ಕುಶಾಲನಗರ, ಮೇ 19: ಲಾಕ್‍ಡೌನ್ ತೆರವುಗೊಳ್ಳುತ್ತಿದ್ದ ಬೆನ್ನಲ್ಲೇ ಕೊಡಗು-ಮೈಸೂರು ಗಡಿಭಾಗದ ಕೊಪ್ಪ ಗೇಟ್ ಎಲ್ಲಾ ವಾಹನಗಳಿಗೆ ಮುಕ್ತವಾಗಿ ಸಾಗಲು ಅವಕಾಶ ಕಲ್ಪಿಸಿದ ದೃಶ್ಯ ಕಂಡುಬಂತು. ಬೆಳಗಿನಿಂದಲೇ ಮೈಸೂರು ಕಡೆಯಿಂದ ನೂರಾರು ವಾಹನಗಳು ಯಾವುದೇ ತಪಾಸಣೆಯಿಲ್ಲದೆ ಸಂಚರಿಸ ತೊಡಗಿದವು. ಕೋವಿಡ್-19 ತಪಾಸಣಾ ಕೇಂದ್ರದ ಸಿಬ್ಬಂದಿಗಳು ಕೂಡ ಯಾವುದೇ ಕೆಲಸವಿಲ್ಲದೆ ಕುಳಿತರಬೇಕಾದ ಪರಿಸ್ಥಿತಿ ಕೂಡ ಉಂಟಾಯಿತು. ಅಂತರ್ ರಾಜ್ಯಗಳಿಂದ ಬರುವ ವಾಹನಗಳನ್ನು ಮಾತ್ರ ತಪಾಸಣೆಗೆ ಒಳಪಡಿಸಲು ಸೂಚನೆ ಬಂದಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಶಕ್ತಿಗೆ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಕುಶಾಲನಗರದಿಂದ ದೆಹಲಿ ನಿಜಾಮುದ್ದಿನ್ ತಬ್ಲಿಗ್ ಸಮಾವೇಶಕ್ಕೆ ತೆರಳಿದ್ದ ಐವರು ಹಿಂತಿರುಗುತ್ತಿರುವ ಮಾಹಿತಿ ಮತ್ತು ಉತ್ತರ ಪ್ರದೇಶದ ನೋಂದಣಿಯುಳ್ಳ ವಾಹನವೊಂದು ಜಿಲ್ಲೆಯ ಮೂಲಕ ತೆರಳುವ ಬಗ್ಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು ವಾಹನದ ಆಗಮನಕ್ಕಾಗಿ ಕಾದು ಕುಳಿತಿದ್ದ ದೃಶ್ಯ ಕಂಡುಬಂತು.

ಒಟ್ಟಾರೆ 58 ದಿನಗಳ ಕಾಲ ನಿರಂತರ ಕರ್ತವ್ಯ ಮಾಡಿ ಸುಸ್ತಾಗಿದ್ದ ಪೊಲೀಸ್, ಆರೋಗ್ಯ, ಕಂದಾಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಹಾಯಕರು ಲಾಕ್‍ಡೌನ್ ತೆರವುಗೊಳ್ಳುತ್ತಿದ್ದಂತೆ ಅಲ್ಪ ಪ್ರಮಾಣದಲ್ಲಿ ನಿಟ್ಟುಸಿರು ಬಿಟ್ಟಂತೆ ಗೋಚರಿಸಿತು. ಈ ನಡುವೆ ಗಡಿ ಭಾಗದ ಕೊಪ್ಪ-ಕುಶಾಲನಗರದ ಜನತೆ ಕೂಡ ಅತ್ತಿಂದಿತ್ತ ತೆರಳಲು ಅಡ್ಡಿಯುಂಟಾಗಿದ್ದ ಹಿನ್ನೆಲೆಯಲ್ಲಿ ಲಾಕ್‍ಡೌನ್ ತೆರವಾದ ಮಾಹಿತಿ ದೊರೆತ ಬೆನ್ನಲ್ಲೇ ಹೆಚ್ಚಿನ ಸಂಖ್ಯೆಯ ಓಡಾಟದಲ್ಲಿ ತೊಡಗುವ ಮೂಲಕ ಕೃಷಿ ಚಟುವಟಿಕೆ

(ಮೊದಲ ಪುಟದಿಂದ) ಮತ್ತಿತರ ವ್ಯಾಪಾರ ವಹಿವಾಟು ಪ್ರಾರಂಭಿಸಿದರು.

ಇದೇ ರೀತಿ ಸಂಪಾಜೆ ಗೇಟ್ ಮೂಲಕವೂ ಯಾವುದೇ ತಪಾಸಣೆ ಇಲ್ಲದೆ ಅಂತರ್ ಜಿಲ್ಲಾ ಸಂಚಾರ ಮುಕ್ತವಾಗಿ ಆರಂಭಗೊಂಡಿತು.

ಹೊರ ಜಿಲ್ಲೆಯಿಂದ 26 ಮಂದಿ ಈ ಗೇಟ್‍ನ ಮೂಲಕ ಇಂದು ಪ್ರಯಾಣಿಸಿದರೆ, ನೂರಾರು ಮಂದಿ ಆತಂಕವಿಲ್ಲದೆ ಜಿಲ್ಲೆ ಪ್ರವೇಶಿಸಿದರು. ತಪಾಸಣೆ ಇಲ್ಲದ್ದರಿಂದ ವಾಹನಗಳ ಒತ್ತಡವಿಲ್ಲದೆ ಪ್ರಯಾಣಿಕರು ಗಡಿ ದಾಟಿದರು.