ಕಸ್ತೂರಿ ರಂಗನ್ ವರದಿ ಏಕರೂಪ ಜಾರಿಗೆ ಸಿ.ಎಂ. ಅಸಮ್ಮತಿ
ಬೆಂಗಳೂರು, ಮೇ 21: ಪ್ರತಿ ರಾಜ್ಯದ ಸಮಸ್ಯೆಗಳು, ಸವಾಲುಗಳು ಭಿನ್ನವಾಗಿರುವುದರಿಂದ ಭಾರತ ಸರ್ಕಾರವು ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೆ ಏಕರೂಪದ ಅಧಿಸೂಚನೆ ಹೊರಡಿಸುವುದು ಸರಿಯಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗೋವಾ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ವೀಡಿಯೋ ಸಂವಾದ ನಡೆಸಿದರು. ವೀಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು, ವಿವಿಧ ಹಂತಗಳ ಜನಪ್ರತಿನಿಧಿಗಳು ಹಾಗೂ ಸಚಿವ ಸಂಪುಟವು ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ಈಗಿರುವ ಸ್ವರೂಪದಲ್ಲಿ ತಿರಸ್ಕರಿಸಿದೆ. ಅದರಲ್ಲೂ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಿದ್ದನ್ನು ತಿರಸ್ಕರಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿ ರಾಜ್ಯದ ಸಮಸ್ಯೆಗಳು, ಸವಾಲುಗಳು ಭಿನ್ನವಾಗಿರುವುದರಿಂದ ಭಾರತ ಸರ್ಕಾರವು ಎಲ್ಲ ರಾಜ್ಯಗಳಿಗೆ ಏಕರೂಪದ ಅಧಿಸೂಚನೆ ಹೊರಡಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿ, ಪ್ರತಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕವಾಗಿ ಚರ್ಚಿಸುವುದಾಗಿ ತಿಳಿಸಿದರು. ರಾಜ್ಯದ ಅರಣ್ಯ ಸಚಿವ ಆನಂದ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅರಣ್ಯ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಸಂದೀಪ್ ದವೆ ಭಾಗವಹಿಸಿದ್ದರು.
ಆರೋಗ್ಯ ಸೇತು ಆಪ್ ಕಡ್ಡಾಯ: ಸಚಿವ ಸುಧಾಕರ್
ಬೆಂಗಳೂರು, ಮೇ 21: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ ಕುರಿತು ಕೇಂದ್ರ ಸರ್ಕಾರ ಇತ್ತೀಚೆಗೆ ಆರೋಗ್ಯ ಸೇತು ಆಪ್ ಅನ್ನು ಪರಿಚಯಿಸಿತ್ತು. ಅಲ್ಲದೆ, ಎಲ್ಲರೂ ಇದನ್ನು ಕಡ್ಡಾಯವಾಗಿ ಮೊಬೈಲ್ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯ. ನಿಮ್ಮ ಗೌಪ್ಯತೆ ಬಹಿರಂಗವಾಗುತ್ತದೆ ಎಂಬ ಕುರಿತು ಸಂದೇಹ ಪಡುವ ಅಗತ್ಯ ಇಲ್ಲ. ಇಲ್ಲಿ ಎಲ್ಲರ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಅಂಫಾನ್ನಿಂದ ಪಶ್ಚಿಮ ಬಂಗಾಳದಲ್ಲಿ 72 ಮಂದಿ ಸಾವು
