2018 ರ ಜೂನ್, ಸಮಯ. ನಾನು ಖ್ಯಾತ ಜ್ಯೋತಿಷಿ ಕೇರಳದ ತ್ರಿಚೂರ್‍ನಲ್ಲಿನ ಭಾರತೀಯ ಜ್ಯೋತಿಷಿ ಶಾಸ್ತ್ರದ ದಂತಕಥೆ ಎನಿಸಿರುವ ಕೈಮುಕ್ಕು ರಾಮನ್ ಅಕ್ಕಿತಿರಿಪಾಡ್ ಮನೆಗೆ ತೆರಳಿದ್ದೆ. ಆ ಸಂದರ್ಭ ಅವರು ಹೇಳಿದ್ದರು, 2020ರಲ್ಲಿ ಭಾರತ ವೈರಾಣುವಿನ ಕಾಟ ಎದುರಿಸಬೇಕಾಗುತ್ತದೆ. 2020 ಮಾತ್ರವಲ್ಲ, 2021ರಲ್ಲಿಯೂ ವೈರಾಣು ಕಾಟ ಸಹಿಸಲೇಬೇಕಾಗುತ್ತದೆ. ಕಾಸರಗೋಡು ಜಿಲ್ಲೆ ತೀವ್ರ ಸಮಸ್ಯೆಗೀಡಾಗು ತ್ತದೆ ಎಂದು ಅವರು ಎರಡು ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದರು. ನನಗಾಗ ಅವರ ಜ್ಯೋತಿಷ್ಯದ ಬಗ್ಗೆ ವಿಶ್ವಾಸ ಮೂಡಿರಲಿಲ್ಲ. ಇಂದಿನ ಆಧುನಿಕ ದಿನಗಳಲ್ಲಿ ಹೊಸ-ಹೊಸ ಔಷಧಿಗಳು ಎಲ್ಲಾ ಕಾಯಿಲೆಗೂ ದೊರಕುತ್ತಿರುವಾಗ ವೈರಸ್‍ನಿಂದಾಗಿ ಇಡೀ ವಿಶ್ವವೇ ನಲುಗುತ್ತದೆ ಎಂದು ನನಗೆ ಭಾವನೆಯೇ ಇರಲಿಲ್ಲ. ಹೀಗಿದ್ದರೂ ಮನಸ್ಸಿನಲ್ಲಿ ಕೆಲವು ಸಂಶಯಗಳು ಕಾಡಿದರೂ, ಇರಲಿಕ್ಕಿಲ್ಲ, 15 ನೇ ಶತಮಾನಕ್ಕೂ ಮೊದಲೇ ಭಾಸ್ಕರಾಚಾರ್ಯ, ಪಾತುಮಾನ ಸೋಮಯಾಜಿ, ಮಾಧವನ್ ಮುಂತಾದ ಮಹಾನ್ ಭವಿಷ್ಯಕಾರರು ಇದ್ದ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದ ವಿದ್ಯಾಲಯದಲ್ಲಿ ಪಳಗಿದ್ದ ರಾಮನ್ ಅಕ್ಕಿತಿರಿಪಾಡ್ ತಮಾಷೆ ಮಾಡಿರಲಿಕ್ಕಿಲ್ಲ ಎಂಬ ಭರವಸೆ ಯೊಂದಿಗೆ 2020 ರಲ್ಲಿ ಎದುರಿಸಬೇಕಾದ ಆತಂಕವೂ ನನ್ನ ಮನಸ್ಸಿನಲ್ಲಿತ್ತು. ಯಾವುದೇ ದಾಖಲೆಯಿಲ್ಲದೆ ಅವರು ಸುಖಾಸುಮ್ಮವೆ ಭವಿಷ್ಯವಾಣಿ ನುಡಿದಿರಲಿಕ್ಕಿಲ್ಲ ಎಂದು ಭಾವಿಸಿ ನಾನು ಧೈರ್ಯವಾಗಿಯೇ ಅವರನ್ನು ಯಾವ ಆಧಾರದಲ್ಲಿ ನೀವು ಹೀಗೆ ಹೇಳುತ್ತಿದ್ದೀರಿ ಎಂದು ಕೇಳಿಯೇಬಿಟ್ಟೆ.

