ ಮನವಿ ಮಾಡಿದರು.

ಎರಡೂ ಮನವಿಗಳ ಬಗ್ಗೆ ಗಮನ ಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚಿಸಿದರು.