ಪ್ರತಿ ವರ್ಷದಂತೆ ಈ ವರ್ಷವೂ ರಂಝಾನ್ ಹಬ್ಬ ಸನ್ನಿಹಿತವಾಗಿದೆ. ಉಪವಾಸ ವ್ರತ ಮುಕ್ತಾಯದ ಹಂತದಲ್ಲಿದ್ದು, ಹಬ್ಬಾಚರಣೆಗೆ ತಯಾರಿ ನಡೆದಿದೆ. ಆದರೆ ಪ್ರಸಕ್ತ ವರ್ಷ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದಿರುವದರಿಂದ ಮುಸ್ಲಿಂ ಕುಟುಂಬದ ಸದಸ್ಯರು ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥನೆ, ಉಪವಾಸ ವ್ರತ ಕೊನೆಗೊಳಿಸಿ ಔತಣವನ್ನು ಮನೆ ಮಂದಿಯಷ್ಟೇ ಸೇರಿ ಮಾಡುವುದರ ಮೂಲಕ ಹಬ್ಬವನ್ನು ಆಚರಿಸಬೇಕಾದ ಅನಿವಾರ್ಯತೆ ಇದೆ. ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಇಲ್ಲ, ರಾತ್ರಿಯ ದೀರ್ಘ ಹೊತ್ತಿನ ನಮಾಝ್‍ಗಳಿಲ್ಲ, ಕೊನೆಯ ಹತ್ತು ದಿನಗಳ ರಾತ್ರಿ ಇಲ್‍ಅತಿಕಾಫ್ ಇಲ್ಲ. ಸೌಹಾರ್ದ ಬೆಸೆಯುವ ಇಫ್ತಾರ್ ಕೂಟಗಳಿಲ್ಲದ ಹೊಸ ಬಟ್ಟೆಗಳ ಖರೀದಿಯಿಲ್ಲದ, ಈದುಲ್ ಫಿತ್ರ್ ಈ ಬಾರಿಯದ್ದಾಗಿದೆ. ದೇವನ ಸಂಪ್ರೀತಿ ಮತ್ತು ತೃಪ್ತಿಯನ್ನು ಗಳಿಸಲು ವಿಶ್ವಾಸಿಗಳು ಕಳೆದ 30 ದಿನಗಳು ತಮ್ಮ ಇತಿಮಿತಿಗಳೊಳಗೆ ಶ್ರಮಿಸಿದರು. ದೀನ-ದಲಿತರ, ಮರ್ದಿತರ, ಬಡವರ ಕಣ್ಣೀರನ್ನು ಒರೆಸಲು ಸಾಕಷ್ಟು ಯತ್ನಿಸಲಾಯ್ತು. ಅವರ ವಿಮೋಚನೆಗಾಗಿ ಹೃದಯಾಂತರಾಳದಿಂದ ಅಲ್ಲಾಹನಲ್ಲಿ ಪ್ರಾರ್ಥನೆಗೈಯಲಾಯಿತು. ಕಳೆದ 30 ದಿನಗಳು ತಮ್ಮ ಮನೆಗಳನ್ನೇ ಮಸೀದಿಗಳನ್ನಾಗಿಸಿ ಕುಟುಂಬ ಸದಸ್ಯರೊಂದಿಗೆ ಅಲ್ಲಾಹನೊಡನೆ ಬೇಡಿದರು. ದೇವರನ್ನು ಹೊರತುಪಡಿಸಿ, ಭೂಮಿಯಲ್ಲಿ ಮನುಷ್ಯರ ಮೇಲೆ ಅದಿಪತ್ಯ ಸ್ಥಾಪಿಸಿದ ಎಲ್ಲ ಶಕ್ತಿಗಳ ವಿರುದ್ಧ ಮತ್ತು ಸ್ವತಃ ತನ್ನಲ್ಲೇ ಉಂಟಾಗುವ ದುರಾಸೆ, ಅಹಂಕಾರ, ಅಸೂಯೆ ಮುಂತಾದ ಮಾಲಿನ್ಯಗಳ ವಿರುದ್ಧ ಹೋರಾಡಿದ ದಿನಗಳು ಕಳೆದವು. ಈದ್ ದಿನದಂದು ವಿಶ್ವಾಸಿಯು ಸ್ವಾಭಾವಿಕವಾಗಿ ಸಂತೋಷಪಡುತ್ತಾನೆ. ಆದರೆ, ಮೂವತ್ತು ದಿನಗಳ ಉಪವಾಸ ಆಚರಿಸುವ ಮತ್ತು ದೇವನ ಆರಾಧನೆ, ಜಪ-ತಪಗಳಲ್ಲಿ ಕಳೆಯುವ, ನಿರ್ಗತಿಕರಿಗೆ, ಬಡವರಿಗೆ ನೆರವಾಗುವ ಅವಕಾಶವನ್ನು ಪಡೆದು ಜೀವನವನ್ನು ಮತ್ತೊಮ್ಮೆ ಪಾವನಗೊಳಿಸಿದುದಕ್ಕಾಗಿ ಈ ಸಂಭ್ರಮ. ಈದುಲ್ ಫಿತ್ರ್ ಕೃತಜ್ಞತೆಯ ಮತ್ತು ಸಹಾನುಭೂತಿಯ ದಿನವಾಗಿದೆ. ಉಪವಾಸ, ನಮಾಝ್, ಝಕಾತ್, ಹಜ್ಜ್ ಮುಂತಾದ ಇಸ್ಲಾಮಿನ ಎಲ್ಲ ಆರಾಧನೆಗಳು ಸಾಮೂಹಿಕವಾಗಿವೆ. ಆದರೆ, ಕಳೆದೆರಡು ತಿಂಗಳುಗಳು ನಾವು ಸಾಮೂಹಿಕತೆಯನ್ನು ಬಿಟ್ಟು ನಮ್ಮ ನಮ್ಮಲ್ಲಿಗೆ ಸೀಮಿತಗೊಂಡ ದಿನಗಳಾಗಿದ್ದವು. ತಮ್ಮ ಎಲ್ಲ ಆರಾಧನೆಗಳು ಮನೆಗಳಿಗೆ ಸೀಮಿತಗೊಳಿಸಲಾಯಿತು. ನಮ್ಮ ಎಲ್ಲಾ ಹತೋಟಿಗಳನ್ನು ಕೋವಿಡ್-19 ಕೈಗೆತ್ತಿಕೊಂಡಿತ್ತು. ನಮ್ಮ ತೀರ್ಮಾನಗಳು ಕೋವಿಡ್-19ನ್ನು ಅವಲಂಭಿಸಿತ್ತು. ಆದರೂ ದೇವರ ತೀರ್ಮಾನ ಮಾತ್ರ ವಿಶ್ವಾಸವನ್ನು ನಿಯಂತ್ರಿಸುತ್ತಿತ್ತು. ಎಂತಹ ಸಂಕೀರ್ಣ ಪರಿಸ್ಥಿತಿಯಲ್ಲಿಯೂ ದೇವನೆÀಡೆಗೆ ಮರಳಲು ಈ ರಂಝಾನ್ ನಮಗೆ ಆಹ್ವಾನ ನೀಡಿತ್ತು. ಕೋವಿಡ್-19ನ್ನು ಓಡಿಸಲು ನಾವೆಲ್ಲರೂ ಸಾಧ್ಯವಿರುವುದೆಲ್ಲವನ್ನು ಮಾಡುತ್ತಿದ್ದೇವೆ. ವಿಶ್ವಾಸಿಗಳು ತಮ್ಮ ಕೈಯಲ್ಲಿರುವ ಬಹುದೊಡ್ಡ ಗುರಾಣಿಯಾದ ಪ್ರಾರ್ಥನೆಯಿಂದ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದರು. ರಂಝಾನ್ ಆತ್ಮಾವಲೋಕನಕ್ಕೆ ಅವಕಾಶ ಒದಗಿಸಿದೆ. ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬದುಕು ಪೂರ್ಣವಾಗಿಯೂ ದೇವಾದೇಶದಂತೆ ಆಗುತ್ತಿದೆಯೇ ಎಂಬ ಅವಲೋಕನ ನಡೆಸಲು ರಂಝಾನ್ ಅವಕಾಶ ಒದಗಿಸಿದೆ.

