ಮಡಿಕೇರಿ, ಮೇ 19: ಜಿಲ್ಲೆಯಲ್ಲಿ ಪ್ರಸ್ತುತ ರೈತರು ಸೇರಿದಂತೆ ಸಾರ್ವಜನಿಕರು ತಮ್ಮ ವಿವಿಧ ಅಗತ್ಯತೆಗಳಿಗೆ ಬೇಕಾದ ದಾಖಲೆಯಾದ ಇ.ಸಿ. (ಎನ್‍ಕಮ್‍ರೆನ್ಸ್ ಸರ್ಟಿಫಿಕೇಟ್) ಪಡೆಯಲು ಪರದಾಡುವಂತಾಗಿದೆ. ಈ ದಾಖಲಾತಿಯನ್ನು ಇದೀಗ ಆನ್‍ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಲಾಗಿದೆಯಾದರೂ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಜನತೆಗೆ ದಾಖಲಾತಿ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.ಆನ್‍ಲೈನ್ ಮೂಲಕ ಇದಕ್ಕೆ ಲಾಗ್ ಇನ್ ಆಗಿ ಇನ್ನೇನು ದಾಖಲೆ ದೊರೆಯಲಿದೆ ಎಂಬ ಸಂತಸವಾದರೂ ಸರ್ವರ್ ತೊಂದರೆಯಿಂದ ಇದು ದೊರೆಯುತ್ತಿಲ್ಲವೆನ್ನಲಾಗಿದೆ. ಲಾಗ್ ಇನ್ ಆದ ಬಳಿಕ ನಿಗದಿತ ಮೊತ್ತವನ್ನು ತಮ್ಮ ಎಟಿಎಂ ಕಾರ್ಡ್ ಮೂಲಕ ಗ್ರಾಹಕರು ಪಾವತಿ ಮಾಡುತ್ತಿದ್ದು, ಖಾತೆಯಿಂದ ಹಣ ಕಡಿತವಾಗುತ್ತಿದೆ. ಆದರೆ ಇ.ಸಿ. ಮಾತ್ರ ಲಭ್ಯವಾಗುತ್ತಿಲ್ಲ. ಇತ್ತೀಚಿನ ಕೆಲ ದಿನದಿಂದ ಇದು ಜಿಲ್ಲೆಯಲ್ಲಿ ಎದುರಾಗುತ್ತಿರುವ ಸಮಸ್ಯೆಯಾಗಿದ್ದು, ಇದು ಸಾರ್ವಜನಿಕ ಹಲವು ಸೌಲಭ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಹಲವರು ದೂರಿದ್ದಾರೆ. ಅದರಲ್ಲೂ ಕೋವಿಡ್ -19ರ ಸಮಸ್ಯೆಯಿಂದಾಗಿ ಉಪ ನೋಂದಣಿ ಕಚೇರಿಗಳಲ್ಲಿ ಕಂಪ್ಯೂಟರ್ ಕೇಂದ್ರಗಳಲ್ಲಿ ಹೆಚ್ಚು ಜನ ಸೇರಲು ಅವಕಾಶವಿಲ್ಲ.

(ಮೊದಲ ಪುಟದಿಂದ) ಇದರಿಂದ ಜನರು ಹೆಚ್ಚಾಗಿ ಆನ್‍ಲೈನ್ ಮೊರೆ ಹೋಗುತ್ತಿದ್ದಾರೆ. ಪ್ರಸ್ತುತ ರೈತರಿಗೆ ತಾವು ಪಡೆದಿರುವ ಸಾಲದ ಮರು ಪಾವತಿಗೆ ಮೇ 31ರ ಕಾಲಾವಕಾಶವಿದ್ದು, ಸರಕಾರದ ಸೌಲಭ್ಯ ಪಡೆಯಲು ಇ.ಸಿ. ಅಗತ್ಯವಿದೆ. ರೂ. 3 ಲಕ್ಷದ ತನಕದ ಸಾಲವನ್ನು ಒಂದು ವರ್ಷದ ಕಾಲಮಿತಿಯೊಳಗೆ ಪಾವತಿಸಿದರೆ, ಶೇ. 7ರ ಬಡ್ಡಿಯ ಬದಲಾಗಿ ಇದರಲ್ಲಿ ಶೇ. 3 ರಷ್ಟು ರಿಯಾಯಿತಿ ಸಿಗಲಿದೆ. ಹಳೆ ಸಾಲ ಪಾವತಿಸಿ ರಿಯಾಯಿತಿ ಸೌಲಭ್ಯದೊಂದಿಗೆ ಮತ್ತೆ ಸಾಲ ಪಡೆಯಲು ಹೊಸದಾಗಿ ದಾಖಲಾತಿ ಬೇಕಾಗುತ್ತದೆ. ಈ ಕಾರಣಗಳಿಂದಾಗಿ ದಾಖಲಾತಿಗಾಗಿ ಜನತೆ ಮುಗಿ ಬೀಳುತ್ತಿದ್ದಾರೆ.

ಆದರೆ ಪ್ರಸ್ತುತ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಜನತೆಯ ಖಾತೆಯಿಂದ ಶುಲ್ಕದ ಹಣ ಕಡಿತವಾಗುತ್ತಿದೆಯೇ ವಿನಹ ದಾಖಲೆ ಸಿಗದೆ ಪರದಾಡುವಂತಾಗಿದೆ. ಜಿಲ್ಲೆಯ ಎಲ್ಲೆಡೆಯಿಂದಲೂ ಈ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಕುರಿತು ಸಂಬಂಧಿಸಿದ ತುರ್ತು ಗಮನ ಹರಿಸಿ ಈ ಸಮಸ್ಯೆ ಸರಿಪಡಿಸುವಂತೆ ಹಲವರು ಆಗ್ರಹಿಸಿದ್ದಾರೆ.