ಮಡಿಕೇರಿ, ಮೇ 21: ನಗರದ ಸ್ಟೋನ್‍ಹಿಲ್ ಬಳಿ ಬೆಟ್ಟಶ್ರೇಣಿಯ ನಡುವೆ ರಾಶಿಗಟ್ಟಲೆ ಕಸ ಸುರಿದು; ಅಲ್ಲಿನ ಜಲಮೂಲದೊಂದಿಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಅಸಮಾಧಾನದ ಇಂದಿನ ಕೂಗಿಗೆ; 15 ವರ್ಷಗಳ ಹಿಂದೆ ಜವಾಬ್ದಾರಿ ಯುತ ಜನಪ್ರತಿನಿಧಿಗಳ ಸಹಿತ ನಗರಸಭೆ ಕೈಗೊಂಡಿರುವ ತಪ್ಪು ನಿರ್ಣಯ ಮೂಲವೆಂದು ಬೆಳಕಿಗೆ ಬಂದಿದೆ. ‘ಶಕ್ತಿ’ಗೆ ಲಭ್ಯವಿರುವ ದಾಖಲೆಗಳಿಂದ ಈ ಸಂಗತಿ ಬಹಿರಂಗವಾಗಿದೆ.
2003-04ರ ಅವಧಿಯಲ್ಲಿ ಮಡಿಕೇರಿ ನಗರಸಭೆಯ ಜನಪ್ರತಿನಿಧಿಗಳು, ಅಂದಿನ ಆಯುಕ್ತರು ಪ್ರಸಕ್ತ ಸಮಸ್ಯೆಯಾಗಿರುವ ಜಾಗವನ್ನು ತ್ಯಾಜ್ಯಗಳ ವಿಲೇವಾರಿಗೆ ಗುರುತಿಸಿದ್ದಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಸಹಿತ ಅಂದಿನ ಅಧ್ಯಕ್ಷರ ನೇತೃತ್ವದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರಸಭೆ ಆಯುಕ್ತರು ಜನಪ್ರತಿನಿಧಿಗಳ ಸರ್ವಾನುಮತದ ನಿರ್ಣಯ ಸಹಿತ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಿ; ಕಸವಿಲೇವಾರಿಗೆ ಸಂಬಂಧಿಸಿದ ಜಾಗ ಸೂಕ್ತವೆಂದು ಸಮರ್ಥನೆ ನೀಡಿದ್ದಾರೆ.
ಆ ಮೇರೆಗೆ ಹಿಂದಿನ ಜಿಲ್ಲಾಧಿಕಾರಿಗಳು 2004ರಲ್ಲಿ ಸರಕಾರಕ್ಕೆ ವರದಿ ನೀಡಿ; ಅರಣ್ಯ ಇಲಾಖೆಯ ವಶದಲ್ಲಿರುವ ಕರ್ಣಂಗೇರಿ ಗ್ರಾಮದ ಸ.ನಂ. 471/1ಎ ಪ್ರದೇಶದ ಬೆಟ್ಟಸಾಲಿನ 6 ಎಕರೆಯನ್ನು ಮಂಜೂರಾತಿಗೆ ಕೋರಿದ್ದಾರೆ. ಈ ಸಂದರ್ಭ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಸಹಿತ; ಸಂಬಂಧಿಸಿದ ಪ್ರದೇಶ ಕಸಹಾಕಲು ಸೂಕ್ತವಲ್ಲವೆಂದು ಎಚ್ಚರಿಸಲಾಗಿದೆ.
ಆದರೆ ಪಟ್ಟು ಬಿಡದ ನಗರಸಭೆ ಹಾಗೂ ಜನಪ್ರತಿನಿಧಿಗಳು ಈ ಜಾಗಕ್ಕಾಗಿ ಪತ್ರ ವ್ಯವಹಾರ ಮೂಲಕ ಸರಕಾರದ ಪೌರಾಡಳಿತ ಇಲಾಖೆಯ ಸಮ್ಮತಿಯೊಂದಿಗೆ; ಅರಣ್ಯ ಇಲಾಖೆ ವಶದಲ್ಲಿದ್ದ ಆರು ಎಕರೆಯನ್ನು ಕಂದಾಯ ಇಲಾಖೆ ಮೂಲಕ ನಗರಸಭೆಗೆ ನೀಡಲು ನಿರ್ದೇಶನ ಮಾಡಿದೆ.
