ಶನಿವಾರಸಂತೆ, ಮೇ 19: ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ಕೊಡಗು-ಹಾಸನ ಜಿಲ್ಲೆಗಳ ಗಡಿಭಾಗವಾಗಿದ್ದು, ಹಾಸನ ಜಿಲ್ಲೆಗೆ ಸೇರಿದ್ದರೂ ಶನಿವಾರಸಂತೆ ಪಟ್ಟಣದೊಂದಿಗೆ ಹೆಚ್ಚಿನ ಸಂಪರ್ಕ ಇದೆ. ಆದರೆ ಪ್ರಸ್ತುತ ಕೋವಿಡ್-19 ಲಾಕ್‍ಡೌನ್ ಇರುವುದರಿಂದ ಚಿನ್ನಳ್ಳಿ ಗ್ರಾಮದಲ್ಲಿ ಪೊಲೀಸರು ಚೆಕ್‍ಪೋಸ್ಟ್ ನಿರ್ಮಿಸಿದ್ದಾರೆ. ಹೊಸೂರು ಪಂಚಾಯಿತಿ ವ್ಯಾಪ್ತಿಯ ಜನರು ಶನಿವಾರಸಂತೆಯತ್ತ ಸುಳಿಯದಂತೆ ಮಾಡಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆ ವ್ಯಾಪ್ತಿಯಲ್ಲಿ ಕೃಷಿಕರು, ಕೂಲಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದು, ಗ್ರಾಮಸ್ಥರು ದಿನನಿತ್ಯದ ದಿನಸಿ, ತರಕಾರಿ, ಹಣ್ಣು-ಹಂಪಲು, ಅಗತ್ಯ ವಸ್ತುಗಳ ಖರೀದಿಗೆ, ವಾಹನಗಳ ದುರಸ್ತಿಗೆ, ಕೃಷಿ ಸಾಮಗ್ರಿಗಳಿಗೆ ಶನಿವಾರಸಂತೆಯನ್ನೇ ಅವಲಂಭಿಸಿದ್ದಾರೆ. ಮುಖ್ಯವಾಗಿ ರೋಗ-ರುಜಿನವಾದರೆ ತಕ್ಷಣ ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರವನ್ನು ಅವಲಂಭಿಸಿದ್ದಾರೆ.

ಹೀಗಿರುವಾಗ ಚೆನ್ನಳ್ಳಿ ಚೆಕ್‍ಪೋಸ್ಟ್‍ನ ಅವಶ್ಯಕತೆಯಿಲ್ಲ. ಶೀಘ್ರ ತೆರವುಗೊಳಿಸಬೇಕು ಎಂದು ಬೆಳೆಗಾರರಾದ ಕೆ.ಟಿ. ಕೃಷ್ಣೇಗೌಡ, ರಾಘವೇಂದ್ರ, ಮನೋಜ್, ವಸಂತ್, ಹೊಸೂರು ರಮೇಶ್, ಗಣೇಶ್, ಕಾಳಪ್ಪ, ಪ್ರೇಮಕುಮಾರ್ ಮತ್ತಿತರ ಗ್ರಾಮಸ್ಥರು ಆಗ್ರಹಿಸಿದ್ದಾರೆ.