ವೀರಾಜಪೇಟೆ, ಮೇ 20: ವೀರಾಜಪೇಟೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ನೌಕರರು ತಮ್ಮ ಸೇವೆಯಲ್ಲಿ ಕರ್ತವ್ಯ ನಿಷ್ಠೆಯೊಂದಿಗೆ ಕಚೇರಿಗಳಿಗೆ ಹಾಜರಾಗಲು ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಚೇರಿಗಳಿಗೆ ಬರುವ ಎಲ್ಲ ರೀತಿಯ ಅರ್ಜಿದಾರರ ಬೇಡಿಕೆಯನ್ನು ವಿಳಂಬವಿಲ್ಲದೆ ಇತ್ಯರ್ಥಗೊಳಿಸಬೇಕು. ಕೊರೊನಾ ವೈರಸ್ ಭೀತಿಯ ಸಂತ್ರಸ್ತರಿಗೆ ಸರಕಾರವು ಬಿಡುಗಡೆ ಮಾಡಿರುವ ಎಲ್ಲ ವಿವಿಧ ಸೌಲಭ್ಯಗಳನ್ನು ಚಾಚುತಪ್ಪದೆ ಪೂರೈಸಬೇಕು ಎಂದು ಮಡಿಕೇರಿಯ ಲೋಕಾಯುಕ್ತ ಇಲಾಖೆಗೆ ನೂತನವಾಗಿ ಬಂದ ಡಿ.ವೈಎಸ್.ಪಿ. ಎಂ.ಎಸ್. ಪವನ್‍ಕುಮಾರ್ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪವನ್‍ಕುಮಾರ್, ಸಾರ್ವಜನಿಕರು ಯಾವುದೇ ದೂರುಗಳಿದ್ದರೆ ಇಲಾಖೆಗೆ ನೇರವಾಗಿ ಸಲ್ಲಿಸಲು ಮುಕ್ತ ಅವಕಾಶವಿದೆ. ಪ್ರತಿ ತಿಂಗಳು ನಿಗದಿತ ದಿನಾಂಕದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ವೀರಾಜಪೇಟೆಗೆ ಭೇಟಿ ನೀಡಲಿದೆ ಎಂದು ಹೇಳಿದರು.
ಲೋಕಾಯುಕ್ತ ಅಧಿಕಾರಿಗಳ ಭೇಟಿಯ ಸಂದರ್ಭ ಶಿರಸ್ತೆದಾರ್ ಹೆಚ್.ಕೆ. ಪೊನ್ನು, ಕಚೇರಿಯ ಇತರ ಅಧಿಕಾರಿಗಳು, ಪ.ಪಂ.ಯ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಲೋಕಾಯುಕ್ತ ಇನ್ಸ್‍ಪೆಕ್ಟರ್ ಸುಬ್ರಮಣಿ, ಸಿಬ್ಬಂದಿಗಳು ಹಾಜರಿದ್ದರು.