ಮಡಿಕೇರಿ, ಮೇ 20: ಮಡಿಕೇರಿ ವ್ಯಾಪ್ತಿಯ 80 ಅರ್ಚಕರಿಗೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರ ಒಕ್ಕೂಟದ ವತಿಯಿಂದ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.

ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಮಡಿಕೇರಿಯಲ್ಲಿ ಅರ್ಚಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರ ಕನಸಿನ ಯೋಜನೆಯಾಗಿ ರಾಜ್ಯದ ಅರ್ಚಕ ಸಮುದಾಯದವರಿಗೆ ಸೂಕ್ತ ನೆರವು ನೀಡಬೇಕೆಂಬ ಚಿಂತನೆಯಡಿ ಪ್ರಾರಂಭಿಸಲ್ಪಟ್ಟ ಅರ್ಚಕರ ಒಕ್ಕೂಟವು ಇದೀಗ ಶಾಸಕ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಹಲವಾರು ಜನಪರ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಒಕ್ಕೂಟದಿಂದ ದಿನೇಶ್ ಗುಂಡೂರಾವ್ ಅವರ ಕಳಕಳಿಯಿಂದ ಕೊರೊನಾ ಸಂಕಷ್ಟದಲ್ಲಿರುವ ಕೊಡಗಿನ ಅರ್ಚಕ ಸಮುದಾಯದವರಿಗೆ ಪಡಿತರ ಕಿಟ್ ನೀಡಿರುವುದು ಶ್ಲಾಘನೀಯ ಎಂದರು. ದುಡಿಯುವ ಕೈಗಳಿಗೆ ಸೂಕ್ತ ನೆರವು ನೀಡಲಾಗಿದೆ ಎಂದು ಅವರು ಹೇಳಿದರು.

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ಎ. ಗೋಪಾಲಕೃಷ್ಣ ಮಾತನಾಡಿ, ಒಕ್ಕೂಟದ ವತಿಯಿಂದ ನೀಡಲಾದ ಪಡಿತರ ಕಿಟ್‍ಗಳನ್ನು ಸಂಕಷ್ಟದಲ್ಲಿರುವ ಮಡಿಕೇರಿಯ 80 ಅರ್ಚಕರಿಗೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಕ್ಕೂಟದ ಪ್ರತಿನಿಧಿ ಮಂಜುನಾಥ್ ಗುಂಡೂರಾವ್ ಮಾತನಾಡಿ, ಜಿಲ್ಲೆಯ ವಿವಿಧೆಡೆಗಳ 200 ಅರ್ಚಕರಿಗೆ ದಿನಸಿ ಕಿಟ್ ನೀಡಲಾಗುತ್ತಿದೆ. ಇದರಿಂದಾಗಿ ಅರ್ಚಕರ ಸಮಸ್ಯೆ ನಿವಾರಣೆಗೆ ಸಹಾಯವಾಗುವ ಭರವಸೆಯಿದೆ ಎಂದರು.

ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕುಶಾಲನಗರ ಅಧ್ಯಕ್ಷ ವಿಜಯೇಂದ್ರ, ಜಿಲ್ಲಾ ಖಜಾಂಚಿ ರಾಜಶೇಖರ್, ಪ್ರತಿನಿಧಿ ರಾಜೀವ್ ಹಾಗೂ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ನಿರ್ದೇಶಕ ಎಂ.ವಿ. ನಾರಾಯಣ್ ಮೊದಲಾದವರು ಹಾಜರಿದ್ದರು.