ಮಡಿಕೇರಿ ಮಾತ್ರವಲ್ಲ - ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರಗಳೂ ಸೇರಿವೆ
ಮಡಿಕೇರಿ, ಮೇ 21 : ಮಡಿಕೇರಿ ನಗರಸಭೆ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಜಿಲ್ಲೆಯ ಪಟ್ಟಣ ಪಂಚಾಯಿತಿಗಳಲ್ಲೂ ದರ ಏರಿಕೆಯಾದ ಮಾಹಿತಿ ಲಭ್ಯವಾಗಿದೆ.
ಕುಶಾಲನಗರದಲ್ಲಿ ಶೇಕಡಾ 18 ರಷ್ಟು ಏರಿಕೆಯಾಗಿದ್ದು, ವೀರಾಜಪೇಟೆಯಲ್ಲಿ 17 ಹಾಗೂ ಸೋಮವಾರಪೇಟೆಯಲ್ಲಿ 15ರಷ್ಟು ತೆರಿಗೆಯನ್ನು ಏರಿಸಲಾಗಿದೆ. ಇದಕ್ಕೆ ಶೇಕಡಾ 26 ಸೆಸ್ ಅನ್ನು ಕೂಡ ತೆರಿಗೆದಾರ ಭರಿಸಬೇಕಿದೆ.
ಕುಶಾಲನಗರದಲ್ಲಿ ಸುಮಾರು 70 ಸಾವಿರ ವಾರ್ಷಿಕ ತೆರಿಗೆ ಪಾವತಿಸುವ ಉದ್ಯಮಿಯೊಬ್ಬರು ಇಂದು ‘ಶಕ್ತಿ’ಯನ್ನು ಸಂಪರ್ಕಿಸಿ ತೆರಿಗೆ ಹೆಚ್ಚಳದಿಂದ ತಾನು ಈ ಬಾರಿ ರೂ. 15876 ಹೆಚ್ಚುವರಿ ಹಣ ಪಾವತಿಸಬೇಕಿದೆ ಎಂದು ಅಳಲು ತೋಡಿಕೊಂಡರು.
ಮಡಿಕೇರಿಯಲ್ಲೂ ಶೇಕಡಾ 15 ರಷ್ಟು ತೆರಿಗೆ ಹೆಚ್ಚಾಗಿದ್ದು, ಈ ಬಗ್ಗೆ ತಾ. 22ರಂದು (ಇಂದು) ಜಿಲ್ಲೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮನವಿ ಸಲ್ಲಿಸಲು ತೀರ್ಮಾನಿಸಿದೆ. ಈಗಾಗಲೇ ಮಡಿಕೇರಿಯಲ್ಲಿ ಹೆಚ್ಚುವರಿ ತೆರಿಗೆ ಪಾವತಿಗೆ ತಡೆ ನೀಡುವಂತೆ ಶಾಸಕ ಅಪ್ಪಚ್ಚು ರಂಜನ್ ನಗರಸಭಾ ಆಯುಕ್ತರಿಗೆ ಸೂಚಿಸಿದ್ದು, ಅವರು ಕೂಡಾ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.