ಇಂಥ ಸಂದರ್ಭವನ್ನು ಇತ್ತೀಚಿಗೆ ಪತ್ರಿಕೆಯೊಂದರಲ್ಲಿ ಸ್ಮರಿಸಿಕೊಂಡಿ ದ್ದಾರೆ ಡಾ. ಪಿ. ವಿನೋದ್ ಭಟ್ಟತ್ತಿರಿಪಾಡ್ ಎಂಬ ವೈದ್ಯ. ಈ ಕುತೂಹಲಕಾರಿ ವಿಷಯವನ್ನು ಮಡಿಕೇರಿಯ ಹಿರಿಯ ಲೇಖಕಿ ಶ್ರೀಮತಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರು ಲಾಕ್‍ಡೌನ್ ಡೈರಿಗಾಗಿ ನೀಡಿದರು. ಡಾ|| ಪಿ. ವಿನೋದ್ ಗೂಗಲ್ ಸ್ಕಾಲರ್ ಸೈಟೇಶನ್ ಪಡೆದಿರುವ ರಾಷ್ಟ್ರದ ಅಗ್ರ ವಿಧಿವಿಜ್ಞಾನ (ಈoಡಿeಟಿsiಛಿ) ಸಲಹೆಗಾರ.

ಮುಂದೇನಾಯಿತು ? : 2020 ನೇ ಮೊದಲ ಭಾಗದಲ್ಲಿ ಮತ್ತು 2021ರ ಮಧ್ಯಭಾಗದಲ್ಲಿ ಗುರು ಗ್ರಹ ಸಾಕಷ್ಟು ಮಟ್ಟಿಗೆ ತನ್ನ ಶಕ್ತಿ ಕಳೆದುಕೊಳ್ಳುತ್ತದೆ. ಗುರು ಗ್ರಹದ ಕಳೆಗುಂದುವಿಕೆ ಎಂದೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ವಿವರಿಸಲಾಗಿದೆ. ಇದರ ಪರಿಣಾಮವಾಗಿ 2020ರ ಏಪ್ರಿಲ್, ಮೇ ತಿಂಗಳು ಹಾಗೂ 2021 ರ ಏಪ್ರಿಲ್‍ನಿಂದ ಸೆಪ್ಟೆಂಬರ್‍ವರೆಗೆ ವಿಶ್ವದಲ್ಲಿ ವೈರಾಣುವಿನ ತಾಂಡವ ಕಂಡುಬರಲಿದ್ದು ಕಂಡುಕೇಳರಿಯದ ಸಂಕಷ್ಟ ಎದುರಾಗುತ್ತದೆ ಎಂದು ನನಗೆ ರಾಮನ್ ವಿವರಿಸಿದರು.

