ಕೊರೊನಾ ಸೋಂಕು ಭಾರತದಲ್ಲಿ 1 ಲಕ್ಷದಾಟಿದೆ. ಕರ್ನಾಟಕದಲ್ಲಿ 1,300 ರತ್ತ ಸಾಗಿದೆ. ಇಡೀ ವಿಶ್ವವೇ ಕೊರೊನಾ ಸೋಂಕಿ ನಿಂದ ತತ್ತರಿಸಿದೆ. ಇತಿಹಾಸ ಗಮನಿಸಿದಾಗ ಕೊರೊನಾಕ್ಕಿಂತ ಮೊದಲು ದೇಶಕ್ಕೆ ತಗುಲಿದ್ದ ಮಹಾಮಾರಿಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದ್ದ ಗಮನಾರ್ಹ ವಿಚಾರ ತಿಳಿದುಬರುತ್ತದೆ. ಕೊರೊನಾದಷ್ಟೇ ಮಾರಕವಾಗಿದ್ದ ಆ ರೋಗಗಳೇ ಪ್ಲೇಗ್ ಮತ್ತು ಸ್ಪ್ಯಾನಿಷ್ ಫ್ಲೂ.. ಕಳೆದೆರಡು ಶತಮಾನಗಳ ಹಿಂದೆ ಕಾಣಿಸಿಕೊಂಡಿದ್ದ ಈ ಎರಡೂ ಕಾಯಿಲೆಗಳಿಗೆ ಭಾರತವೇ ನಲುಗಿ ಹೋಗಿತ್ತು. ಸುಮಾರು 20 ಲಕ್ಷ ಜನ ಪ್ಲೇಗ್‍ಗೆ ಬಲಿಯಾಗಿದ್ದರು. ಸ್ಪ್ಯಾನಿಷ್ ಫ್ಲೂಗೆ ದೇಶದಲ್ಲಿ 1.30 ಕೋಟಿ ಜನ ಬಲಿಯಾಗಿದ್ದರು.

ಕೊಡಗಿನಲ್ಲಿಯೂ ಪ್ಲೇಗ್ ಕಾಣಿಸಿಕೊಂಡಿತ್ತು. ಪ್ಲೇಗ್ ಬಂದ ಆ ದಿನಗಳೂ ಕೂಡ ಈಗಿನ ಲಾಕ್‍ಡೌನ್ ದಿನಗಳನ್ನೇ ನೆನಪಿಸುವಂತಿದೆ. 1897 ರಿಂದ 1922 ರವರೆಗೆ ಬ್ರಿಟೀಷ್ ಆಡಳಿತಕ್ಕೆ ಒಳಪಟ್ಟಿದ್ದ ಮೈಸೂರು ಪ್ರಾಂತ್ಯದಲ್ಲಿ ಪ್ಲೇಗ್ ಕಾಣಿಸಿಕೊಂಡಿತ್ತು. ಪ್ಲೇಗ್‍ಗೆ ಆಗ ಸೂಕ್ತ ಔಷಧಿ ದೊರಕಿರಲಿಲ್ಲ. ದುಬಾರಿ ಹಣ ವೆಚ್ಚ ಮಾಡಿ ವಿದೇಶಗಳಿಂದ ಪ್ಲೇಗ್ ಮಾರಿಗೆ ಔಷಧಿ ತರಿಸಬೇಕಾಗಿತ್ತು. ನಿಯಂತ್ರಣಕ್ಕೆ ಸಿಕ್ಕದಂತೆ ಪ್ಲೇಗ್ ಹಬ್ಬತೊಡಗಿದಾಗ ಅದಕ್ಕೆ ಬ್ಲ್ಯಾಕ್ ಡೆತ್ ಎಂಬ ಹೆಸರಿಡಲಾಗಿತ್ತು. ಒಂದೇ ದಿನಕ್ಕೆ ಸಾವಿರ ಜನ, ವಾರಕ್ಕೆ 10 ಸಾವಿರ ಜನರಂತೆ ಪ್ಲೇಗ್‍ಗೆ ಬಲಿಯಾಗತೊಡಗಿದ್ದರು. 1898ರ ಆಗಸ್ಟ್ 12ರಂದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ಲೇಗ್ ಕಾಣಿಸಿಕೊಂಡಿತ್ತು. ತರುವಾಯ ಕೊಡಗು ಒಳಗೊಂಡ ಮೈಸೂರು ಸಂಸ್ಥಾನ, ಕೋಲಾರ, ತುಮಕೂರಿಗೂ ಪ್ಲೇಗ್ ವ್ಯಾಪಿಸಿತು.

ಮೊದಲ ವರ್ಷವೇ 15 ಸಾವಿರ ಜನರಲ್ಲಿ ಪ್ಲೇಗ್ ಕಾಣಿಸಿಕೊಂಡು 12 ಸಾವಿರ ಜನ ಸಾವನ್ನಪ್ಪಿದ್ದರು. ಕೊಡಗು ಜಿಲ್ಲೆಯಲ್ಲಿಯೇ 1939 ರ ಏಪ್ರಿಲ್ 22 ರಿಂದ ತಿಂಗಳಾಂತ್ಯದವರೆಗೆ ಪ್ಲೇಗ್‍ನಿಂದಾಗಿ 4 ಜನ ಕೊನೆಯುಸಿರೆಳೆದಿ ದ್ದರು. ಆದರೆ ಮೈಸೂರು ಪ್ರಾಂತ್ಯದ ಅಥವಾ ಕರ್ನಾಟಕದ ಇತರ ಸ್ಥಳಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಪ್ಲೇಗ್ ಪ್ರಕರಣ ಹೆಚ್ಚಾಗಿ ಕಂಡುಬರಲಿಲ್ಲ. ಶಿಕ್ಷಣವಂತರ ಕೊಡಗಿನಲ್ಲಿ ಜನ ಪ್ಲೇಗ್‍ನಿಂದ ತಪ್ಪಿಸಿಕೊಳ್ಳಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕೈಗೊಂಡಿದ್ದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಪ್ಲೇಗ್ ನಿಯಂತ್ರಣಕ್ಕಾಗಿ 1897ರಲ್ಲಿ ಸಾಂಕ್ರ್ರಾಮಿಕ ರೋಗಗಳ ನಿಯಂತ್ರಣ ಕಾಯಿದೆ ಮೊದಲ ಬಾರಿಗೆ ಜಾರಿಗೊಂಡಿತ್ತು. ಕೇವಲ ನಾಲ್ಕು ಸೆಕ್ಷನ್ ಹೊಂದಿರುವ ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದ ಈ ಕಾಯಿದೆಯಲ್ಲಿ ಅಧಿಕಾರಿಗಳಿಗೆ ಸರ್ವಾಧಿಕಾರ, ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆ, ರೋಗ ನಿಯಂತ್ರಣಕ್ಕೆ ಮುಂದಾದ ಅಧಿಕಾರಿ, ಸರ್ಕಾರಿ ಸಿಬ್ಬಂದಿಗಳಿಗೆ ರಕ್ಷಣೆ ಒದಗಿಸಲಾಗಿತ್ತು. ಕರ್ನಾಟಕದಲ್ಲಿಯೂ ಅನೇಕ ವರ್ಷಗಳ ಬಳಿಕ ಇದೀಗ ಕೊರೊನಾ ನಿಯಂತ್ರಣಕ್ಕೆ ಈ ಕಾಯಿದೆ ಮತ್ತೆ ಜಾರಿಯಾಗಿದೆ. ಕೊಡಗನ್ನೊಳ ಗೊಂಡ ಮೈಸೂರು ಪ್ರಾಂತ್ಯದಲ್ಲಿ ವಿ.ಪಿ.