ಮಡಿಕೇರಿ, ಮೇ 20 : ಕೊಡಗು ಜಿಲ್ಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ದುಡಿಯುವ ವರ್ಗವನ್ನು ಗುರಿಯಾಗಿಸಿಕೊಂಡು ಅಕ್ರಮವಾಗಿ ಗಾಂಜಾ ದಂಧೆ ನಡೆಸುತ್ತಿದ್ದ 15 ಮಂದಿ ಪ್ರಮುಖ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸುವುದ ರೊಂದಿಗೆ, ಆರೋಪಿಗಳಿಂದ 10.927 ಕೆ.ಜಿ. ತೂಕದ ರೂ. 3.60 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿ ಕೊಂಡಿದ್ದಾರೆ. ಇದರೊಂದಿಗೆ ನಾಲ್ಕು ಚಕ್ರದ ಆರು ವಾಹನಗಳು, ಒಂದು ಆಟೋರಿಕ್ಷಾ, ಒಂದು ಸ್ಕೂಟರ್ ಹಾಗೂ ವಿವಿಧ ಕಂಪೆನಿಗಳ ಬೆಲೆ ಬಾಳುವ 11 ಮೊಬೈಲ್ ಒಳಗೊಂಡಂತೆ ಒಟ್ಟು ರೂ. 28.60 ಲಕ್ಷ ಮೌಲ್ಯದ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಈ ಸಂಜೆ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.ಕೊಡಗು ಜಿಲ್ಲೆಗೆ ಮಾರಕವಾಗು ವುದರೊಂದಿಗೆ ವಿದ್ಯಾರ್ಥಿ ಸಮೂಹವನ್ನು ಹಾದಿ ತಪ್ಪಿಸುತ್ತಿದ್ದ ಈ ದಂಧೆಕೋರರನ್ನು ಜಿಲ್ಲಾ ಪೊಲೀಸ್ ಅಪರಾಧ ಪತ್ತೆದಳ ಹಾಗೂ ವೀರಾಜಪೇಟೆ ಮತ್ತು ಮಡಿಕೇರಿ ನಗರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಇದೊಂದು ಶ್ಲಾಘನೀಯ ಕಾರ್ಯಾಚರಣೆ ಎಂದು ಅವರು ಪ್ರಶಂಶಿಸಿದರು.

ದಂಧೆಕೋರರ ಸುಳಿವು : ನಿನ್ನೆ ಸಂಜೆ ಮೈಸೂರಿನಿಂದ ಅಕ್ರಮವಾಗಿ ಗಾಂಜಾ ಖರೀದಿಸಿ ತಂದಿರುವ ನಿಖರ ಮಾಹಿತಿಯೊಂದಿಗೆ, ವೀರಾಜಪೇಟೆಯ ಸುಂಕದಕಟ್ಟೆಯ ಮೈದಾನವನ್ನು ಕೇಂದ್ರವಾಗಿಸಿಕೊಂಡು ಹನ್ನೆರಡು ಮಂದಿ ಆರೋಪಿಗಳು ಗಾಂಜಾವನ್ನು ಜಿಲ್ಲೆಯ ವಿವಿಧ ಕಡೆಗಳಿಗೆ ವಿತರಿಸುವ ಸಲುವಾಗಿ, ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ್ದ ಮೇರೆಗೆ ಕಾರ್ಯಾಚರಣೆ ನಡೆಸಿದಾಗಿ ಅವರು ವಿವರಿಸಿದರು.

ಪಾಸ್ ದುರುಪಯೋಗ : ಕೊರೊನಾ ನಡುವೆ ವೈದ್ಯಕೀಯ ಸೇವೆಗಾಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಹೊಂದಿಕೊಳ್ಳಲಾಗಿದ್ದ ಪಾಸ್ ವೊಂದನ್ನು ಪ್ರಮುಖ ಆರೋಪಿ ದುರುಪಯೋಗಪಡಿಸಿಕೊಂಡಿದಾಗಿಯೂ ಸ್ಪಷ್ಟಪಡಿಸಿದರು. ಈ ಬಗ್ಗೆ ಅಪರಾಧ ಪತ್ತೆದಳ ಪೊಲೀಸರು ವೀರಾಜಪೇಟೆ ಪೊಲೀಸ್ ತಂಡದೊಡಗೂಡಿ ಕೃತ್ಯವನ್ನು ಭೇದಿಸಿದ್ದು, ಪ್ರಮುಖ ಆರೋಪಿ ಸುಂಕದಕಟ್ಟೆ ನಿವಾಸಿ ಚಾಂದ್‍ಪಾಶ ಎಂಬವರ ಪುತ್ರ ನಿಸಾರ್ ಅಹ್ಮದ್ (34) ವೈದ್ಯಕೀಯ ಪಾಸ್ ದುರುಪಯೋಗದೊಂದಿಗೆ ಮೈಸೂರಿನಿಂದ ಗಾಂಜಾವನ್ನು ಕಾನೂನು ಬಾಹಿರವಾಗಿ ಸಗಟು ರೂಪದಲ್ಲಿ ತರುತ್ತಿದ್ದುದ್ದಾಗಿ ಬಹಿರಂಗಗೊಳಿಸಿದರು. ಈತನಿಗೆ ಅಲ್ಲಿನ ಬಂಗಾಳಬೀದಿ ನಿವಾಸಿ ಎ.ಎಸ್. ಸಾದಿಕ್ (31) ದುಷ್ಕøತ್ಯಕ್ಕೆ ನೆರವಾಗಿದ್ದಾಗಿಯೂ ನೆನಪಿಸಿದರು.

12 ಮಂದಿ ವಶ : ಮೇಲಿನ ಪ್ರಮುಖ ಇಬ್ಬರು

(ಮೊದಲ ಪುಟದಿಂದ) ಸೂತ್ರದಾರಿಗಳೊಂದಿಗೆ ಇತರ ಆರೋಪಿಗಳಾದ ಮೊಗರಗಲ್ಲಿ ನಿವಾಸಿ ಎ.ಸಿ. ಸಾಯಿಲಾಲ್ (22), ಎಸ್. ರಿಜ್ವಾನ್ (23) ಹಾಗೂ ಮಡಿಕೇರಿಯ ಗೌಡ ಸಮಾಜ ಬಳಿಯ ನಿವಾಸಿ ವಾಹನ ಚಾಲಕ ಬೌತೇಶ್ ಡಿಸೋಜ ಅಲಿಯಾಸ್ ಅನಿಲ್ (33), ಅಲ್ಲಿನ ಇನ್ನೋರ್ವ ನಿವಾಸಿ ಆಟೋ ಚಾಲಕ ಎಂ.ಹೆಚ್. ರಫೀಕ್ (35), ತ್ಯಾಗರಾಜ ಕಾಲೋನಿಯ ಕಾರ್ಮಿಕ ತಾಜೂದ್ದೀನ್ ಎಂಬವರ ಪುತ್ರ ಆರೀಸ್ (33), ಆಜಾದ್‍ನಗರದ ವೈರಿಂಗ್ ಕೆಲಸಗಾರ ಮಹಮ್ಮದ್ ಹ್ಯಾರೀಸ್ (37), ಉಕ್ಕುಡ ನಿವಾಸಿ ಸಿ.ಟಿ. ದಿನೇಶ್ (37), ಕಾಲೇಜು ಹಿಂಭಾಗದ ನಿವಾಸಿ ಕೃಷಿಕ ಎನ್.ಪಿ. ಅಯ್ಯಪ್ಪ (34), ಚೈನ್‍ಗೇಟ್ ಬಳಿಯ ಎಂ.ಜಿ. ಮಿಲನ್ (26), ಹಾಕತ್ತೂರು ತೊಂಭತ್ತುಮನೆಯ ಜಿ. ಕರಣ್‍ಕುಮಾರ್ ಅಲಿಯಾಸ್ ಶರತ್ (24) ಬಂಧಿತ ಆರೋಪಿಗಳಾಗಿದ್ದಾರೆ.