ಅರಣ್ಯ ಇಲಾಖೆ ತಕರಾರು : ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ನಿರ್ದೇಶಿಸಿ; 20.11.2006ರಲ್ಲಿ ಸಂಬಂಧಿಸಿದ 6 ಎಕರೆ ಜಾಗವನ್ನು ಅರಣ್ಯ ಇಲಾಖೆಯಿಂದ ಸರಕಾರ ಹಿಂಪಡೆದು ಕಂದಾಯ ಇಲಾಖೆ ಮೂಲಕ ನಗರಸಭೆಗೆ ಮಂಜೂರಾತಿಗೊಳಿಸಿ ಆದೇಶ ಹೊರಡಿಸಿದೆ. ಈ ಸಂದರ್ಭ ಅರಣ್ಯ ಇಲಾಖೆಯು ಅಲ್ಲಿ ಕಸ ವಿಲೇವಾರಿಯಿಂದ ಇಡೀ ನಗರದ ಸೌಂದರ್ಯಕ್ಕೆ ಧಕ್ಕೆಯೊಂದಿಗೆ; ಜಲಮೂಲ ಸಹಿತ ಜನತೆಯ ಬದುಕಿಗೆ ತೊಂದರೆ ಎದುರಾಗಲಿದೆ ಎಂದು ನೆನಪಿಸಿದೆ.
ಮಾತ್ರವಲ್ಲದೆ ಕೊಡಗಿನ ಮಳೆಗಾಲದಲ್ಲಿ ಇಂತಹ ಬೆಟ್ಟ ಪ್ರದೇಶದಲ್ಲಿ ಕಸ - ತ್ಯಾಜ್ಯ ಸುರಿಯುವ ದುಷ್ಪರಿಣಾಮದಿಂದ ಅನೇಕ ಸಮಸ್ಯೆಗಳು ಸಂಭವಿಸಲಿರುವದಾಗಿ; ಸಂಬಂಧಿಸಿದ ಇಲಾಖೆಗಳಿಗೆ ಮುನ್ನೆಚ್ಚರಿಸಿದೆ. ಈ ಎಲ್ಲವನ್ನು ಗಾಳಿಗೆ ತೂರಿದ ಪರಿಣಾಮ ಇಂದು ರೈಫಲ್‍ರೆಂಜ್, ಸುಬ್ರಹ್ಮಣ್ಯನಗರ ಹಾಗೂ ಪೊಲೀಸ್ ವಸತಿಗಳ ಸಹಿತ ಆ ಭಾಗದ ನಿವಾಸಿಗಳು ತೊಂದರೆಯೊಂದಿಗೆ ಸಾಂಕ್ರಮಿಕ ರೋಗ ಭಯ ಎದುರಿಸುತ್ತಿದ್ದಾರೆ. ಪ್ರಸ್ತುತ ಈ ಕಸದ ಸಮಸ್ಯೆ ಭಯಾನಕ ಪರಿಣಾಮದೊಂದಿಗೆ; ಬೆಟ್ಟಸಾಲುಗಳಿಂದ ಗಾಳಿಯಲ್ಲಿ ಹರಡುತ್ತಿರುವ ತ್ಯಾಜ್ಯಗಳು ಮತ್ತು ದುರ್ನಾತದೊಂದಿಗೆ; ನೊಣಗಳ ಕಾಟ, ಜಲಮಾಲಿನ್ಯ, ಪರಿಸರ ಹಾನಿಯಂತಹ ವ್ಯತಿರಿಕ್ತ ಸನ್ನಿವೇಶವನ್ನು ಜನತೆ ಎದುರಿಸುವಂತಾಗಿದೆ.
ಜನಪ್ರತಿನಧಿಗಳ ಧ್ವನಿ : ಈ ಬಗ್ಗೆ ಈಗಾಗಲೇ ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು ಕೂಡ ಜನತೆಯ ಅಸಮಾಧಾನಕ್ಕೆ ಧ್ವನಿಗೂಡಿಸಿ ಬೆಟ್ಟಸಾಲಿನ ಕಸವಿಲೇವಾರಿ ಘಟಕಕ್ಕೆ ಮುಕ್ತಿ ಕಾಣಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಆದರೆ ಬದಲಿ ವ್ಯವಸ್ಥೆ; ಜಾಗದ ಕೊರತೆಯಿಂದ ನಗರಸಭೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವ ಆರೋಪವಿದೆ. ಜನಪ್ರತಿನಿಧಿಗಳಿಂದ ಕೂಡಿದ ನಗರಸಭೆ ಅಸ್ತಿತ್ವವಿಲ್ಲದ್ದರಿಂದ ಈ ಹಿಂದಿನ ವರೆಲ್ಲರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಾಗಿದೆ.