ಮಡಿಕೇರಿ, ಮೇ 19 : ಕುಶಾಲನಗರ ಪಟ್ಟಣ ಪಂಚಾಯತ್‍ನ 1ನೇ ವಿಭಾಗದ ಸರ್ವೆ ನಂ 115 ಮತ್ತು 115/1ರ ಸುಮಾರು 2.50 ಎಕರೆ ಜಮೀನನ್ನು ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೆ ವಿಭಜಿಸಿ ಹಲವು ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲಾ ಗುತ್ತಿದ್ದು, ಇದರ ಹಿಂದೆ ಭೂ ಮಾಫಿಯಾ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಮುಖ ವಿ.ಪಿ. ಶಶಿಧರ್ ಆರೋಪಿಸಿದ್ದಾರೆ.

ಈ ಪ್ರಕರಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕುಶಾಲನಗರದಲ್ಲಿ ಭೂಮಾಫಿಯಾ ಕಾರ್ಯ ನಿರ್ವಹಿಸುತ್ತಿದ್ದು, ಕ್ಷೇತ್ರದ ಶಾಸಕರು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಉದ್ಯಾನವನ, ವಾಹನ ನಿಲ್ದಾಣ ಜಾಗ ಸೇರಿದಂತೆ ನಿಗಧಿತ ಜಾಗವನ್ನು ನೋಂದಾಯಿಸದೆ ಮತ್ತು ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಮಾರಾಟ ಮಾಡಲಾಗುತ್ತಿದೆ. ಮಾರಾಟಕ್ಕೆ ಒಳಗಾದ ನಿವೇಶನಗಳಿಗೆ ಪಟ್ಟಣ ಪಂಚಾಯತ್‍ನಿಂದ ಖಾತೆ ಮಾಡಿಕೊಳ್ಳಲು ಪ್ರಭಾವ ಹಾಗೂ ಹಣದ ಆಮಿಷ ಒಡ್ಡಲು ಪ್ರಯತ್ನಿಸಲಾಗುತ್ತಿದೆ. ಖರೀದಿದಾರರು ರಾಜಕೀಯವಾಗಿ ಪ್ರಬಲರಾಗಿದ್ದು, ಭೂಮಾಫಿಯ ಜೊತೆ ಸೇರಿ ನಿಯಮ ಉಲ್ಲಂಘಿಸಿದ್ದಾರೆ. ಪಂಚಾಯತ್‍ಗೆ ದಕ್ಕಬೇಕಾದ ಕೊಟ್ಯಾಂತರ ಬೆಲೆ ಬಾಳುವ ಜಾಗವನ್ನು ಕಬಳಿಸಿ ನಿವೇಶನ ಮಾರಾಟ ಮಾಡಲಾಗಿದೆ ಎಂದು ವಿ.ಪಿ.ಶಶಿಧರ್ ಗಂಭೀರ ಆರೋಪ ಮಾಡಿದರು.

ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದೇ ಇರುವುದರಿಂದ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಖಾತೆ ಮಾಡಿಕೊಡದಂತೆ ಲಿಖಿತ ಆದೇಶ ನೀಡಬೇಕು. ಅಲ್ಲದೆ ಸ್ಥಳ ಪರಿಶೀಲನೆ ನಡೆಸಿ 2.50 ಎಕರೆ ಪ್ರದೇಶವನ್ನು ಪ.ಪಂ ಅಧೀನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕೆಲವು ವರ್ಷಗಳ ಹಿಂದೆ ಪಟ್ಟಣದ ಜನರ ಹಿತದೃಷ್ಟಿಯಿಂದ ಸುಸಜ್ಜಿತ ನರ್ಸಿಂಗ್ ಹೋಂ ಗಾಗಿ ಈ ಜಾಗವನ್ನು ನೀಡಲಾಗಿತ್ತು. ಆದರೆ ಜಾಗ ಪಡೆದ ವ್ಯಕ್ತಿಯಿಂದ ಉದ್ದೇಶಿತ ಯೋಜನೆ ಸಾಕಾರಗೊಳ್ಳದೆ ಇರುವುದರಿಂದ ಜಮೀನನ್ನು ಪಟ್ಟಣ ಪಂಚಾಯತ್ ವಶಕ್ಕೆ ಪಡೆದು ಲೇಔಟ್‍ಗಳನ್ನಾಗಿ ಪರಿವರ್ತಿಸಿ ಹಂಚಿಕೆ ಮಾಡಬೇಕೆಂದು ಹೇಳಿದರು. ಭೂ ಅಕ್ರಮ ನಡೆದಿರುವ ಬಗ್ಗೆ ಶಾಸಕರ ಗಮನ ಸೆಳೆದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸದಸ್ಯೆ ಕೆ.ಪಿ. ಚಂದ್ರಕಲಾ, ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹ, ಪ.ಪಂ ಸದಸ್ಯರುಗಳಾದ ಪ್ರಮೋದ್ ಮುತ್ತಪ್ಪ, ಎಂ.ಕೆ. ಸುಂದರೇಶ್ ಹಾಗೂ ಮಾಜಿ ಸದಸ್ಯ ಎಂ. ನಂಜುಂಡಸ್ವಾಮಿ ಉಪಸ್ಥಿತರಿದ್ದರು.