ಮಡಿಕೇರಿ, ಮೇ 19 : ಕೇಂದ್ರ ಸರಕಾರವು ತಾ.18ರಂದು ಲಾಕ್‍ಡೌನ್ 4 ಘೋಷಣೆ ಮಾಡಿತು. ಮೇ.31 ರ ವರೆಗೆ ಲಾಕ್‍ಡೌನ್-4 ದೇಶಾದ್ಯಂತ ಜಾರಿಯಲ್ಲಿರಲಿದ್ದು, ಆಯಾ ರಾಜ್ಯ ಸರ್ಕಾರಗಳಿಗೆ ರಾಜ್ಯಗಳಿಗೆ ತಕ್ಕಂತೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲು ಸೂಚನೆ ನೀಡಿತ್ತು. ಇದರನ್ವಯ ಕರ್ನಾಟಕದಲ್ಲಿ ಇಂದಿನಿಂದ ಸರಕಾರಿ ಹಾಗೂ ಖಾಸಗಿ ಬಸ್‍ಗಳ ಓಡಾಟಕ್ಕೆ, ಕೆಲವು ಷರತ್ತುಗಳನ್ನು ಪಾಲಿಸುವ ಮೂಲಕ ಅನುಮತಿ ನೀಡಲಾಯಿತು. ಈ ಹಿಂದೆ ಸರಕಾರಿ ಬಸ್‍ಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅವಕಾಶ ದೊರಕಿತ್ತು. ಇಂದಿನಿಂದ, ರಾಜ್ಯ ಸರಕಾರ ಅಂತರ್ ಜಿಲ್ಲಾ ಬಸ್ ಸಂಚಾರಕ್ಕೆ ಅವಕಾಶ ನೀಡಿದ್ದ ಪರಿಣಾಮ, ಜಿಲ್ಲೆಯ ವಿವಿಧೆಡೆ ಗರಿಷ್ಠ 30 ಪ್ರಯಾಣಿಕರನ್ನು ಒಳಗೊಂಡು, ಬಸ್‍ಗಳು ಬೆಂಗಳೂರು, ಮೈಸೂರು, ಪುತ್ತೂರುಗಳಿಗೆ ಹಾಗೂ ಜಿಲ್ಲೆಯಲ್ಲಿಯೂ ಹಲವೆಡೆ ತೆರಳಿದವು. ಮಕ್ಕಳು, ಹಿರಿಯ ನಾಗರಿಕರಿಗೆ ಪ್ರಯಾಣ ನಿಷೇಧ 10 ವರ್ಷ ವಯಸ್ಸಿಗಿಂತ ಕೆಳ ಇರುವ ಮಕ್ಕಳು ಹಾಗೂ 65 ವರ್ಷ ಪೂರೈಸಿದ ನಾಗರಿಕರಿಗೆ ಬಸ್‍ನಲ್ಲಿ ಸಂಚರಿಸಲು ಅವಕಾಶವಿರುವುದಿಲ್ಲ ಎಂದು ಮಡಿಕೇರಿ ಕೆ.ಎಸ್.ಆರ್.ಟಿ.ಸಿ ಘಟಕದ ವ್ಯವಸ್ಥಾಪಕಿ ಗೀತಾ ತಿಳಿಸಿದ್ದಾರೆ. ಮಡಿಕೇರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ಜಿಲ್ಲಾಕೇಂದ್ರ ಮಡಿಕೇರಿಯ ಸರಕಾರಿ ಬಸ್ ನಿಲ್ದಾಣದಲ್ಲಿಂದು ಪ್ರಯಾಣಿಕರ ‘ಥರ್ಮಲ್ ಸ್ಕ್ರೀನಿಂಗ್’ ಕಾರ್ಯ ಚುರುಕಾಗಿ ನಡೆಯುತ್ತಿತ್ತು. ಬಸ್ ನಿಲ್ದಾಣದ ಆಗಮನದಲ್ಲೇ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ‘ಥರ್ಮಲ್ ಸ್ಕ್ರೀನಿಂಗ್’ ಕಾರ್ಯದಲ್ಲಿ ನಿರತರಾಗಿದ್ದರು. ನಿಲ್ದಾಣಕ್ಕೆ ಆಗಮಿಸುವ ಎಲ್ಲರನ್ನೂ ಕಡ್ಡಾಯವಾಗಿ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುತ್ತಿತ್ತು.

