ಸೋಮವಾರಪೇಟೆ, ಮೇ 18: ಕೊರೊನಾ ಸೋಂಕು ಹರಡುವದನ್ನು ತಡೆಗಟ್ಟಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ, ಸರ್ಕಾರದ ಆದೇಶಗಳನ್ನು ಗಾಳಿಗೆ ತೂರುತ್ತಿರುವ ಸನ್ನಿವೇಶಗಳು ನಡೆಯುತ್ತಿವೆ.

ಪ್ರಸ್ತುತ ವ್ಯಾಪಾರ ವಹಿವಾಟಿಗೆ ಜಿಲ್ಲಾಡಳಿತ ಸಂಜೆ 5 ಗಂಟೆಯವರೆಗೆ ಅವಕಾಶ ಕಲ್ಪಿಸಿದ್ದು, 5 ಗಂಟೆಯ ನಂತರ ಲಾಕ್‍ಡೌನ್ ಕಡ್ಡಾಯವಾಗಿ ಜಾರಿಯಾಗಬೇಕಿದೆ. ಆದರೆ ಸೋಮವಾರಪೇಟೆ ಪಟ್ಟಣದಲ್ಲಿ ಕೆಲವು ಅಂಗಡಿಗಳು ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೇ ಸಂಜೆ 5 ಗಂಟೆಯ ನಂತರವೂ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಳ್ಳುತ್ತಿರುವದು ಕಂಡುಬರುತ್ತಿವೆ.

ಈ ಹಿಂದೆ ಸಂಜೆ 4.55ಕ್ಕೆ ಸೈರನ್ ಮೊಳಗಿಸುತ್ತಾ ಪೊಲೀಸ್ ವಾಹನಗಳು ಪಟ್ಟಣದಾದ್ಯಂತ ಸಂಚರಿಸಿ, ಅಂಗಡಿಗಳ ಬಾಗಿಲು ಮುಚ್ಚುವಂತೆ, ಸಾರ್ವಜನಿಕರು ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ಸೂಚನೆ ನೀಡುತ್ತಿದ್ದರು. ಪೊಲೀಸರ ಭಯ ದಿಂದ ಅಂಗಡಿಗಳ ಮಾಲೀಕರೂ ಸಹ ತಮ್ಮ ಅಂಗಡಿಗಳನ್ನು ಸರಿಯಾಗಿ 5 ಗಂಟೆಗೆ ಮುಚ್ಚುತ್ತಿದ್ದರು.

ಆದರೆ ಸಂತೆ ದಿನವಾದ ಸೋಮವಾರದಂದು ಬೆಳಗ್ಗೆ 6 ಗಂಟೆಯಿಂದಲೂ ವ್ಯಾಪಾರ ವಹಿವಾಟು ನಡೆಸಿದ ಕೆಲವು ಅಂಗಡಿಗಳ ಮಾಲೀಕರು ಸಂಜೆ 5 ಗಂಟೆಯ ನಂತರವೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಕೆಲ ಅಂಗಡಿಗಳು ಸಂಜೆ 5 ಗಂಟೆಗೆ ಬಾಗಿಲು ಮುಚ್ಚುವ ಬದಲು 5.30ರವರೆಗೂ ವಹಿವಾಟು ನಡೆಸಿದವು. 6 ಗಂಟೆಯ ವೇಳೆಗೆ ಬಾಗಿಲು ಮುಚ್ಚಿ ಮಾಲೀಕರು ಮನೆಯತ್ತ ತೆರಳಿದರು.

ಲಾಕ್‍ಡೌನ್ ಸಡಿಲಿಕೆ ಇರುವ ಸಮಯದಲ್ಲಿ ಪಟ್ಟಣದಲ್ಲಿ ವೃಥಾ ಅಲೆಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಗ್ರಾಮೀಣ ಭಾಗದಿಂದ ಆಗಮಿಸುವ ಮಂದಿ ತಮ್ಮ ಕೆಲಸ ಕಾರ್ಯ ಮುಗಿದಾಕ್ಷಣ ಗ್ರಾಮಕ್ಕೆ ಹಿಂತೆರಳುತ್ತಿದ್ದರೆ, ಪಟ್ಟಣ ಸುತ್ತಮುತ್ತಲ ಗ್ರಾಮಗಳ ಹಲವಷ್ಟು ಮಂದಿ ಬೆಳಗ್ಗಿನಿಂದ ಸಂಜೆಯವರೆಗೂ ಪಟ್ಟಣದಲ್ಲಿ ‘ಟೈಂ ಪಾಸ್’ ಮಾಡುತ್ತಿರುವದು ಕಂಡುಬರುತ್ತಿದೆ.