ಒಂದು ತಿಂಗಳು ಅಳವಡಿಸಿಕೊಂಡ ಕ್ಷಮಾಶೀಲತೆ ಮತ್ತು ಸಹಾನುಭೂತಿಯ ಗುಣಗಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಪ್ರಯೋಜನವಾದಲ್ಲಿ ಅವನು ಯಶಸ್ವಿಯಾದ ಎಂದು ಅರ್ಥ. ವೈಯಕ್ತಿಕ ಜೀವನದಲ್ಲಿ ಧಾರ್ಮಿಕ ವ್ಯಕ್ತಿತ್ವವು ಬೆಳೆದು ಬರುವುದರಲ್ಲಿ ರಂಝಾನ್ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ವ್ಯಕ್ತಿಯಲ್ಲಿ ಸಾಂಘಿಕ ಪ್ರಜ್ಞೆಯನ್ನು ಮೂಡಿಸುತ್ತದೆ. ಹಲವು ಸಾಮಾಜಿಕ ಸಂದರ್ಭಗಳಲ್ಲಿನ ಉದ್ವೇಗಗಳನ್ನು ಅದು ಕಡಿತ ಗೊಳಿಸಿತು. ರಂಝಾನ್ ತಿಂಗಳ ಉಪವಾಸದಿಂದಾಗಿ ವ್ಯಕ್ತಿಯು ಸದಾ ಹೊಣೆಗಾರಿಕೆಯ ಪ್ರಜ್ಞೆಯನ್ನು ಹೊಂದಿರುವಂತ ಸ್ಥಾನಕ್ಕೆ ಕೊಂಡೊಯ್ಯಲ್ಪಡುತ್ತಾನೆ.

ರಂಝಾನಿನ ಮೂಲಕ ತಾನು ಪಡೆದುಕೊಂಡ ಸಹಜೀವಿಗಳೊಂದಿಗಿನ ಕರುಣೆ, ದಯೆ, ಸಹಾನುಭೂತಿ ಈದುಲ್‍ಫಿತ್ರ್ ಹಬ್ಬದ ಮೂಲಕವೂ ಮುಂದುವರಿಸುತ್ತಾನೆ. ಆದುದರಿಂದಲೇ “ಫಿತ್ರ್ ಝಕಾತ್” ಎಂಬ ಧಾನ್ಯಗಳ ದಾನವನ್ನು ಇಸ್ಲಾಂ ಕಡ್ಡಾಯಗೊಳಿಸಿದೆ. ಹಬ್ಬಾಚರಣೆಯ ವೇಳೆಯಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದಲೇ ಇದನ್ನು ಕಡ್ಡಾಯಗೊಳಿಸಲಾಗಿದೆ. ತನ್ಮೂಲಕ ಇಸ್ಲಾಂ ಒಂದು ಹಸಿವುಮುಕ್ತ ಸಮಾಜ ನಿರ್ಮಾಣದ ಕಲ್ಪನೆಯನ್ನು ಮುಂದಿಡುತ್ತದೆ. ಹಬ್ಬದ ದಿನದಂದು ತನ್ನ ಅಗತ್ಯಗಳನ್ನು ಪೂರೈಸಿ ಮನೆಯಲ್ಲಿ ಆಹಾರಧಾನ್ಯ ಉಳಿದಿರುವ ಎಲ್ಲರೂ ಫಿತ್ರ್ ಝಕಾತ್ ನೀಡುವುದು ಕಡ್ಡಾಯವಾಗಿದೆ.