ಇತರ ಜಿಲ್ಲೆಗಳಿಂದ ಬಂದವರಿಗೆ ಸ್ಕ್ರೀನಿಂಗ್ ಇಲ್ಲ

ರಾಜ್ಯದ ವಿವಿಧೆಡೆಗಳಿಂದ ಜಿಲ್ಲೆಗೆ ಆಗಮಿಸುವವರಿಗೆ

(ಮೊದಲ ಪುಟದಿಂದ) ಯಾವುದೇ ಸ್ಕ್ರೀನಿಂಗ್ ಇಲ್ಲ. ಪ್ರಯಾಣಿಕರು ಹೊರಟ ಜಿಲ್ಲೆಗಳಲ್ಲಿನ ಬಸ್ ನಿಲ್ದಾಣದಲ್ಲಿಯೇ ಅವರಿಗೆ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದು ಮಡಿಕೇರಿ ಕೆ.ಎಸ್.ಆರ್.ಟಿ.ಸಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ಮಾಹಿತಿ ನೀಡಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆಯವರೆಗೆ ಮಡಿಕೇರಿಯಿಂದ ಪುತ್ತೂರಿಗೆ 2 ಬಸ್, ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಮೈಸೂರಿಗೆ 2 ಬಸ್ ಹಾಗೂ ವೀರಾಜಪೇಟೆ ಮಾರ್ಗವಾಗಿ 2 ಬಸ್‍ಗಳು ಸಂಚರಿಸಿವೆ. ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಬೆಂಗಳೂರಿಗೆ 4 ಬಸ್ ತೆರಳಿವೆ ಎಂದು ಅವರು ತಿಳಿಸಿದ್ದಾರೆ.

ನಾಪೆÇೀಕ್ಲು: ಮಡಿಕೇರಿ-ಬೆಟ್ಟಗೇರಿ ಮೂಲಕ ಭಾಗಮಂಡಲಕ್ಕೆ ಬಸ್ ಸಂಚರಿಸಿದೆ. ಆದರೆ ನಾಪೆÇೀಕ್ಲುವಿಗೆ ಯಾವದೇ ಕೆಎಸ್‍ಆರ್‍ಟಿಸಿ ಬಸ್‍ನ ಆಗಮನವಾಗಿಲ್ಲ. ಉಳಿದಂತೆ ಸರಕು ಸಾಗಣೆ ಲಾರಿಗಳ ಓಡಾಟ ಕಂಡು ಬಂತು. ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಕಚೇರಿ ವೇಳೆಯಲ್ಲಿ ನಾಪೆÇೀಕ್ಲುವಿನಿಂದ ಮಡಿಕೇರಿಗೆ ಮತ್ತು ಮಡಿಕೇರಿಯಿಂದ ನಾಪೆÇೀಕ್ಲುವಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಓಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವೀರಾಜಪೇಟೆ: ಸಾರಿಗೆ ಸಂಸ್ಥೆಯ ಮೈಸೂರು ಡಿಪೋವಿನಿಂದ ಎರಡು ಬಸ್ಸು ಹಾಗೂ ಹುಣಸೂರು ಡಿಪೋವಿನಿಂದ ಒಂದು ಬಸ್ಸು ವೀರಾಜಪೇಟೆಗೆ ಬಂದು ಬಸ್ಸಿನಲ್ಲಿ ಅಂತರ ಕಾಯ್ದುಕೊಂಡು 30 ಮಂದಿ ಪ್ರಯಾಣಿಕರೊಂದಿಗೆ ಮೈಸೂರಿಗೂ ಹುಣಸೂರಿಗೂ ಸಂಚಾರ ಆರಂಭಿಸಿತು. ವೀರಾಜಪೇಟೆ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣದ ನಿಯಂತ್ರಣಾಧಿಕಾರಿ ಪ್ರಕಾರ ನಾಳೆಯಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಂಚಾರ ನಡೆಯಲಿದೆ.

ಕುಶಾಲನಗರ: ಲಾಕ್‍ಡೌನ್ ತೆರವುಗೊಳಿಸಿದ ಬೆನ್ನಲ್ಲೇ ಕುಶಾಲನಗರ-ಮಡಿಕೇರಿ ನಡುವೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಪ್ರಾರಂಭಗೊಳ್ಳುವುದರೊಂದಿಗೆ ಪ್ರಯಾಣಿಕರ ಸಂಖ್ಯೆ ಏರತೊಡಗಿದೆ. ಪ್ರತಿ ಬಸ್‍ಗಳಲ್ಲಿ 30 ಜನರನ್ನು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು ಸ್ಥಳೀಯ ಬಸ್ ನಿಲ್ದಾಣದಲ್ಲಿ ಅವರುಗಳ ಸಂಪರ್ಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.

ಕುಶಾಲನಗರದಿಂದ ಮಡಿಕೇರಿಗೆ ಬೆಳಗಿನ ವೇಳೆ ಪ್ರಯಾಣಿಕರ ಒತ್ತಡ ಅಧಿಕವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರವನ್ನೇ ಮರೆತಂತಹ ದೃಶ್ಯ ಕಂಡುಬಂತು. ಮಧ್ಯಾಹ್ನ ವೇಳೆಗೆ ಹೆಚ್ಚುವರಿ ಬಸ್‍ಗಳನ್ನು ಒದಗಿಸಲಾಗಿದೆ ಎಂದು ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.

ಕುಶಾಲನಗರದಿಂದ ಮೈಸೂರಿಗೆ ಎರಡು ಬಸ್‍ಗಳು, ಕುಶಾಲನಗರ-ಮಡಿಕೇರಿ ದಾರಿಯಲ್ಲಿ ಅರ್ಧ ಗಂಟೆಗೆ ಒಂದು ಬಸ್‍ನಂತೆ ಸಂಚಾರ ನಡೆಸಿದವು. ಮೈಸೂರಿನಿಂದ ಮಂಗಳೂರಿಗೆ ಕೂಡ ಬಸ್ ಸಂಚಾರ ಕಲ್ಪಿಸಲಾಗಿದ್ದು ಸೋಮವಾರಪೇಟೆಗೆ ಒಂದು ಬಸ್ ಸಂಚರಿಸುತ್ತಿದೆ. ಬಸ್ ನಿಲ್ದಾಣದಲ್ಲಿ ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕುಶಾಲನಗರ ಬಸ್ ನಿಲ್ದಾಣ ಮೂಲಕ ಒಟ್ಟು 422 ಬಸ್ ಮಾರ್ಗಗಳು ಓಡಾಡಬೇಕಾಗಿದ್ದು ಸಾವಿರಾರು ಮಂದಿ ಪ್ರಯಾಣಿಕರು ದಿನನಿತ್ಯ ಕುಶಾಲನಗರ ಬಸ್ ನಿಲ್ದಾಣ ಮೂಲಕ ಸಂಚಾರ ಮಾಡುತ್ತಿದ್ದರು. ಆದರೆ ಇದೀಗ ಕೇವಲ ಕೆಲವು ಬಸ್‍ಗಳ ಮೂಲಕ ನೂರಾರು ಪ್ರಯಾಣಿಕರು ಮಾತ್ರ ಸಂಚರಿಸುತ್ತಿರುವ ದೃಶ್ಯ ಕಾಣಬಹುದು. ಮಡಿಕೇರಿ-ಕುಶಾಲನಗರ ನಡುವೆ ಪ್ರಯಾಣಿಕರ ಒತ್ತಡ ಅಧಿಕವಿದ್ದು 20 ನಿಮಿಷಗಳಿಗೊಂದು ಬಸ್‍ಗಳನ್ನು ಸಂಚರಿಸಲು ಅವಕಾಶ ಕಲ್ಪಿಸಬೇಕೆಂದು ಪ್ರಯಾಣಿಕರು ಪತ್ರಿಕೆ ಮೂಲಕ ಕೋರಿದ್ದಾರೆ.

ಸಿದ್ದಾಪುರ ಬಸ್ ಇಲ್ಲ

ಸಿದ್ದಾಪುರ: ಸರಕಾರ ಬಸ್ ಸಂಚಾರ ಅನುಮತಿ ನೀಡಿದ್ದರೂ ಕೂಡ ಸಿದ್ದಾಪುರ ವ್ಯಾಪ್ತಿಯಲ್ಲಿ ಯಾವುದೇ ಸಾರಿಗೆ ಬಸ್ಸುಗಳ ಸಂಚಾರ ಇರಲಿಲ್ಲ. ಬಸ್ಸು ಸಂಚಾರ ಇರಬಹುದೆಂದು ಊಹಿಸಿ ಬಂದ ಸಾರ್ವಜನಿಕರು ಹೊರ ಊರುಗಳಿಗೆ ತೆರಳಲು ಬಸ್ಸಿಗೆ ಕಾದು ಬಸ್ಸುಗಳು ಬಾರದ ಹಿನ್ನೆಲೆಯಲ್ಲಿ ಹಿಂತಿರುಗಿದರು. ಸಾರಿಗೆ ಬಸ್ಸುಗಳು ಬಸ್ ನಿಲ್ದಾಣದಲ್ಲಿ ಇಲ್ಲದೆ ಬಿಕೋ ಎನ್ನುತ್ತಿತ್ತು. ಟ್ಯಾಕ್ಸಿ ನಿಲ್ದಾಣದಲ್ಲಿ ವಾಹನಗಳ ಸಂಖ್ಯೆ ಕಡಿಮೆ ಕಂಡುಬಂದಿತು.

ಸೋಮವಾರಪೇಟೆ:ರಾಜ್ಯಾದ್ಯಂತ ಕೆ.ಎಸ್.ಆರ್.ಟಿ. ಬಸ್ ಸಂಚಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ್ದರೂ ಸೋಮವಾರಪೇಟೆ ವ್ಯಾಪ್ತಿಯಲ್ಲಿ ನೂತನ ಬಸ್ ಸಂಚಾರ ಪ್ರಾರಂಭವಾಗಲಿಲ್ಲ. ಕಳೆದ ನಾಲ್ಕು ದಿನಗಳಿಂದ ಓಡಾಡುತ್ತಿರುವ ಮೂರು ಬಸ್ ಗಳ ಹೊರತಾಗಿ ಹೆಚ್ಚುವರಿ ಬಸ್‍ಗಳು ರಸ್ತೆಗೆ ಇಳಿಯಲಿಲ್ಲ. ಹೊರ ರಾಜ್ಯಗಳಿಗೆ ಬುಕ್ಕಿಂಗ್ ಆಗಿದ್ದ ಬಸ್‍ಗಳು ಮಾತ್ರ ಪಟ್ಟಣದಲ್ಲಿ ಕಂಡುಬಂದವು. ಬಹುತೇಕ ಮಂದಿ ಖಾಸಗಿ ವಾಹನಗಳ ಮೊರೆ ಹೋಗಿರುವ ಹಿನ್ನೆಲೆ ನಿರೀಕ್ಷೆಯಷ್ಟು ಪ್ರಯಾಣಿಕರು ಕಂಡುಬರಲಿಲ್ಲ. ಹೆಚ್ಚುವರಿ ಸರ್ಕಾರಿ ಬಸ್‍ಗಳ ಸಂಚಾರವಿಲ್ಲದ್ದರಿಂದ ಸರ್ಕಾರಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಕುಶಾಲನಗರ, ಮಡಿಕೇರಿ, ಕೊಡ್ಲಿಪೇಟೆಗೆ ಈಗಾಗಲೇ ಬಸ್ ಗಳ ಓಡಾಟ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಆಗಮಿಸಲಿಲ್ಲ. ಖಾಸಗಿ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್ ನಿಲ್ದಾಣದಲ್ಲಿ ಅನ್ಯವಾಹನಗಳು ನಿಲುಗಡೆ ಯಾಗಿದ್ದವು. ಅಕ್ಕಪಕ್ಕದ ಪ್ರದೇಶಗಳಿಗೆ ತೆರಳಲು ಆಟೋ, ಬಾಡಿಗೆ ವಾಹನಗಳನ್ನು ಸಾರ್ವಜನಿಕರು ಅವಲಂಭಿಸಿದ್ದರು.

