ಶ್ರೀಮಂಗಲ, ಮೇ 19: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಉಳ್ಳವರ ಲೈನ್ ಮನೆಗೆ ಸರಕಾರದಿಂದ ಕುಡಿಯುವ ನೀರಿನ ತೆರೆದ ಬಾವಿ ನಿರ್ಮಿಸುವ ಬದಲು ತೀತಮಾಡ ಕುಟುಂಬಸ್ಥರು ಕುಡಿಯುವ ನೀರಿಗೆ ಬಳಸುತ್ತಿದ್ದ ತೆರೆದ ಬಾವಿ 2018ರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಕುಸಿದು ಮುಚ್ಚಲ್ಪಟ್ಟಿದ್ದು, ಇಲ್ಲಿಗೆ ಪ್ರಾಮುಖ್ಯತೆ ನೀಡಬೇಕೆನ್ನುವ ಗ್ರಾಮಸ್ಥರ ಹೋರಾಟದಿಂದ ಈ ಕುಟುಂಬಕ್ಕೆ ಇದೀಗ ಸರಕಾರದಿಂದ ಹೊಸ ತೆರೆದ ಬಾವಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೇಳಿಕೆ ನೀಡಿದ್ದಾರೆ.
ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಗ್ರಾಮಸ್ಥರು ಈ ಬಗ್ಗೆ ಖುದ್ದು ಹೇಳಿಕೆ ನೀಡಿದ್ದು,
ಅಂಗನವಾಡಿ ಸುತ್ತ ನಿರ್ಮಿಸಿರುವ ಚರಂಡಿಯಿಂದ ನೀರನ್ನು ಗಿರಿಜನ ಮಹಿಳೆ ಪಾಲಿಯವರ ಮನೆಗೆ ಹರಿಸಲಾಗಿದೆ. ಇದರಿಂದ ಈ ಮಳೆಗಾಲದಲ್ಲಿ ಅವರ ಮನೆಗೆ ನೀರು ನುಗ್ಗಿ ಮನೆ ಕುಸಿಯುವ ಆತಂಕ ಎದುರಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷದಿಂದ ಬೆಕ್ಕೆಸೊಡ್ಲೂರು ಶಾರದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಸಮೀಪವಿರುವ ಬಸ್ಸ್ ತಂಗುದಾಣದ ಸಮೀಪವೇ ಭಾರೀ ಗಾತ್ರದ ಮರಗಳು ಇದ್ದು, ಅದನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ಮನವಿ ಮಾಡಿದರೂ ತೆರವುಗೊಳಿಸಲಿಲ್ಲ. ಎರಡು ತಂಗುದಾಣದಲ್ಲಿ ಶೀಟ್ ಒಡೆದುಹೋಗಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಇನ್ನೊಂದೆಡೆ ಶಾಲಾ ಮಕ್ಕಳು ತಂಗುದಾಣದಲ್ಲಿ ಇರುವಾಗಲೇ ಮಳೆ ಗಾಳಿಯಿಂದ ಮರ ಮುರಿದು ಬೀಳುವ ಅಪಾಯವಿದೆ ಎಂದು ಅಸಮಾಧಾನ ವ್ಯಕ್ತಡಿಸಿದರು.
ಗ್ರಾಮದಲ್ಲಿ ಒಂಬತ್ತು ಸಾರ್ವಜನಿಕ ಕೆರೆಗಳಿಗೆ ಸಂಪರ್ಕ ರಸ್ತೆ ಇದ್ದರೂ ಆ ಕೆರೆಗಳನ್ನು ಹೂಳೆತ್ತುವ ಕಾಮಗಾರಿ ಮಾಡದೇ ಹಾಲಿ ಗ್ರಾ.ಪಂ ಸದಸ್ಯರೊಬ್ಬರ ಮನೆಯ ಸಮೀಪವಿರುವ ಮತ್ತು ರಸ್ತೆ ಸಂಪರ್ಕವಿಲ್ಲದ ಸಾರ್ವಜನಿಕ ಸೀಮೆಎಣ್ಣೆ ಕೆರೆಯನ್ನು 1.50 ಲಕ್ಷದಲ್ಲಿ ದುರಸ್ಥಿ ಪಡಿಸಲಾಗಿದೆ. ಇದಕ್ಕೆ ಸಾರ್ವಜನಿಕ ಸಂಪರ್ಕ ರಸ್ತೆ ಇರುವುದಿಲ್ಲ. ಈ ಕೆರೆಗೆ ಕೂಡಲೇ ಸಾರ್ವಜನಿಕ ಸಂಪರ್ಕ ರಸ್ತೆ ಕಲ್ಪಿಸಬೇಕು ಇಲ್ಲದಿದ್ದರೆ ಈ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರ ಒತ್ತಾಯದಿಂದ ಕೋವಿಡ್ -19 ಲಾಕ್‍ಡೌನ್‍ನಿಂದ ಉಂಟಾಗಿರುವ ಸಂಕಷ್ಟ ಪರಿಹಾರಕ್ಕೆ ಬಡವರಿಗೆ ವಿತರಿಸಿದ ಕಿಟ್‍ನಲ್ಲಿ ತಾರತಮ್ಯವಾಗಿದ್ದು, ಗ್ರಾಮಸ್ಥರು ಇದನ್ನು ಪ್ರಶ್ನಿಸಿದ ನಂತರ ಮೂಗಿಗೆ ತುಪ್ಪ ಸವರುವಂತೆ ಗ್ರಾ.ಪಂ. ಪಿ.ಡಿ.ಓ. ಪರಿಶಿಷ್ಟ ಪಂಗಡ ಹಾಗೂ ಜಾತಿಯ ಕೆಲವರಿಗೆ ಮಾತ್ರ ಕಿಟ್ ವಿತರಿಸಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕಪಡಿಸಿದ್ದಾರೆ.