ಮಡಿಕೇರಿ, ಮೇ 21: ಕೊರೊನಾ ಲಾಕ್‍ಡೌನ್‍ನಿಂದಾಗಿ ನೃತ್ಯ ಕಲಾ ಶಾಲೆಗಳ ನಿರ್ವಾಹಕರುಗಳು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಕೊಡಗು ಜಿಲ್ಲಾ ನೃತ್ಯ ಕಲಾ ಶಾಲೆಗಳ ನಿರ್ವಾಹಕರುಗಳು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರ್ಪಿತ್ ಅನೂಪ್ ಡಿಸೋಜ, ಮಳೆಹಾನಿ ಸಂಕಷ್ಟದ ನಡುವೆ ಆರ್ಥಿಕ ಸಮಸ್ಯೆಯಿಂದ ಚೇತರಿಸಿಕೊಳ್ಳುವ ಸಂದರ್ಭದಲ್ಲೇ ಕೊರೊನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಎಲ್ಲಾ ನೃತ್ಯ ಶಾಲೆಗಳು ಮುಚ್ಚಲ್ಪಟ್ಟಿವೆ. ಇದರಿಂದಾಗಿ ಆದಾಯ ಮೂಲವಿಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದರು.

ಕೊಡಗಿನಲ್ಲಿ ಸುಮಾರು 25ಕ್ಕೂ ಹೆಚ್ಚು ನೃತ್ಯ ಸಂಸ್ಥೆಗಳಿದ್ದು, ಬಹುತೇಕ ಇತರ ಎಲ್ಲಾ ಕ್ಷೇತ್ರಗಳ ಶ್ರಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆಯ ಮೂಲಕ ಸರ್ಕಾರ ನೆರವಿಗೆ ಬಂದಿದೆ. ಇದೇ ಪ್ರಕಾರವಾಗಿ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ನೃತ್ಯ ಕಲಾ ಶಾಲೆಗಳಿಗೂ ಸಹಾಯ ಮಾಡಬೇಕೆಂದು ಹೇಳಿದರು.

ಗೋಷ್ಠಿಯಲ್ಲಿ ನೃತ್ಯ ಶಾಲೆಗಳ ಪ್ರಮುಖರಾದ ಏಂಜಲ್ ರಶ್ಮಿ ಡಿಸೋಜ, ಅಭಿಷೇಕ್, ಕೆ.ಎಂ. ಪ್ರದೀಪ್, ಅಶ್ವಿನ್ ಡಿಸೋಜ ಹಾಗೂ ಪಿ.ಎನ್. ದಿನೇಶ್ ಉಪಸ್ಥಿತರಿದ್ದರು.