ಕಣಿವೆ/ಕೂಡಿಗೆ, ಮೇ 20: ಸುಮಾರು ಐದು ಎಕರೆ ಭೂಮಿಯಲ್ಲಿ ಸಿಲ್ವರ್ ಮರಕ್ಕೆ ಹಬ್ಬಿಸಿ ಬೆಳೆದಿದ್ದ ಪ್ರಮುಖ ತೋಟಗಾರಿಕಾ ವಾಣಿಜ್ಯ ಬೆಳೆಯಾದ ಕಾಳು ಮೆಣಸು ಬಳ್ಳಿಗಳು ಹಠಾತ್ತನೇ ಒಣಗಿ ಹೋಗಿರುವ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ನಡೆದಿದೆ. ಕೂಡ್ಲೂರು ಗ್ರಾಮದ ರೈತ ಲಿಂಗರಾಜು ಎಂಬವರಿಗೆ ಸೇರಿದ ಈ ಕಾಳು ಮೆಣಸು ಬಳ್ಳಿಗಳನ್ನು ಕಳೆದ ಹತ್ತು ವರ್ಷಗಳಿಂದ ಬೆಳೆಸಲಾಗಿತ್ತು. ಇನ್ನೇನು ಫಸಲು ಬರಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿಂದ್ದಂತೆಯೇ ಹಬ್ಬಿದ ಮರಗಳಲ್ಲಿಯೇ ಒಣಗಿ ಹೋಗಿರುವುದು ರೈತನ ನೆಮ್ಮದಿಯನ್ನು ಹಾಳುಮಾಡಿದೆ.

ಈ ಬಗ್ಗೆ ಸ್ಥಳಕ್ಕೆ ಸುದ್ದಿಗಾರರನ್ನು ಕರೆಸಿ ಮಾಹಿತಿ ನೀಡಿದ ರೈತ ಲಿಂಗಯ್ಯ, ನಾನು ಬೆಳೆಸಿದ್ದ ಕಾಳು ಮೆಣಸು ಬಳ್ಳಿಗಳು ಒಣಗಲು ಸಮೀಪದಲ್ಲಿರುವ ಕಾಫಿ ಪುಡಿ ತಯಾರಿಕಾ ಘಟಕದ ರಾಸಾಯನಿಕ ಮಿಶ್ರಿತ ಕಲ್ಮಶ ನೀರಿನ ಸೆಳೆತವೇ ಕಾರಣವಾಗಿದೆ. ಕಳೆದ ಹತ್ತು ವರ್ಷಗಳಿಂದ ಹಬ್ಬುತ್ತಿದ್ದ ಬಳ್ಳಿಗಳು ಕಳೆದ ವರ್ಷದಿಂದ ಒಂದೊಂದಾಗಿಯೇ ಒಣಗಲಾರಂಬಿಸಿದವು. ನಮ್ಮ ಕೃಷಿ ಭೂಮಿಯ ಪಕ್ಕದ ಎತ್ತರ ಪ್ರದೇಶದಲ್ಲಿರುವ ಕಾಫಿ ಪುಡಿ ತಯಾರಿಕ ಘಟಕದಲ್ಲಿ ಹೊರಗೆ ಹರಿ ಬಿಟ್ಟಿರುವ ತ್ಯಾಜ್ಯ ನೀರು ಭೂಮಿಯಲ್ಲಿ ಸೇರಿ ಭೂಮಿಯ ಕೆಳಪದರದಲ್ಲಿ ಗುಪ್ತಗಾಮಿನಿಯಾಗಿ ಹರಿದು ತಗ್ಗು ಪ್ರದೇಶದ ನಮ್ಮ ಜಮೀನಿಗೆ ಹರಿದ ಪರಿಣಾಮದಿಂದಲೇ ಬಳ್ಳಿಗಳು ಒಣಗಿವೆ.

ಈ ಬಗ್ಗೆ ನಾವು ಸ್ಥಳೀಯ ಪಂಚಾಯಿತಿಗೆ, ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಏನೂ ಪ್ರಯೋಜನವಾಗುತ್ತಿಲ್ಲ. ಯಾರೂ ಕೂಡ ರೈತರ ಸಹಾಯಕ್ಕೆ ನಿಲ್ಲುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ತÀನಗೆ ಆಗಿರುವ ಲಕ್ಷಾಂತರ ರೂ.ಗಳ ನಷ್ಟಕ್ಕೆ ಕಾಫಿ ಸಂಸ್ಥೆಯವರೇ ಕಾರಣ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದಿದ್ದಾರೆ.