“ಈದ್” ಎಂದರೆ ಮರಳಿ ಬರುವುದು ಎಂಬ ಅರ್ಥವೂ ಇದೆ. ಈದುಲ್ ಫಿತ್ರ್ ಎಂಬುದು ಮರಳುವಿಕೆಯ ಹಬ್ಬವಾಗಿದೆ. ಹಾಗೆಯೇ ಕ್ಷಮಾಪಣೆಯ ಹಬ್ಬವೂ ಆಗಿದೆ. ನಮಾಝ್, ಉಪವಾಸ ವೃತ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ಉಲ್ಲಂಘಿಸಿದವರಿಗೆ ಕ್ಷಮಾಪಣೆಯನ್ನು ನೀಡಿಕೊಂಡು ಮರಳಿ ಬರಲೂ ಧರ್ಮ ಅವಕಾಶವನ್ನು ಕಲ್ಪಿಸುತ್ತದೆ. ಜಗದೊಡೆಯನ ಮುಂದೆ ಎಲ್ಲಾ ತಪ್ಪುಗಳನ್ನೂ ಮುಂದಿರಿಸಿ ಕ್ಷಮೆಯನ್ನು ಅಪೇಕ್ಷಿಸಿ ವಿಶ್ವಾಸದ ಹಾದಿಯೆಡೆಗೆ ಮರಳಲು ಇಸ್ಲಾಂ ಬೇಡಿಕೆಯನ್ನಿಡುತ್ತದೆ. ರಂಝಾನಿನ ಮಹತ್ವವನ್ನು ತಿಳಿಸುವ ಪವಿತ್ರ ಕುರ್‍ಆನಿನ ವಾಕ್ಯಗಳು ಈ ರೀತಿ ಇವೆ: “ಓ ಸತ್ಯ ವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮ ನಿಷ್ಠೆಯ ಗುಣವಿಶೇಷ ಉಂಟಾಗುವುದೆಂದು ಆಶಿಸಲಾಗಿದೆ”.(ಅಧ್ಯಾಯ:2:ಸೂಕ್ತ 183)

ಒಬ್ಬ ಮುಸ್ಲಿಂ ಇಡೀ ಒಂದು ತಿಂಗಳನ್ನು ತನ್ನ ಜೀವನದ, ವೈಚಾರಿಕ, ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ತರಬೇತಿಗಾಗಿ ಮೀಸಲಿಟ್ಟಿದುದರಿಂದ ಈ ತಿಂಗಳಿಗೆ ಮಹತ್ವ ಹೆಚ್ಚುತ್ತದೆ. ಈದುಲ್ ಫಿತ್ರ್ ಆಚರಣೆಯೊಂದಿಗೆ ಅವನು ಅದನ್ನು ಮುಂದುವರಿಸುತ್ತಾನೆ. ಮಾನವನು ತನ್ನ ವೈಯಕ್ತಿಕ ಜೀವನದಲ್ಲಿ ಸಚ್ಚರಿತನಾಗಿರುವಂತೆ ಸಾಮೂಹಿಕ ಬದುಕಿನಲ್ಲೂ ಆಗಿರಬೇಕೆಂದು ಇಸ್ಲಾಂ ಬಯಸುತ್ತದೆ. ತರಬೇತಿಯ ಉದ್ದೇಶವೂ ಅದುವೇ ಆಗಿದೆ. ಒಟ್ಟಿನಲ್ಲಿ ಮನುಷ್ಯನಿಗೆ ಉತ್ತಮ ತರಬೇತಿಗಾಗಿ ರಂಝಾನ್ ತಿಂಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಅದರ ಸಂಬಂಧ ಪವಿತ್ರ ಕುರ್‍ಆನ್‍ನೊಂದಿಗೆ ಸ್ಥಾಪಿಸಲಾಗಿದೆ. ಪವಿತ್ರ ಕುರ್‍ಆನಿನ ಅವತೀರ್ಣದ ಉದ್ದೇಶ ರಮಝಾನ್ ವ್ರತಗಳ ಉದ್ದೇಶಕ್ಕಿಂತ ಭಿನ್ನವಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಇಡೀ ಮಾನವ ಸಮೂಹಕ್ಕೆ ತಲೆದೋರಿರುವ ಸಂಕಷ್ಟವನ್ನು ಹೋಗಲಾಡಿಸಲು ಪ್ರತಿ ಕುಟುಂಬದ ಸದಸ್ಯರು ಅವರವರ ಮನೆಯಲ್ಲೇ ಪ್ರಾರ್ಥಿಸಿ ಅಲ್ಲಹಾನ ಕೃಪೆಗೆ ಪಾತ್ರರಾಗೋಣ.

?ಪಿ. ಕೆ.ಅಬ್ದುಲ್ ರೆಹೆಮಾನ್,

ವೀರಾಜಪೇಟೆ