ಮಾದಯ್ಯ ಜಿಲ್ಲಾಧಿಕಾರಿಯಾಗಿದ್ದರು. ಅವರು ಆ ಸಂದರ್ಭ ಪ್ಲೇಗ್ ನಿಯಂತ್ರಣಕ್ಕಾಗಿ ಮೈಸೂರು ಪ್ರಾಂತ್ಯದಲ್ಲಿ ಪ್ಲೇಗ್ ನಿಯಂತ್ರಣ ಸಮಿತಿ ರಚಿಸಿ ಅದಕ್ಕೆ ಕಮಿಷನರ್ ಒಬ್ಬರನ್ನು ನೇಮಕ ಮಾಡಿದರು. ಅಧಿಕಾರಿಗಳು ಅಗತ್ಯವಿರುವಲ್ಲೆಲ್ಲಾ ಮನೆಗಳಿಂದ ಪ್ಲೇಗ್ ಬಂದವರನ್ನು ಹೊರಕಳುಹಿಸಿ ಶಿಬಿರಗಳಲ್ಲಿರಿಸಿದ್ದರು. ಕೆಲವೆಡೆ ಮನೆಗಳನ್ನೇ ಒಡೆದುಹಾಕಲಾಗಿತ್ತು. ರೈಲು ನಿಲ್ದಾಣಗಳಲ್ಲಿಯೇ ತಪಾಸಣಾ ಶಿಬಿರ ತೆರೆದು ಪ್ರಯಾಣಿಕರನ್ನು ಸೂಕ್ತ ತಪಾಸಣೆ ಬಳಿಕವೇ ನಗರ ಪ್ರದೇಶದೊಳಗೆ ತೆರಳಲು ಅವಕಾಶ ನೀಡಲಾಗುತ್ತಿತ್ತು. ಇಲಿಗಳಿಂದ ಹಬ್ಬುತ್ತಿದ್ದ ಪ್ಲೇಗ್ ಸೋಂಕಿನ ತಡೆಗಾಗಿ ಮನೆ ಮಾತ್ರವಲ್ಲ ನಗರ, ಗ್ರಾಮಗಳಲ್ಲಿನ ಸಣ್ಣ-ಸಣ್ಣ ರಂಧ್ರ, ಗುಂಡಿಗಳನ್ನೂ ಮುಚ್ಚಲಾಗಿತ್ತು. 1908ರಲ್ಲಿ ಬೆಂಗಳೂರಿನಲ್ಲಿ 5,457 ರೂ. ವೆಚ್ಚದಲ್ಲಿ 9,225,116 ಇಲಿಗಳನ್ನು ಕಾರ್ಮಿಕರಿಗೆ ತಲಾ 4 ರೂ. ನೀಡಿ ಕೊಲ್ಲಲಾಯಿತೆಂದು ದಾಖಲೆ ಗಳಲ್ಲಿ ನಮೂದಿಸಲಾಗಿದೆ! ತಡವಾಗಿ ಪ್ಲೇಗ್ ನಿಯಂತ್ರಣಕ್ಕೆ ಬಂತಾದರೂ ಲಕ್ಷಾಂತರ ಮಂದಿಯನ್ನು ಅದು ಬಲಿ ತೆಗೆದುಕೊಂಡಿತ್ತು. ಬೆಂಗಳೂರಿನಲ್ಲಿ ಪ್ಲೇಗ್ ತೊಲಗಲಿ ಎಂದು ಅಂದಿನ ಕಾಲದಲ್ಲಿ ಭಕ್ತರು ಸ್ಥಾಪಿಸಿದ್ದ ಪ್ಲೇಗಮ್ಮ ದೇವಾಲಯ ಇಂದಿಗೂ ಪೂಜಿಸಲ್ಪಡುತ್ತಿದೆ. ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ವರ್ಷಗಳ ಕಾಲ ಪ್ಲೇಗ್ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ಪ್ಲೇಗ್ ವಾರ್ಡ್ ಇತ್ತು. ಕೆಲ ವರ್ಷಗಳ ಹಿಂದೆ ಶಿಥಿಲಾವಸ್ಥೆ ತಲುಪಿದ ಕಟ್ಟಡವನ್ನು ಒಡೆದು ಹಾಕಲಾಯಿತು.

