ಕೋಲ್ಕತ್ತಾ, ಮೇ 19: ಪ್ರಸ್ತುತ ಭಾರತದ ಈಶಾನ್ಯ ಕರಾವಳಿ ಗಡಿಯಿಂದ ಸುಮಾರು 630 ಕಿ.ಮೀ. ದೂರದಲ್ಲಿರುವ ಆಂಫಾನ್ ಕರಾವಳಿಗೆ ಅಪ್ಪಳಿಸಿದರೆ 110ರಿಂದ 150 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಪರಿಣಾಮ ಕೋಲ್ಕತ್ತಾ, ಓಡಿಶಾ ಸೇರಿದಂತೆ ಐದು ರಾಜ್ಯಗಳಲ್ಲಿ ಭಾರೀ ಅನಾಹುತ ಸಂಭವಿಸಲಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿ ರುವ ವಾಯುಭಾರ ಕುಸಿತದಿಂದಾಗಿ ಆಂಫಾನ್ ಚಂಡಮಾರುತ ಕೋಲ್ಕತ್ತಾ ಸೇರಿದಂತೆ ಈಶಾನ್ಯ ಭಾರತದ ಐದು ರಾಜ್ಯಗಳಿಗೆ ಅಪ್ಪಳಿಸಲು ಅಣಿಯಾಗಿದೆ. ಪರಿಣಾಮ ಇಂದು ಕೋಲ್ಕತ್ತಾದಲ್ಲಿ ಗುಡುಗು ಸಹಿತ ಭಾರೀ ಮಳೆಯಾಯಿತು. ಕೊರೊನಾ ಭೀತಿಯ ನಡುವೆ ಆಂಫಾನ್ ಈಶಾನ್ಯ ಭಾರತಕ್ಕೆ ಮತ್ತೊಂದು ಸಮಸ್ಯೆಯನ್ನು ಮುಂದಿಟ್ಟಿದೆ.

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಈ ಚಂಡಮಾರುತದ ಪರಿಣಾಮದಿಂದ ಪೂರ್ವ ಕರಾವಳಿ, ಅಂಡಮಾನ್- ನಿಕೋಬಾರ್‍ನಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಉಂಟಾಗಲಿದ್ದು, ಬುಧವಾರ ಕರಾವಳಿಯ ಕೆಲವು ಪ್ರದೇಶ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಈ ಚಂಡಮಾರುತ ಪರಿಣಾಮ ಕರ್ನಾಟಕದ ಮೇಲೆ ಹೆಚ್ಚಾಗಿ ತಟ್ಟದಿದ್ದರೂ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.