ಕೊಡ್ಲಿಪೇಟೆ, ಮೇ 20: ಕೊಡ್ಲಿಪೇಟೆಯಲ್ಲಿ ರೂ. 26 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನೂತನ ಶಾಖೆಯ ಕಟ್ಟಡ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯ ಗಡಿ ಭಾಗವಾಗಿರುವ ಕೊಡ್ಲಿಪೇಟೆಯಲ್ಲಿ ಬ್ಯಾಂಕ್‍ನ ನೂತನ ಶಾಖೆ ನಿರ್ಮಾಣವಾಗುತ್ತಿರುವದು ಈ ಭಾಗದ ಗ್ರಾಹಕರಿಗ ಹೆಚ್ಚಿನ ಅನುಕೂಲತೆಯನ್ನು ಕಲ್ಪಿಸಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣದ ಹೃದಯ ಭಾಗದಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಈಗಾಗಲೇ ಕೊಡ್ಲಿಪೇಟೆಯಲ್ಲಿ ರುವ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೆಡಿಸಿಸಿ ಶಾಖೆ ನಿರ್ಮಾಣದಿಂದ ಯಾವದೇ ಹಿನ್ನಡೆ ಆಗುವದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಯಾವದೇ ತೊಂದರೆಯಾಗದಂತೆ ಕ್ರಮ ವಹಿಸುವದಾಗಿ ಗಣಪತಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ 34 ಸಾವಿರಕ್ಕೂ ಅಧಿಕ ಕೆಸಿಸಿ ಸಾಲಗಾರರಿದ್ದು ಎಲ್ಲರೂ ಕಳೆದ ಸಾಲಿನಲ್ಲಿ ಪಡೆದಿರುವ ಸಾಲದ ಮರುಪಾವತಿಯನ್ನು ಈ ಸಾಲಿನಲ್ಲಿ ಮಾಡಬೇಕಿದೆ. ಕೇಂದ್ರ ಸರ್ಕಾರ ಮತ್ತು ನಬಾರ್ಡ್‍ನ ಆದೇಶದಂತೆ ಈ ಬಗ್ಗೆ ಕೆಡಿಸಿಸಿ ಕ್ರಮವಹಿಸುತ್ತಿದೆ. ಎಲ್ಲಾ ಕೆಸಿಸಿ ಸಾಲಗಾರರು ಬ್ಯಾಂಕ್‍ನೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಉಪಾಧ್ಯಕ್ಷ ಕೆ.ಎಸ್. ಹರೀಶ್, ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ, ರಘು ನಾಣಯ್ಯ, ಹೆಚ್.ಎಂ. ರಮೇಶ್, ಎಸ್.ಬಿ. ಭರತ್‍ಕುಮಾರ್, ಕೆ. ಜಗದೀಶ್, ಕನ್ನಂಡ ನವೀನ್, ಕೊಡ್ಲಿಪೇಟೆ ಸಹಕಾರ ಸಂಘದ ಅಧ್ಯಕ್ಷ ಎಸ್.ಡಿ. ತಮ್ಮಯ್ಯ, ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ನಿರ್ದೇಶಕರಾದ ಯತೀಶ್, ಗ್ರಾ.ಪಂ. ಅಧ್ಯಕ್ಷೆ ರೋಹಿಣಿ, ಸದಸ್ಯ ಮಹೇಶ್, ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಯತೀಶ್‍ಕುಮಾರ್, ನಿರ್ದೇಶಕ ಪ್ರವೀಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.