ಪ್ಲೇಗ್‍ನಂತೆಯೇ ವಿಶ್ವಕ್ಕೆ ಅಪ್ಪಳಿಸಿದ್ದ ಮತ್ತೊಂದು ಭೀಕರ ರೋಗವೇ ಸ್ಪ್ಯಾನಿಷ್ ಫ್ಲೂ. ಸ್ಪೇನ್ ದೇಶದಲ್ಲಿ ಕಾಣಿಸಿಕೊಂಡ ವೈರಸ್‍ನಿಂದ ಜಗದಗಲ ಜ್ವರ ಹರಡಿತ್ತು. 1918 ರಲ್ಲಿ ಮುಂಬೈ ಬಂದರಿಗೆ ಬಂದಿದ್ದ ಹಡಗು ಅಲ್ಲಿಯೇ ಎರಡು ದಿನ ಲಂಗರು ಹಾಕಿತ್ತು. ಹಡಗಿನಲ್ಲಿದ್ದ ವಿದೇಶಿ ಮೂಲದ ಕಾರ್ಮಿಕನಿಂದಾಗಿ ಮುಂಬೈ ಬಂದರಿನಲ್ಲಿದ್ದ ಪೆÇಲೀಸರು, ಕಾರ್ಮಿಕರಿಗೆ ಸೋಂಕು ಹರಡಿ ಜ್ವರ ಕಾಣಿಸಿಕೊಂಡು ನಂತರದ ದಿನಗಳಲ್ಲಿ ಇಡೀ ದೇಶವೇ ಆ ಜ್ವರದಿಂದ ತತ್ತರಿಸುವಂತಾಯಿತು. 10 ಲಕ್ಷ ಮಂದಿಗೆ ಕೇವಲ 100 ಆಸ್ಪತ್ರೆಗಳಿದ್ದ ಕಾಲದಲ್ಲಿ ಸ್ಪ್ಯಾನಿಷ್ ಫ್ಲೂ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗದೇ ನಗರದ ಹೊರವಲಯದಲ್ಲಿಯೇ ತಾತ್ಕಾಲಿಕ ವೈದ್ಯಕೀಯ ಚಿಕಿತ್ಸಾ ಶಿಬಿರ ತೆರೆಯಲಾಗಿತ್ತು.

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಸ್ಪ್ಯಾನಿಷ್ ಫ್ಲೂ ತಾಂಡವವಾಡಿತ್ತು. ಕೊನೆಗೆ ಜ್ವರದಿಂದ ಜನರನ್ನು ಸಂರಕ್ಷಿಸಲು ಲಾಕ್‍ಡೌನ್ ಜಾರಿಗೊಳಿಸಲಾಯಿತು. ವಿಶ್ವದ ಹಲವು ದೇಶಗಳಲ್ಲಿ ಹೊಟೇಲ್‍ಗಳು, ಲಾಡ್ಜ್‍ಗಳು, ಅಂಗಡಿಗಳು ಬಂದ್ ಆದವು. ರಸ್ತೆಗಳಲ್ಲಿ ಜನಸಂಚಾರ ನಿಷೇಧಿಸಲಾಯಿತು, ಉಗುಳುವವರಿಗೆ ಶಿಕ್ಷೆ ವಿಧಿಸಲಾಯಿತು. ಮಾಸ್ಕ್ ಧರಿಸಿಯೇ ಸಾರ್ವಜನಿಕ ಸ್ಥಳಗಳಿಗೆ ತೆರಳುವಂತೆ ಆದೇಶ ಹೊರಡಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶಿಸಲಾಯಿತು. ಜನರು ತಮ್ಮ ಕೆಲಸ ನಿರ್ವಹಣೆ ಸಂದರ್ಭವೂ ಮಾಸ್ಕ್ ಧರಿಸುತ್ತಿದ್ದರು. ರೇಡಿಯೋ ಪ್ರಮುಖ ಸಂಪರ್ಕ ಸಂದೇಶ ಮಾಧ್ಯಮವಾಗಿತ್ತು. ಜ್ವರದಿಂದಾಗಿ ಕರ್ನಾಟಕ ದಲ್ಲಿಯೇ 5,70,000 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಶೇ.80 ರಷ್ಟು ಮಹಿಳೆಯರು. 10-40 ವರ್ಷ ವಯಸ್ಸಿನವರೇ ಸತ್ತವರಲ್ಲಿ ಹೆಚ್ಚಾಗಿದ್ದರು. 1921 ರ ಸಮೀಕ್ಷೆಯಂತೆ ಮೈಸೂರು ಪ್ರಾಂತ್ಯದಲ್ಲಿ ಸ್ಪ್ಯಾನಿಷ್ ಫ್ಲೂ ಗೆ 2,48,020 ಮಂದಿ ಬಲಿಯಾಗಿದ್ದರು. ಎರಡು ವರ್ಷಗಳ ಕಾಲ ಈ ಜ್ವರ ಭಾರತವನ್ನೇ ತಲ್ಲಣಗೊಳಿಸಿತ್ತು. 1918 ರಲ್ಲಿ ಭಾರತ ಬರದಿಂದಾಗಿ ಆರ್ಥಿಕÀ ಹೊಡೆತ ಎದುರಿಸುತ್ತಿತ್ತು. ಆ ಸಂದರ್ಭ ಕಂಡು ಬಂದ ಜ್ವರದಿಂದಾಗಿ ಭಾರತ ಮತ್ತಷ್ಟು ತಳಕಚ್ಚಿತ್ತು.