ಐದು ಎಕರೆ ವಿಸ್ತೀರ್ಣದ ನಮ್ಮ ಜಮೀನಿನಲ್ಲಿ ತೋಡುವ ಕೊಳವೆ ಬಾವಿಗಳಲ್ಲಿ ಕಲ್ಮಶ ನೀರೇ ಬರುತ್ತಿದೆ. ಒಂದಲ್ಲ ಅಂತ ಮೂರು ಕಡೆ ಬೋರ್ ಕೊರೆಸಿದರೂ ಕೂಡ ಕಾಫಿ ಘಟಕದ ತ್ಯಾಜ್ಯ ನೀರಿನ ವಾಸನೆಯೇ ಕೊಳವೆ ಬಾವಿಯಲ್ಲಿ ಬರುತ್ತಿದೆ. ಈ ನೀರನ್ನು ಬೆಳೆಗಳಿಗೆ ಹರಿಸಿದರೆ ಬೆಳೆಗಳು ಕೂಡ ಒಣಗುತ್ತವೆ ಏನು ಮಾಡುವುದು ಹೇಳಿ ಎಂದು ಗೋಳಿಡುತ್ತಾರೆ ರೈತ ಲಿಂಗಯ್ಯ.

ಈ ಬಗ್ಗೆ ಕಾಫಿ ಘಟಕದ ಮೇನೇಜರ್ ಸೋಮಯ್ಯ ಎಂಬವರ ಬಳಿ ಈ ಬಗ್ಗೆ ಮಾಹಿತಿ ಕೇಳಿದಾಗ, ನಮ್ಮ ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯನೀರನ್ನು ಮರುಪೂರಣಗೊಳಿಸಲು ಪ್ರತ್ಯೇಕ ಯಂತ್ರಾಗಾರಗಳನ್ನು ಅಳವಡಿಸಿಕೊಂಡಿದ್ದೇವೆ. ನಮ್ಮಲ್ಲಿ ಒಂದಲ್ಲ ಮೂರು ಬಾರಿ ಮರು ಶುದ್ಧೀಕರಣವಾದ ನಂತರದ ನೀರನ್ನು ಇಂಗು ಗುಂಡಿಗಳಿಗೆ ತುಂಬಿಸುತ್ತೇವೆ. ಆ ನೀರನ್ನೇ ಮತ್ತೆ ನಾವು ನಮ್ಮ ಘಟಕದ ಆವರಣದಲ್ಲಿ ಬೆಳೆದಿರುವ ಬಾಳೆ, ಕಾಫಿ, ಅಡಿಕೆ ಮೊದಲಾದ ಬೆಳೆಗಳಿಗೆ ಬಳಸುತ್ತಿದ್ದೇವೆ. ಸುಮಾರು ಅರ್ಧ ಕಿ.ಮೀ.ಗೂ ದೂರದಲ್ಲಿರುವ ರೈತರ ಬೆಳೆಗಳಿಗೆ ನಮ್ಮ ಘಟಕದ ತ್ಯಾಜ್ಯ ನೀರು ದುಷ್ಪರಿಣಾಮ ಬೀರುವುದಾದರೆ ನಮ್ಮ ಬೆಳೆಗಳಿಗೆ ಏಕೆ ಮಾರಕವಾಗುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ ಸೋಮಯ್ಯ.

ರೈತರ ದೂರಿನ ವಿಚಾರದಲ್ಲಿ ಹುರುಳಿಲ್ಲ. ಅವರ ಫಸಲು ಒಣಗಿ ನಿಂತರೆ ಅದಕ್ಕೆ ನಮ್ಮ ಘಟಕದ ತ್ಯಾಜ್ಯ ನೀರು ಕಾರಣವಲ್ಲ. ಅದು ಅಲ್ಲಿಯವರೆಗೆ ಹರಿಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಅವರು. ಒಟ್ಟಾರೆ ಇಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಇಲ್ಲಿನ ರೈತರ ತೋಟಗಾರಿಕಾ ಬೆಳೆಗಳನ್ನು ಪರಿಶೀಲಿಸಬೇಕು. ಫಸಲು ಒಣಗಲು ಇರುವ ಕಾರಣ ವನ್ನು ಪತ್ತೆ ಹಚ್ಚಬೇಕು. ರೈತರ ನೆರವಿಗೆ ಧಾವಿಸಬೇಕಿದೆ ಅಷ್ಟೆ.

ಈ ವಿಭಾಗದ ರೈತರುಗಳಾದ ಗೋವಿಂದರಾಜ್ ದಾಸ್, ತಂಗಮ್ಮ, ಸಂತೋಷ್, ಸ್ವಾಮಿರಾಜು, ನಟರಾಜ ಸೇರಿದಂತೆ 15ಕ್ಕೂ ರೈತರು ತೊಂದರೆಗೆ ಒಳಗಾಗಿದ್ದು, ಪಂಚಾಯಿತಿಗೆ ದೂರು ನೀಡಿದ್ದಾರೆ.

-ಕೆ.ಎಸ್. ಮೂರ್ತಿ, ನಾಗರಾಜಶೆಟ್ಟಿ