ಮಡಿಕೇರಿ, ಮೇ 20: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ವಿವಿಧೆಡೆಗಳಿಗೆ ಪ್ರಯಾಣಿಕರ ಸಂಚಾರ ಕಂಡು ಬರುತ್ತಿದೆ. ಪ್ರಮುಖವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ 8 ಬಸ್‍ಗಳು ತೆರಳಿದ್ದು, ಈ ಪೈಕಿ ಸೋಮವಾರಪೇಟೆ ಹಾಗೂ ವೀರಾಜಪೇಟೆ ಮಾರ್ಗವಾಗಿಯೂ ಒಂದೊಂದು ಬಸ್ ತೆರಳಿವೆ ಎಂದು ಸಂಸ್ಥೆಯ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ಮಾಹಿತಿ ನೀಡಿದ್ದಾರೆ.

ಅಂತೆಯೇ ರಾಜ್ಯ ಸಾರಿಗೆ ಸಂಸ್ಥೆಯ 9 ಬಸ್‍ಗಳು ವಿವಿಧೆಡೆ ಗಳಿಂದ ಮೈಸೂರಿಗೆ ಮಡಿಕೇರಿ ಮೂಲಕ ತೆರಳಿದ್ದು, ಮಂಗಳೂರಿನತ್ತ ಪುತ್ತೂರು ಮಾರ್ಗವಾಗಿ 3 ಬಸ್‍ಗಳು ಓಡಾಟ ಆರಂಭಿಸಿರುವುದಾಗಿ ವಿವರಿಸಿದ್ದಾರೆ. ಉಳಿದಂತೆ ಮಡಿಕೇರಿ-ಕುಶಾಲನಗರ ನಡುವೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ ಕಲ್ಪಿಸಿದ್ದು, ಇನ್ನುಳಿದಂತೆ ವೀರಾಜಪೇಟೆ, ಸೋಮವಾರಪೇಟೆ, ಭಾಗಮಂಡಲ, ಸಂಪಾಜೆ ತನಕ ಪ್ರಯಾಣಿಕರನ್ನು ಗಮನದಲ್ಲಿ ಇರಿಸಿಕೊಂಡು ಬಸ್ ಕಲ್ಪಿಸಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಗ್ರಾಮೀಣ ಭಾಗಗಳಲ್ಲಿ ಅವಶ್ಯಕತೆ ಇರುವ ಮಾರ್ಗಗಳಲ್ಲಿ ಜನತೆಯ ಅನುಕೂಲಕ್ಕೆ ರಾಜ್ಯ ಸಾರಿಗೆ ಬಸ್ ಕಲ್ಪಿಸಲಾಗುವುದು ಎಂದ ಅವರು, ತುಂಬಾ ಹಿರಿಯ ನಾಗರಿಕರು ಹಾಗೂ 10 ವರ್ಷ ದೊಳಗಿನ ಮಕ್ಕಳಿಗೆ ಪ್ರಯಾಣ ನಿರ್ಬಂಧವಿದ್ದರೂ, ಕೆಲವರು ಅನಿವಾರ್ಯವಾಗಿ ಪೋಷಕ ರೊಂದಿಗೆ ಸಂಚರಿಸುತ್ತಿದ್ದಾರೆ ಇದು ಸರಿಯಲ್ಲ ಎಂದು ನೆನಪಿಸಿದ್ದಾರೆ.