ಆರ್ಥಿಕವಾಗಿ ಭಾರತ ಸಂಪೂರ್ಣ ಕುಸಿದುಹೋಗಿತ್ತು. ಮಹಾತ್ಮ ಗಾಂಧಿ ಕೂಡ ಸ್ಪ್ಯಾನಿಷ್ ಫ್ಲೂ ಸೋಂಕಿಗೊಳಗಾಗಿದ್ದರು. ಗಾಂಧೀಜಿ ಮಗ ಹರಿಲಾಲ್ ಅವರ ಪತ್ನಿ ಗುಲಾಬ್ ಮತ್ತು ಗಾಂಧೀಜಿ ಮೊಮ್ಮಗ ಕೂಡ ಜ್ವರದಿಂದ ಸಾವನ್ನಪ್ಪಿದರು. ಗಾಂಧೀಜಿ ತಮ್ಮ ಸಂಪಾದಕತ್ವದ ಯಂಗ್ ಇಂಡಿಯಾದಲ್ಲಿ ಜ್ವರ ನಿಯಂತ್ರಿಸುವಲ್ಲಿ ಬೇಜವಾಬ್ದಾರಿತನ ತೋರಿದ್ದ ಬ್ರಿಟೀಷ್ ಆಡಳಿತವನ್ನು ಕಟುವಾಗಿ ಟೀಕಿಸಿದ್ದರು. ಮನೆಯಲ್ಲಿ ಯಾರಾದರು ಸತ್ತರೆ ಬಂಧುಗಳು ಸತ್ತದ್ದಕ್ಕೆ ಶೋಕಿಸುವುದಕ್ಕಿಂತ ಹೆಚ್ಚಾಗಿ ಸತ್ತವರನ್ನು ಸುಡಲು ಸೌದೆ ಎಲ್ಲಿಂದ ತರುವುದು ಎಂಬ ಚಿಂತೆ ಮನೆಮಂದಿಯನ್ನು ಕಾಡುತ್ತಿತ್ತು ಎಂದು 1918 ರಲ್ಲಿ ಖ್ಯಾತ ಕವಿ ಸೂರ್ಯಕಾಂತ ತ್ರಿಪಾಠಿ ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಕೊರೊನಾ ಮೂಲಕ ಹೊಸ ಮಾರಕವೊಂದರ ಬಾಧೆ ಮರುಕಳಿಸಿದೆ.

ಕೊನೇ ಹನಿ

ಕೊರೊನಾದಂತೆ ಪ್ಲೇಗ್ ಕೂಡ ಚೀನಾದ ಕೊಡುಗೆಯೇ ಆಗಿತ್ತು ! 1898ರಲ್ಲಿ ಚೀನಾ ಮೂಲಕ ಮುಂಬೈಯನ್ನು ಪ್ಲೇಗ್ ಮಹಾಮಾರಿ ತಲುಪಿತ್ತು. ಅಲ್ಲಿಂದ ರೈಲಿನಲ್ಲಿ ಬಂದಿದ್ದ ಸೋಂಕಿತನಿಂದಾಗಿ ಬೆಂಗಳೂರಿಗೂ ಇದು ಹಬ್ಬಿತ್ತು. ಹಲವಾರು ವರ್ಷಗಳ ಹಿಂದೆಯೇ ಸೋಂಕು ರೋಗದ ಮೂಲಕ ಮೇಡ್ ಇನ್ ಚೈನಾ ರೋಗಗಳೂ ಭಾರತಕ್ಕೆ ಪ್ರವೇಶಿಸಿದ್ದು ಗಮನಾರ್ಹ.!