ಹಿಂದೆಯೂ ಕೃತ್ಯದಲ್ಲಿ ಭಾಗಿ : ಪ್ರಮುಖ ಆರೋಪಿಗಳಾದ ನಿಸಾರ್ ಅಹ್ಮದ್ ಮತ್ತು ಎ.ಎಸ್. ಸಾದಿಕ್ ಈ ಹಿಂದೆಯೂ ಅಕ್ರಮ ದಂಧೆಯೊಂದಿಗೆ ಮೊಕದ್ದಮೆ ಎದುರಿಸುತ್ತಿರುವುದಾಗಿ ವಿವರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವೀರಾಜಪೇಟೆಯಲ್ಲಿ ತಾ. 19ರಂದು ಸುಂಕದಕಟ್ಟೆಯ ಮೈದಾನದಲ್ಲಿ ಮೈಸೂರಿನಿಂದ ತಂದಿರುವ ಗಾಂಜಾವನ್ನು ಆರೋಪಿಗಳು ಪರಸ್ಪರ ಹಂಚುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕೊಡಗು ಪೊಲೀಸ್ ತಂಡ ಅಪರಾಧ ಪತ್ತೆದಳದ ನೇತೃತ್ವದಲ್ಲಿ ಕಾರ್ಯಾಚರಣೆಯೊಂದಿಗೆ ಯಶಸ್ವಿ ಯಾಗಿ ಭೇದಿಸಿದ್ದಾಗಿ ವಿವರಿಸಿದರು. ಈ ತಂಡದಲ್ಲಿ ವೀರಾಜಪೇಟೆ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ನಂದೀಶ್, ಅಲ್ಲಿನ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಹಾಗೂ ವೃತ್ತ ನಿರೀಕ್ಷಕ ಕ್ಯಾತೇಗೌಡ, ಡಿಸಿಐಬಿ ಘಟಕದ ಪ್ರಬಾರ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದಾಗಿ ನುಡಿದರು.

ವಾಹನಗಳು ವಶ : ಈ ಸಂದರ್ಭ ಸ್ಥಳದಲ್ಲಿ ಅಕ್ರಮ ದಂಧೆಗೆ ಬಳಸಿದ 9.322 ಕೆ.ಜಿ. ತೂಕದ ಗಾಂಜಾ, ನಗದು ರೂ. 1,99,670, 11 ವಿವಿಧ ಕಂಪೆನಿಗಳ ಮೊಬೈಲ್, ಮಾರುತಿ ರಿಟ್ಜ್ ಕಾರು (ಕೆಎ12-ಜೆಡ್ 4620), ಇಟಿಯೋಸ್ ಕಾರು (ಕೆಎ 04 ಡಿ5905), ಮಾರುತಿ ಸೆಲೆರಿಯೋ ಕಾರು (ಕೆಎ58 ವಿ9220), ಇನ್‍ವೆಡರ್ ಜೀಪು (ಕೆಎ34 ಎಂ4850), ಮಾರುತಿ ವ್ಯಾನ್ (ಕೆಎ12 ಎಂ7727), ಆಟೋರಿಕ್ಷಾ (ಕೆಎ12 ಬಿ3752), ಸ್ಕೂಟರ್ (ಕೆಎ12 ಆರ್6785) ಸೇರಿದಂತೆ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮತ್ತೆ ಮೂವರ ಬಂಧನ : ಮತ್ತೊಂದು ಪ್ರಕರಣದಲ್ಲಿ ಮಡಿಕೇರಿ ನಗರ ಪೊಲೀಸರು ಅಕ್ರಮ ಗಾಂಜಾ ದಂಧೆ ನಡೆಸುತ್ತಿದ್ದ ನಿಖರ ಸುಳಿವಿನ ಮೇರೆಗೆ ಮಹದೇವಪೇಟೆಯ ಎಂ.ಎ. ಹಮೀದ್ ಪುತ್ರ ಎಂ.ಹೆಚ್. ಸಫ್ವಾನ್ (30), ಗಣಪತಿಬೀದಿಯ ಅಬೂಬಕರ್ ಪುತ್ರ ಎಂ.ಎ. ಇಮ್ರಾನ್ (35) ಹಾಗೂ ಶಾಸ್ತ್ರಿನಗರದ ಎ.ಆರ್. ಹಸನ್ ಪುತ್ರ ಎಂ.ಹೆಚ್. ಇಮ್ರಾನ್ (36) ಎಂಬವರುಗಳನ್ನು ಈ ನಡುವೆ ಬಂಧಿಸಿ ರೂ. 60 ಸಾವಿರ ಮೌಲ್ಯದ 1.15 ಕೆ.ಜಿ. ಗಾಂಜಾದೊಂದಿಗೆ, ಕಾರೊಂದನ್ನು (ಕೆ.ಎ.02-ಎಂಪಿ5999) ವಶಪಡಿಸಿಕೊಂಡಿ ರುವುದಾಗಿಯೂ ಪೊಲೀಸ್ ಅಧೀಕ್ಷಕರು ತಿಳಿಸಿದರು.

ವೀರಾಜಪೇಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಅಲ್ಲಿನ ಠಾಣಾಧಿಕಾರಿಗಳಾದ ಮರಿಸ್ವಾಮಿ, ಬೋಜಪ್ಪ, ಡಿಸಿಐಬಿ ಎಎಸ್‍ಐ ಹಮೀದ್, ಕೆ.ಎಸ್. ಅನಿಲ್ ಕುಮಾರ್, ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್, ಬಿ.ಜೆ. ಶರತ್ ರೈ, ಎಂ.ಬಿ. ಸುಮತಿ, ಯು.ಎ. ಮಹೇಶ್, ಎಎಸ್‍ಐ ಶ್ರೀಧರ್, ಲೋಕೇಶ್, ಚಾಲಕರಾದ ಶಶಿಕುಮಾರ್, ಪ್ರವೀಣ್, ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಅಪರಾಧ ದಳ ಸಿಬ್ಬಂದಿಗಳಾದ ಕೆ. ನಾಗರಾಜ್, ದಿನೇಶ್, ಪ್ರವೀಣ್, ಪೊಲೀಸ್ ಕಚೇರಿಯ ಸಿ.ಡಿ.ಆರ್. ಶೆಲ್‍ನ ಸಿ.ಕೆ. ರಾಜೇಶ್, ಎಂ.ಎ. ಗಿರೀಶ್ ಪಾಲ್ಗೊಂಡಿದ್ದಾಗಿ ಎಸ್ಪಿ ಮಾಹಿತಿ ನೀಡಿದರು.

ಮಡಿಕೇರಿ ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ಬಿ.ಪಿ. ದಿನೇಶ್‍ಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಎಂ.ಟಿ. ಅಂತಿಮ, ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಹೆಚ್.ಎಸ್. ಶ್ರೀನಿವಾಸ್, ಬಿ.ಕೆ. ಪ್ರವೀಣ್, ನಾಗರಾಜ್ ಕಡಗನ್ನವರ್, ಬಿ.ಜಿ. ಅರುಣ್ ಕುಮಾರ್, ಬಿ.ಓ. ಸುನಿಲ್, ನಂದಕುಮಾರ್, ಎಲ್.ಎಸ್. ಶಶಿಕುಮಾರ್ ಪಾಲ್ಗೊಂಡಿದ್ದಾಗಿ ಮಾಹಿತಿಯಿತ್ತರು.

ಎಚ್ಚರಿಕೆ ರವಾನೆ : ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಉಭಯ ಕಡೆ ಕಾರ್ಯವನ್ನು ಶ್ಲಾಘಿಸಿದ ಅವರು ಕೊಡಗಿನಲ್ಲಿ ಇಂತಹ ಕೃತ್ಯ ಮುಂದುವರೆದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಎಸ್ಪಿ, ಈ ಕೃತ್ಯದ ಹಿಂದಿರುವ ಇನ್ನಷ್ಟು ಜಾಲವನ್ನು ಭೇದಿಸುವ ದಿಶೆಯಲ್ಲಿ ತನಿಖೆ ನಡೆಸುತ್ತಿರುವುದಾಗಿಯೂ ಮಾರ್ನುಡಿದರು.

ಹಲ್ಲೆ ಆರೋಪಿ ಸೆರೆ : ಈ ನಡುವೆ ನಿನ್ನೆ ವೀರಾಜಪೇಟೆಯಲ್ಲಿ ಗಾಂಜಾ ದಂಧೆಯ ಸಂಬಂಧ ನಡೆದಿದೆ ಎನ್ನಲಾಗುತ್ತಿರುವ ಹೊಡೆದಾಟ ಪ್ರಕರಣದ ಕುರಿತಾಗಿಯೂ ತನಿಖೆ ನಡೆಯುತ್ತಿದ್ದು, ಈಗಾಗಲೇ ಸಾಜೀರ್ ಎಂಬಾತನನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ವಿವಿಧ ಪೊಲೀಸ್ ಅಧಿಕಾರಿಗಳು ಮತ್ತು ಕಾರ್ಯ ತಂಡದ ಸಿಬ್ಬಂದಿ ಹಾಜರಿದ್ದರು.

ನ್ಯಾಯಾಂಗ ವಶ : ಬಂಧಿತ ಎಲ್ಲಾ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದರೊಂದಿಗೆ, 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.