ಮಡಿಕೇರಿ, ಮೇ 21 : ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮದ ಪ್ರಕಾರ, ನಿಯಮಗಳು 1995ರ ನಿಯಮ 10ರ ಉಪನಿಯಮ 7ರಂತೆ ವಿದ್ಯಾರ್ಥಿಗಳು ಮತ್ತು ಪೋಷಕರ ಆಯ್ಕೆಯಂತೆ ಶಾಲಾ ಶುಲ್ಕವನ್ನು ಪ್ರತಿ ಮಾಹೆವಾರು, ತ್ರೈಮಾಸಿಕವಾರು, ಅರ್ಧ ವಾರ್ಷಿಕವಾರು ಕಂತುಗಳ ಮೂಲಕ ಅಥವಾ ವರ್ಷದ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 317 ಪಿಜಿಸಿ 2013, ದಿನಾಂಕ: 18/05/2018ರಂತೆ ಪ್ರತಿವರ್ಷ ಭೋದನಾ ಶುಲ್ಕವನ್ನು ಶೇ.15 ರ ಮಿತಿಯೊಳಗೆ ಹೆಚ್ಚಿಸಲು ಅವಕಾಶವಿದೆ. ಆದರೆ, ಲಾಕ್‍ಡೌನ್ ಇರುವುದರಿಂದ, ಪೋಷಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಯಾವುದೇ ಶುಲ್ಕವನ್ನು ಹೆಚ್ಚಿಸದಂತೆ ಸೂಚಿಸಿದೆ ಹಾಗೂ ಶಾಲಾ ಆಡಳಿತ ಮಂಡಳಿಯವರು ಕಳೆದ ಸಾಲಿನಲ್ಲಿ ಪಡೆದ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ಪಡೆಯಲು ಇಚ್ಛಿಸಿದಲ್ಲಿ ಸಂಸ್ಥೆಯವರು ಸ್ವತಂತ್ರರಾಗಿರುತ್ತಾರೆ.

ಶುಲ್ಕವನ್ನು ಚೆಕ್, ಆರ್‍ಟಿಜಿಎಸ್, ನೆಫ್ಟ್ ಆನ್‍ಲೈನ್ ಮೂಲಕವೇ ಕಡ್ಡಾಯವಾಗಿ ಪಡೆಯುವುದು. ಯಾವುದೇ ಕಾರಣಕ್ಕೂ ಲಾಕ್‍ಡೌನ್ ಅವಧಿಯಲ್ಲಿ ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಶಾಲೆಯ ಆವರಣಕ್ಕೆ ಬಾರದಂತೆ ನೋಡಿಕೊಳ್ಳುವುದು.

ಆಡಳಿತ ಮಂಡಳಿಯವರು ಶಾಲಾ ಶುಲ್ಕವನ್ನು ಪಾವತಿಸಲು ಪೋಷಕರಿಗೆ ಇ-ಮೇಲ್, ಎಸ್‍ಎಂಎಸ್. ಅಥವಾ ವಾಟ್ಸ್‍ಆಪ್ ಮೂಲಕ ಸೂಚನೆ ನೀಡುವ ಸಮಯದಲ್ಲಿ ಶುಲ್ಕ ಪಾವತಿಸಲು ಶಕ್ತರಿರುವ ಹಾಗೂ ಸ್ವ-ಇಚ್ಛೆಯಿಂದ ಪಾವತಿಸಲು ಇಚ್ಛಿಸುವ ಪೋಷಕರುಗಳು ಮಾತ್ರ ಪಾವತಿಸಬಹುದು ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಶುಲ್ಕ ಪಾವತಿಸಲು ಸಾಧ್ಯವಿಲ್ಲದೇ ಇರುವ ಪೋಷಕರುಗಳು ಸದ್ಯಕ್ಕೆ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ ಎಂಬ ಅಂಶವನ್ನು ಕಡ್ಡಾಯವಾಗಿ ಪೋಷಕರ ಗಮನಕ್ಕೆ ತರುವುದು.

ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಲ್ಲಿ ಜಿಲ್ಲಾ ಉಪನಿರ್ದೇಶಕರು ತಮ್ಮ ಹಂತದಲ್ಲಿಯೇ ಪರಿಶೀಲನಾ ತಂಡವನ್ನು ರಚಿಸಿ ದೂರು ದಾಖಲು ಮಾಡಿಕೊಂಡು ತಕ್ಷಣವೇ ಶಾಲೆಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೊ ಅವರು ತಿಳಿಸಿದ್ದಾರೆ.