ಕೋಲ್ಕತ್ತ, ಮೇ 21: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಅಂಫಾನ್ ಚಂಡಮಾರುತ ಸಂಬಂಧೀ ಅವಘಡಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72 ಮಂದಿ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳದÀ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. 72 ಮಂದಿ ಪೈಕಿ 15 ಮಂದಿ ಕೋಲ್ಕತ್ತಾದಲ್ಲಿಯೇ ಮೃತಪಟ್ಟಿದ್ದು, ಇತರ ಐದು ಜಿಲ್ಲೆಗಳಲ್ಲಿ ಹೆಚ್ಚು ಸಾವು ಸಂಭವಿಸಿವೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಅಂಫಾನ್ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಅಲ್ಲದೆ ಅಂಫಾನ್ ಚಂಡಮಾರುತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೀದಿ ಮನವಿ ಮಾಡಿದ್ದಾರೆ. ಗರಿಷ್ಠ ಗಾಳಿಯ ವೇಗ 190 ಕಿ.ಮೀ. ಮತ್ತು ಧಾರಾಕಾರ ಮಳೆಯೊಂದಿಗೆ ಅಬ್ಬರಿಸುತ್ತಿರುವ ಅಫಾನ್ನಿಂದ ಸುಂದರಬನ್ ಪ್ರದೇಶ ಮತ್ತು ದಕ್ಷಿಣ ಬಂಗಾಳದ ಆರು ಜಿಲ್ಲೆಗಳು ತತ್ತರಿಸಿವೆ. ಒಡಿಶಾದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಆತಂಕ ಸೃಷ್ಟಿಸಿದ್ದು, ಸಂತ್ರಸ್ತರ ಸ್ಥಳಾಂತರ ಕಾರ್ಯ ಭರದಿಂದ ಸಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಸ್ಪ್ರೆಸ್ ರೈಲು ಸಂಚಾರ ಆರಂಭ
ಬೆಂಗಳೂರು, ಮೇ 21: ಶುಕ್ರವಾರದಿಂದ ಪ್ರತಿ ದಿನ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ. ಪ್ರಾರಂಭಿಕವಾಗಿ ಮೈಸೂರು-ಬೆಂಗಳೂರು ನಡುವೆ ಮಾತ್ರ ರೈಲ್ವೆ ಸೇವೆ ಆರಂಭವಾಗಲಿದೆ. ಒಂದು ರೈಲಿನಲ್ಲಿ 14 ಕೋಚ್, ಒಂದು ಬೋಗಿಯಲ್ಲಿ 106 ಜನರಿಗೆ ಅವಕಾಶವಿರುತ್ತದೆ. ಬೆಂಗಳೂರು-ಮೈಸೂರು ವಿಶೇಷ ರೈಲು ಸಂಖ್ಯೆ 06503/06504 ಪ್ರತಿದಿನ ಬೆಳಿಗ್ಗೆ 9.20ಕ್ಕೆ ಬೆಂಗಳೂರು ಬಿಡಲಿದೆ. ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪಲಿದೆ. ಇದೇ ರೈಲು ಪ್ರತಿದಿನ ಮಧ್ಯಾಹ್ನ 1.45ಕ್ಕೆ ಮೈಸೂರು ಬಿಟ್ಟು ಬೆಂಗಳೂರನ್ನು ಸಂಜೆ 5 ಗಂಟೆಗೆ ತಲುಪಲಿದೆ. ಬೆಂಗಳೂರು ಹಾಗೂ ಮೈಸೂರಿನ ನಡುವೆ ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿಗಳಲ್ಲಿ ರೈಲು ನಿಲುಗಡೆ ವ್ಯವಸ್ಥೆ ಇರಲಿದೆ. ಭಾನುವಾರ ಹೊರತುಪಡಿಸಿ ಪ್ರತಿದಿನವೂ ಸಂಚಾರವಿರುತ್ತದೆ. ಆದರೆ, ನಿಲ್ದಾಣದಲ್ಲಿ ಟಿಕೇಟ್ ವಿತರಣೆ ವ್ಯವಸ್ಥೆ ಇರೋದಿಲ್ಲ. ಸಾರ್ವಜನಿಕರು ಆನ್ಲೈನ್ ಮೂಲಕವೇ ಟಿಕೇಟ್ ಪಡೆದು ಆಗಮಿಸಬೇಕಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.