ಮಡಿಕೇರಿ, ಮೇ 19: ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯ ಸಂಪರ್ಕ ರಸ್ತೆಯ ದುಸ್ಥಿತಿಗೆ ಕಾರಣವಾಗಿರುವ ಮರಳು ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿರುವ ಅಲ್ಲಿನ ನಿವಾಸಿಗಳು, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಗೋಡು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಕೆ.ಎಸ್. ಹರೀಶ್ ಹಾಗೂ ಇತರರು, ಕಟ್ಟೆಮಾಡು ಗ್ರಾಮದ ಮುಖ್ಯರಸ್ತೆಯಿಂದ ಪರಂಬು ಪೈಸಾರಿಗೆ 3ಕೀ.ಮೀ ಅಂತರವಿದ್ದು, ಕಳೆದ ಸಾಲಿನ ಪ್ರವಾಹ ಮತ್ತು ಅತಿವೃಷ್ಟಿಯಿಂದ ಪರಂಬು ಪೈಸಾರಿಯಲ್ಲಿರುವ 113 ಮನೆಗಳು ನೀರಿನಿಂದ ಮುಳುಗಡೆಯಾಗಿ 33 ಮನೆಗಳ ಸಂಪೂರ್ಣ ನೆಲಸಮವಾಗಿವೆ. ಅಲ್ಲದೆ ಈ ಸಂದರ್ಭ ಒಂದು ಸಾವು ಕೂಡಾ ಸಂಭವಿಸಿದೆ ಎಂದು ತಿಳಿಸಿದರು.

ಪರಂಬುಪೈಸಾರಿಯಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಹೆಚ್ಚಿದ್ದು, ಉಳಿದ ಜನಾಂಗದವರೂ ವಾಸವಿದ್ದಾರೆ. ಮುಖ್ಯ ರಸ್ತೆಯಿಂದ ಪರಂಬುಪೈಸಾರಿಗೆ 3 ಕಿ.ಮೀ. ಅಂತರವಿದ್ದು, ಈ ರಸ್ತೆಯಲ್ಲಿ ಮರಳು ಸಾಗಿಸುವ ಲಾರಿಗಳು ನಿರಂತರವಾಗಿ ಓಡಾಡುತ್ತಿರುವುದರಿಂದ ಕಳೆದ ಸಾಲಿನಲ್ಲಿ ಜಲಾವೃತಗೊಂಡಿದ್ದ ಸುಮಾರು 13 ಮನೆಗಳು ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿವೆ. ಇಲ್ಲಿ ಒಂದು ಅಂಗನವಾಡಿಯೂ ಇದ್ದು, ಇದರ ಪಕ್ಕದಲ್ಲೇ ದಿನಂಪ್ರತಿ 10-20 ಮರಳು ಲಾರಿಗಳು ಓಡಾಡುತ್ತಿರುವುದರಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದೂ ಅವರು ದೂರಿದರು.

ಈ ಹಿಂದೆ ಮರಳು ಗಣಿಗಾರಿಕೆ ಮಾಡದಂತೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸಿದ್ದರೂ ಮತ್ತೆ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡು ಪೈಸಾರಿ ನಿವಾಸಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಪೈಸಾರಿ ನಿವಾಸಿಗಳು ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಿರುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಿ.ಕೆ.ಉಮೇಶ್, ಎಂ.ಎಸ್. ಯೋಗೀಶ್, ಕೆ.ಎಸ್.ರಮೇಶ್ ಹಾಗೂ ಕೆ.ಎಂ. ಅಜಿತ್ ಉಪಸ್ಥಿತರಿದ್ದರು.