ಮಡಿಕೇರಿ, ಮೇ 21: ಕೊರೊನಾ ಸೋಂಕಿನ ತಡೆಗೆ ರಾಜ್ಯವ್ಯಾಪಿ ಜಾರಿಯಲ್ಲಿದ್ದ ಲಾಕ್‍ಡೌನ್‍ಅನ್ನು ಸಡಿಲಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕ, ಇದು ದುರುದ್ದೇಶಪೂರಿತ ಕ್ರಮವೆಂದು ಟೀಕಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಇಸಾಕ್ ಖಾನ್, ಲಾಕ್‍ಡೌನ್ ನಿರ್ಬಂಧಗಳನ್ನು ಅಲ್ಪಸಂಖ್ಯಾತ ಸಮುದಾಯ ಹಿಂದಿನಿಂದಲೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದೆ. ಆದರೆ, ಇದೀಗ ರಾಜ್ಯ ಸರ್ಕಾರವೆ ಅಂಗಡಿ ಮುಂಗಟ್ಟುಗಳು, ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದರೊಂದಿಗೆ ಬಸ್, ಆಟೋ, ಟ್ಯಾಕ್ಸಿ ಸಂಚಾರಕ್ಕೂ ಅನುವು ಮಾಡಿಕೊಟ್ಟಿದೆ. ಇಷ್ಟೆಲ್ಲ ಮಾಡಿದ ಸರ್ಕಾರ ಕೇವಲ ಧಾರ್ಮಿಕ ಕೇಂದ್ರಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿರುವುದು ಮಾತ್ರ ವಿಷಾದನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.

ತಾ. 24 ರಂದು ರಂಜಾನ್ ಹಬ್ಬಾಚರಣೆÉ ಬರುತ್ತದೆ. ಆದರೆ, ಈ ಹಬ್ಬಾಚರಣೆಯನ್ನು ಲಾಕ್‍ಡೌನ್ ಹಿನ್ನೆಲೆ ಕಾನೂನು ಮೀರದಂತೆ ಆಚರಿಸುವಂತೆ ನಾವು ಮುಸ್ಲಿಂ ಸಮುದಾಯಕ್ಕೆ ಕರೆ ನೀಡುತ್ತಿದ್ದೇವೆ. ಹೀಗಿದ್ದೂ ಈ ಭಾನುವಾರದಂದು ಸಂಪೂರ್ಣ ಲಾಕ್‍ಡೌನ್ ಮಾಡಿರುವುದು ಸರಿಯಲ್ಲ ಎಂದರು.

ರಂಜಾನ್ ಹಬ್ಬಾಚರಣೆಯ ಸಂಬಂಧ ಹಿಂದೂಗಳ ಮಳಿಗೆಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಸಂದೇಶ ರವಾನಿಸಿದ್ದು. ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಇಸಾಕ್ ಖಾನ್, ಇಂತಹ ಯಾವುದೇ ತೀರ್ಮಾನವನ್ನು ಸಮುದಾಯ ಕೈಗೊಂಡಿಲ್ಲವೆಂದು ಸ್ಪಷ್ಟಪಡಿಸಿದರು.

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ ಮಾತನಾಡಿ, ಲಾಕ್‍ಡೌನ್ ಹಿನ್ನೆಲೆ ಮುಸ್ಲಿಂ ಬಾಂಧವರು ರಂಜಾನ್‍ನ್ನು ಕಾನೂನಿಗೆ ತೊಡಕುಂಟಾಗದಂತೆ ಆಚರಿಸಬೇಕೆಂದು ಕರೆ ನೀಡಿದರಲ್ಲದೆ, ಕೊರೊನಾವನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವುದೇ ರಾಜಕೀಯ ಲಾಭವನ್ನು ನಿರೀಕ್ಷಿಸದೆ ಎಲ್ಲಾ ಪಕ್ಷಗಳ ಸಹಕಾರ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ, ಮಡಿಕೇರಿ ನಗರಾಧ್ಯಕ್ಷ ಖಲೀಲ್ ಹಾಗೂ ಜೆಡಿಎಸ್ ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಜಾಶಿರ್ ಉಪಸ್ಥಿತರಿದ್ದರು.