ಈ ವಿಚಾರದ ಬಗ್ಗೆ ನಾನು ಮತ್ತಷ್ಟು ಕೇಳಲು ಹೋಗಲಿಲ್ಲ. ನನಗೆಲ್ಲಾ ಗೊತ್ತಿದೆ ಎಂಬಂತೆ ಅಲ್ಲಿಂದ ಎದ್ದು ಬಂದೆ. ಅದಾಗಿ 10 ತಿಂಗಳ ಬಳಿಕ 2019 ರ ಏಪ್ರಿಲ್ 13 ರಂದು ಕೇರಳದ ಮತ್ತೋರ್ವ ಹೆಸರಾಂತ ಜ್ಯೋತಿಷಿ ಕಣಿಪ್ಪಾಯ್ಯೂರ್ ನಾರಾಯಣ್ ನಂಬುದೂರಿಪಾಡ್ ತಮ್ಮ ಭವಿಷ್ಯದಲ್ಲಿ 2019 ರ ಅಂತ್ಯದಿಂದ 2020ರವರೆಗೆ ವಿಶ್ವದಲ್ಲಿ ವಿಕೋಪ ಲಕ್ಷಣಗಳಿದೆ ಎಂದು ಪ್ರಕಟಿಸಿದರು. ಇಡೀ ಜಗತ್ತೇ ಆರ್ಥಿಕ ಸಂಕಷ್ಟದಿಂದ ತಳಮಳಿಸುತ್ತದೆ ಎಂದೂ ಅವರು ಹೇಳಿದ್ದರು. ಈ ಬಗ್ಗೆ ಮತ್ತಷ್ಟು ಸಂಶೋಧನೆಗೆ ತೊಡಗಿದ ನನ್ನಲ್ಲಿ ನಂಬುದೂರಿಪಾಡ್ ವಿವರಿಸಿದರು. ನಮ್ಮಲ್ಲಿರುವ ಭೂಮಿ ಮತ್ತು ಗುರು ಸೇರಿದಂತೆ 9 ಗ್ರಹಗಳು ಸೂರ್ಯನ ಸುತ್ತ ತಿರುಗುತ್ತಿರುತ್ತವೆ. ಈ ಸಂದರ್ಭ ಪ್ರತಿ ಗ್ರಹವೂ 30 ಡಿಗ್ರಿಗಳಂತೆ 12 ಭಾಗಗಳಲ್ಲಿ ಸುತ್ತುತ್ತವೆ. ಇದುವೇ ಜನವರಿಯಿಂದ ಡಿಸೆಂಬರ್‍ವರೆಗಿನ ನಮ್ಮ ವರ್ಷದಲ್ಲಿನ 12 ತಿಂಗಳುಗಳಾಗಿವೆ. ಕಣಿಪಯ್ಯನೂರ್ ನಾರಾಯಣ ನಂಬಿಯಾರ್ ಅವರು ಈ ಕುರಿತು ಮಾತನಾಡಿರುವ ವೀಡಿಯೋಗಳು ಯೂಟ್ಯೂಬಿನಲ್ಲಿ ಲಭ್ಯವಿದೆ.

ಗುರು ಗ್ರಹ 2019ರ ನವೆಂಬರ್ 4 ರಿಂದ 2020 ರ ನವೆÀಂಬರ್ 30 ರವರೆಗೆ ಧನುವಿನಲ್ಲಿರಬೇಕಾಗಿತ್ತು. 2020ರ ಮಾರ್ಚ್ 30 ರಿಂದ ಜೂನ್ 30 ರವರೆಗೆ ಗುರು ತನ್ನ ಗತಿಯನ್ನು ಬದಲಿಸಿ ಮಕರ ರಾಶಿಯಲ್ಲಿರುತ್ತದೆ. ಈ ಸಂದರ್ಭ ಅದು ಶಕ್ತಿಯನ್ನೆಲ್ಲಾ ಕಳೆದುಕೊಂಡಿರುತ್ತದೆ. ಇದನ್ನೇ ಜ್ಯೋತಿಷಿಗಳು ಗುರುವಿನ ಅತಿಕ್ರಮಣ ಅನ್ನುತ್ತಾರೆ. ಶಕ್ತಿ ಕುಂಠಿತಗೊಳ್ಳುವಿಕೆ ಯಿಂದಾಗಿ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಗುರುತಿಸಲಾಗಿದ್ದು ಇದೇ ಸಂದರ್ಭವೇ ವೈರಾಣುವಿನ ತಾಂಡವ ಕಂಡುಬರುತ್ತದೆ. ಆರ್ಥಿಕ ಸ್ಥಿತಿಯೂ ಮುಗ್ಗರಿಸುತ್ತದೆ. ನೀವು ವೇಗದ ರೈಲಿನಲ್ಲಿ ಸಂಚರಿಸುತ್ತಿರುವಾಗ ಯಾವ ರೀತಿ ಹೊರಗಿನ ರಸ್ತೆಯಲ್ಲಿ ವಾಹನಗಳು ನಿಮ್ಮದೇ ದಿಕ್ಕಿನಲ್ಲಿದ್ದರೂ ಎದುರು ದಿಕ್ಕಿನಿಂದ ವೇಗವಾಗಿ ಸಾಗಿದಂತೆ ಗೋಚರಿಸುತ್ತದೆಯೋ ಅದೇ ರೀತಿ ಭೂಮಿಯಿಂದ ಗಮನಿಸಿದಾಗ ಗುರು ಗ್ರಹ ಕೂಡ ಸೂರ್ಯನ ಸುತ್ತ ಭೂಮಿಯಂತೆ ಸುತ್ತುತ್ತಿರುತ್ತದೆ ಎಂದು ಭಾಸವಾಗುತ್ತದೆ. ಆದರೆ, ನಿಜವಾಗಿಯೂ ಗುರು ತನ್ನ ಪಥಸಂಚಾರದ ವೇಗವನ್ನು ಸ್ವಲ್ಪ ಮಟ್ಟಿಗೆ ಬದಲಿಸಿರುತ್ತದೆ. ತನ್ನ ಶಕ್ತಿಯನ್ನೂ ಬಹುತೇಕ ಕಳೆದುಕೊಂಡಿರುತ್ತದೆ.

2020 ರ ನವೆಂಬರ್ 30 ರಿಂದ 2022ರ ಏಪ್ರಿಲ್ 13 ರವರೆಗೆ ಗುರು ಗ್ರಹವು 30 ಡಿಗ್ರಿ ಪಥದಲ್ಲಿ ತಿರುಗುತ್ತಿರುತ್ತದೆ. 2021 ರ ಏಪ್ರಿಲ್ 6 ರಿಂದ 2021ನೇ ಸೆಪ್ಟೆಂಬರ್ 4 ರವರೆಗೆ ಗುರು ಗ್ರಹ ಮತ್ತಷ್ಟು ಶಕ್ತಿಯನ್ನು ಕುಂದಿಸಿಕೊಳ್ಳಲಿದೆ. ಹೀಗಾಗಿ ವೈರಾಣುವಿನ ಪ್ರತಿಕೂಲತೆ ಮತ್ತಷ್ಟು ಭೀಕರ ವಾಗಲಿದೆ. 2020 ಮತ್ತು 2021ರಲ್ಲಿ ಒಟ್ಟು ಎರಡು ಬಾರಿ ತಿಂಗಳಾನು ಗಟ್ಟಲೆ ವೈರಾಣು ಆಕ್ರಮಣ ಇರುತ್ತದೆ. ಇದರ ಪರಿಣಾಮಗಳು ವಿಶೇಷವಾಗಿ ಆರ್ಥಿಕ ಪ್ರತಿಕೂಲತೆ 2022ರವರೆಗೂ ವಿಶ್ವದಾದ್ಯಂತ ಮುಂದುವರೆಯಲಿದೆ. ಹೀಗೆಂದು 2 ವರ್ಷಗಳ ಹಿಂದೆಯೇ ವಿವರಿಸಿದ್ದ ನಂಬೂದೂರಿಪಾಡ್ ಅವರಿಗೆ ಧನ್ಯವಾದ ಸಲ್ಲಿಸಿ ಮರಳಿದೆ. 2019 ರ ಅಂತ್ಯದಲ್ಲಿ ಚೀನಾದಲ್ಲಿ ಹೊಸ ರೀತಿಯ ವೈರಾಣು ಕಂಡುಬಂದಿದೆ ಎಂಬ ಸುದ್ದಿ ಓದಿದಾಗ ನಿಜಕ್ಕೂ ಗಾಬರಿಯಾದೆ. ನಾನು ಮಾತನಾಡಿದ್ದ ಖ್ಯಾತ ಜ್ಯೋತಿಷಿಗಳ ಭವಿಷ್ಯವಾಣಿ ನಿಜವಾಗುತ್ತಿರುವುದು ಮನದಟ್ಟಾಗ ತೊಡಗಿತ್ತು. 2020 ರ ಜನವರಿ ಅಂತ್ಯಕ್ಕೆ ಭಾರತದಲ್ಲಿ ಕೊರೊನಾ ಮೊದಲ ಪ್ರಕರಣ ವರದಿಯಾಯಿತು. ಅದೂ ಕೇರಳದ ತ್ರಿಚೂರ್‍ನಲ್ಲಿ. ಇದೇ ತ್ರಿಚೂರ್‍ನಲ್ಲಿಯೇ ನಾನು ಮಾತನಾಡಿಸಿದ್ದ ಖ್ಯಾತ ಜ್ಯೋತಿಷಿಗಳೂ ವಾಸವಾಗಿರುವುದು ಕಾಕತಾಳೀಯ.

