ಮಡಿಕೇರಿ, ಮೇ 20: ದಕ್ಷಿಣ ಕೊಡಗಿನ ವ್ಯಾಪ್ತಿಗೆ ಒಳಪಟ್ಟಂತೆ ನೂತನವಾಗಿ ಸರಕಾರದಿಂದ ಘೋಷಣೆಯಾಗಿರುವ ಪೊನ್ನಂಪೇಟೆ (ಕಿಗ್ಗಟ್ಟುನಾಡು) ತಾಲೂಕು ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲು ದಾರಿ ಸುಗಮಗೊಂಡಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿ ಈ ಕುರಿತಾಗಿ ಅಧಿಕೃತವಾದ ಆದೇಶ ಹೊರ ಬೀಳಲಿರುವ ನಿರೀಕ್ಷೆ ಉಂಟಾಗಿದೆ.ಪೊನ್ನಂಪೇಟೆ ತಾಲೂಕು ರಚನೆ ಕುರಿತಾಗಿ ಅಂತಿಮ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಸ್ಪಷ್ಟ ಅಭಿಪ್ರಾಯದೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಇತ್ತೀಚೆಗೆ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ನೂತನವಾಗಿ ಘೋಷಣೆಯಾಗಿರುವ ತಾಲೂಕಿಗೆ ಗ್ರಾಮಗಳನ್ನು ಸೇರ್ಪಡೆ ಮಾಡಿ ಗಡಿಗಳನ್ನು ಗುರುತಿಸಿ ಈ ಹಿಂದೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿತ್ತಲ್ಲದೆ, 19.3.2020ರ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿತ್ತು.ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ಒಂದು ತಿಂಗಳ ಒಳಗಾಗಿ ಈ ಬಗ್ಗೆ ಸ್ವೀಕೃತವಾಗುವ ಆಕ್ಷೇಪಣೆ-ಸಲಹೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲು ಈ ಕುರಿತ ವಿವರವನ್ನು ಸರಕಾರಕ್ಕೆ ವರದಿ ಮಾಡಲು ತಾ. 12 ರಂದು ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ (ಭೂಮಾಪನ) ವಿ.ಟಿ. ರಾಜಶ್ರೀ ಅವರು ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಇದರಂತೆ ಇದೀಗ ಜಿಲ್ಲಾಧಿಕಾರಿಗಳು ಸರಕಾರಕ್ಕೆ ವರದಿ ನೀಡಿದ್ದಾರೆ. ಕಂದಾಯ ಇಲಾಖೆಯ ಸರಕಾರದ ಪ್ರಧಾನ

(ಮೊದಲ ಪುಟದಿಂದ) ಕಾರ್ಯದರ್ಶಿಗಳಿಗೆ ಮಾಹಿತಿ ಒದಗಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪೊನ್ನಂಪೇಟೆ ಹೊಸ ತಾಲೂಕು ಸಂಬಂಧವಾಗಿ ಸಾರ್ವಜನಿಕರಿಂದ ಯಾವುದೇ ತಕರಾರು ಇರುವುದಿಲ್ಲ ಎಂಬದನ್ನು ತಿಳಿಸಿದ್ದಾರೆ.

ರಚನೆಯಾಗಿರುವ ಹೊಸ ತಾಲೂಕಿಗೆ ಸೇರ್ಪಡೆ ಮಾಡಲಾದ ಗ್ರಾಮ ಮತ್ತು ವಿವಿಧ ವೃತ್ತಗಳನ್ನು ಸೇರಿಸಿದ ನಂತರ ಈ ಕುರಿತು ಪೊನ್ನಂಪೇಟೆ ಮತ್ತು ವೀರಾಜಪೇಟೆಯ ಸರಹದ್ದಿನಲ್ಲಿ ಗುರುತಿಸಿರುವ ತಾಲೂಕು ಮತ್ತು ರಾಜ್ಯಗಳ ಗಡಿಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಒಂದು ತಿಂಗಳ ಒಳಗೆ ವರದಿ ಸಲ್ಲಿಕೆಗೆ ಈ ಹಿಂದೆ ಸೂಚಿಸಲಾಗಿತ್ತು. ಇದಕ್ಕೆ ಏಪ್ರಿಲ್ 5ರ ಕಾಲಮಿತಿಯನ್ನು ನಿಗದಿಪಡಿಸಲಾಗಿತ್ತು.

ಇದೀಗ ಸರಕಾರದ ಪತ್ರಕ್ಕೆ ಉತ್ತರ ನೀಡಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವುದೇ ತಕರಾರು ಸ್ವೀಕೃತವಾಗಿಲ್ಲ. ಹೊಸ ತಾಲೂಕು ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವ ಕುರಿತು ಮುಂದಿನ ಕ್ರಮಕ್ಕಾಗಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.ಪೊನ್ನಂಪೇಟೆ ತಾಲೂಕು: ಅಂತಿಮ ಅಧಿಸೂಚನೆಗೆ ರಹದಾರಿ