ಸೋಮವಾರಪೇಟೆ,ಮೇ 22: ಕೊರೊನಾ ವೈರಸ್ ಆತಂಕ ಎಲ್ಲರನ್ನೂ ಕಾಡುತ್ತಿದ್ದು, ಸಚಿವರನ್ನೂ ಆತಂಕ ಆವರಿಸಿದೆ. ಇಂದು ಜಂಬೂರು ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮದವರಿಗೆ ‘ಸ್ವಲ್ಪ ದೂರ ಇರ್ರಪ್ಪಾ.., ಕೋವಿಡ್ ಬರ್ತದೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಮಾಧ್ಯಮದ ಮಂದಿಯಿಂದ ಅಂತರ ಕಾಯ್ದುಕೊಂಡರು.
‘ಇನ್ನೂ ಸ್ವಲ್ಪ ದೂರ ಹೋಗ್ರಪ್ಪಾ..ಕೋವಿಡ್ ಬರ್ತದೆ, ಮತ್ತೆ ನಾನೇ 15 ದಿನ ಕ್ವಾರಂಟೈನ್‍ಗೆ ಹೋಗ್ಬೇಕಾಯ್ತದೆ, ದಮ್ಮಯ್ಯ ಕಣ್ರಪ್ಪ ದೂರ ಹೋಗಿ’ ಎಂದು ಮಾಧ್ಯಮ ಮಂದಿಯಿಂದ ಎರಡು ಹೆಜ್ಜೆ ಅವರೇ ಹಿಂದೆ ಸರಿದರು. ‘ನಿಮಗೇನೂ ಬರಲ್ಲ ಸಾರ್’ ಎಂದು ಕೆಲವರು ಹೇಳಿದಾಗ, ‘ಹಾಂ.., ನನಗೆ ಈಗ 69 ವರ್ಷ ಕಣ್ರಪ್ಪಾ ಎಂದು ನಕ್ಕರು. ‘ಅಷ್ಟೊಂದು ವಯಸ್ಸಾಗಿದೆ ಅಂತ ಕಾಣೋದಿಲ್ಲ ಸರ್’ ಎಂದು ಕೆಲ ಪತ್ರಕರ್ತರು ತಮಾಷೆ ಮಾಡಿದರು.