ಜ್ಯೋತಿಷಿಗಳು ವರ್ಷಗಳ ಹಿಂದೆಯೇ ನುಡಿದಿದ್ದಂತೆ, ಭಾವಿಸಿ ದ್ದಂತೆಯೇ, ಎಚ್ಚರಿಸಿದ್ದಂತೆಯೇ ಕೊರೊನಾ ಎಂಬ ವೈರಾಣು ದೇಶದಲ್ಲಿಡೀ ತಾಂಡವವಾಡತೊಡಗಿದೆ. ಲಕ್ಷಗಟ್ಟಲೆ ಜನರಿಗೆ ಸೋಂಕು ತಗುಲಿ ಸಾವಿರಾರು ಮಂದಿ ಕಾಣದ ವೈರಸ್‍ನಿಂದಾಗಿ ಕೊನೆಯುಸಿರೆಳೆದಿದ್ದಾರೆ. ನನ್ನ ಪ್ರಕಾರ, ಕೊರೊನಾ ಸೋಂಕು 2020 ರ ಜೂನ್ 30 ಕ್ಕೆ ಬಹುತೇಕ ನಿರ್ನಾಮವಾಗ ಬೇಕು. ಮತ್ತೆ 2021ರಲ್ಲಿ ಕೊರೊನಾ ಭಾರತ ಸೇರಿದಂತೆ ಜಗತ್ತಿನಲ್ಲಿ ರೌದ್ರನರ್ತನ ತೋರಲಿದೆ. ಭವಿಷ್ಯಕಾರರು ನುಡಿದಂತೆ. ಡಾ. ವಿನೋದ್ ಭಟ್ಟತ್ತಿರಿಪಾಡ್ ತಮ್ಮ ತರ್ಕಕ್ಕೆ ಹೀಗೆ ವಿರಾಮ ಹೇಳುತ್ತಾರೆ.

ಕೊನೇ ಹನಿ

ಭವಿಷ್ಯ ನಂಬಬೇಕೇ ? ಬೇಡವೇ ? ಅವರವರ ಭಾವನೆಗೆ ಬಿಟ್ಟ ವಿಚಾರ. ಆದರೆ ಕೇರಳದ ಇಬ್ಬರು ಖ್ಯಾತ ಜ್ಯೋತಿಷಿಗಳು ಈವರೆಗೆ ಊಹಿಸಿದ್ದು ನಿಜವಾಗಿದೆ. ನಿಜವಾಗುತ್ತಲೇ ಇದೆ. ಈ ಮೂಲಕ ಕೋವಿಡ್-19 ರ ಬಗ್ಗೆ ವಿಸ್ಮಯಕಾರಿ ಅಂಶಗಳನ್ನು ಮುಂದಿಟ್ಟಿದೆ. ಮುಂದೇನು ಕಾದಿದೆಯೋ ?