ಸೋಮವಾರಪೇಟೆ, ಮಡಿಕೇರಿ, ಕುಶಾಲನಗರ, ಕೊಡ್ಲಿಪೇಟೆ ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಪ್ರಾರಂಭವಾಗಿದೆ. ಪ್ರತಿದಿನ ಬೆಳಿಗ್ಗೆ 8.45ಕ್ಕೆ ಮಡಿಕೇರಿಯಿಂದ ಹೊರಟು ಸೋಮವಾರಪೇಟೆ ಮಾರ್ಗ ಮೂಲಕ 12.50ಕ್ಕೆ ಕುಶಾಲನಗರ ತಲುಪಿ, ವಾಪಸ್ ಅದೇ ಮಾರ್ಗದಲ್ಲಿ ಬಂದು ಸಂಜೆ 5 ಗಂಟೆಗೆ ಮಡಿಕೇರಿಗೆ ಒಂದು ಬಸ್ ತಲುಪುತ್ತಿದೆ.

ಮತ್ತೊಂದು ಬಸ್ ಸಂಜೆ 5 ಗಂಟೆಗೆ ಮಡಿಕೇರಿಯಿಂದ ಹೊರಟು 6.15ಕ್ಕೆ ಸೋಮವಾರಪೇಟೆಗೆ ಆಗಮಿಸಿ, 7.15ಕ್ಕೆ ಕೊಡ್ಲಿಪೇಟೆಗೆ ತೆರಳಿ ಅಲ್ಲೇ ತಂಗುತ್ತಿದೆ. ಮಾರನೇ ದಿನ ಬೆಳಿಗ್ಗೆ 7.15ಕ್ಕೆ ಕೊಡ್ಲಿಪೇಟೆಯಿಂದ ಹೊರಟು, ಶನಿವಾರಸಂತೆ ಮಾರ್ಗವಾಗಿ 8.45ಕ್ಕೆ ಸೋಮವಾರಪೇಟೆಗೆ ತಲುಪುತ್ತಿದೆ.

ಇನ್ನೊಂದು ಬಸ್ ಬೆಳಿಗ್ಗೆ 8 ಗಂಟೆಗೆ ಮಡಿಕೇರಿಯಿಂದ ಹೊರಟು 9.30ಕ್ಕೆ ಸೋಮವಾರಪೇಟೆ, 9.45ಕ್ಕೆ ಇಲ್ಲಿಂದ ಹೊರಟು 10.45ಕ್ಕೆ ಕೊಡ್ಲಿಪೇಟೆ ತಲುಪಿ ಅದೇ ಮಾರ್ಗದಲ್ಲಿ ವಾಪಸ್ ಸೋಮವಾರಪೇಟೆಗೆ ಆಗಮಿಸಿ 12.30ಕ್ಕೆ ಕುಶಾಲನಗರಕ್ಕೆ ತೆರಳುತ್ತಿದೆ. ಸಂಜೆ 3.45ಕ್ಕೆ ಕುಶಾಲನಗರದಿಂದ ಹೊರಟು ಸೋಮವಾರಪೇಟೆಗೆ ಆಗಮಿಸಿ, ಸಂಜೆ 5 ಗಂಟೆಗೆ ಮಡಿಕೇರಿಗೆ ತೆರಳುತ್ತಿದೆ.