ವೀರಾಜಪೇಟೆ, ಮೇ 21: ಪಟ್ಟಣದ ಜೈನರ ಬೀದಿಯಲ್ಲಿನ ದಿನಸಿ ವಸ್ತುಗಳ ಸಗಟು ಮಾರಾಟ ಮಳಿಗೆಯೊಂದರಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿದ್ಯುತ್ ಅಗ್ನಿ ಅನಾಹುತದಲ್ಲಿ ಸುಮಾರು 10 ಲಕ್ಷ ಮೌಲ್ಯದ ಸಾಮಗ್ರಿಗಳು ನಾಶವಾಗಿವೆ.
ವೀರಾಜಪೇಟೆಯ ಸತೀಶ್ ಎಂಬವರಿಗೆ ಸೇರಿದ ಮಳಿಗೆಯಲ್ಲಿ ಬುಧವಾರ ರಾತ್ರಿ 9ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಾಕ್ಡೌನ್ ನಿರ್ಬಂಧವಿದ್ದುದರಿಂz ಮಾಲೀಕರುÀ ಮಳಿಗೆಯನ್ನು ರಾತ್ರಿ 7ಕ್ಕೆ ಮುಚ್ಚಿ ಮನೆಗೆ ತೆರಳಿದ್ದರು. ರಾತ್ರಿ 8.45ರ ವೇಳೆಯಲ್ಲಿ ಅಂಗಡಿಯಿಂದ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡ ಕೂಡಲೇ ಅಕ್ಕಪಕ್ಕದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ಬೆಂಕಿಯನ್ನು ಆರಿಸಲು ಸಾಧ್ಯವಾಗಿಲ್ಲವೆನ್ನಲಾಗಿದೆ.
ರಾತ್ರಿ 9.45 ಗಂಟೆಗೆ ಗೋಣಿಕೊಪ್ಪಲಿನಲ್ಲಿರುವ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಬೆಂಕಿಯನ್ನು ಆರಿಸಿದರು. ಅಷ್ಟರೊಳ ಗಾಗಲೇ ಬೆಂಕಿಯು ಅಂಗಡಿಯ ಮೂರು ಮಳಿಗೆಗಳಿಗೆ ವ್ಯಾಪಿಸುವ ಮೂಲಕ ಸಾಕಷ್ಟು ಪ್ರಮಾಣದಲ್ಲಿ ದಿನನಿತ್ಯ ಬಳಕೆಯ ವಸ್ತುಗಳನ್ನು ನಾಶ ಮಾಡಿತ್ತು. ವಿದ್ಯುತ್ ಶಾರ್ಟ್ ಸರ್ಕೂಟ್ನಿಂದ ಬೆಂಕಿ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಬೆಂಕಿ ದುರಂತದ ಸುದ್ದಿ ಕೇಳುತ್ತಲೇ ನಗರ ಪೊಲೀಸ್ ಅಧಿಕಾರಿಗಳು ಘಟನೆ ಸ್ಥಳಕ್ಕೆ ಧಾವಿಸಿದರು. ಈ ಕುರಿತು ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಕಿ ದುರಂತ ಕಾಣಿಸಿಕೊಂಡ ಕಟ್ಟಡದ ಮೇಲೆ ವೀರಾಜಪೇಟೆ ಶಾಖೆಯ ಕರ್ನಾಟಕ ಬ್ಯಾಂಕ್ ಇದ್ದು ಬ್ಯಾಂಕ್ ಕಟ್ಟಡಕ್ಕೆ ಯಾವುದೇ ಹಾನಿ ಸಂಭವಿಸಿಲ್ಲವೆಂದು ಹೇಳಲಾಗಿದೆ.