ಮಡಿಕೇರಿ, ಮೇ 18: ಅಬ್ಬರದ ಸಿಡಿಲು-ಗುಡುಗಿನ ನಡುವೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದೆ. ನಿನ್ನೆ ಮಧ್ಯಾಹ್ನದ ನಂತರ ಕೆಲವೆಡೆ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗಿದ್ದರೆ, ಸಂಜೆಗತ್ತಲೆಯಾಗುತ್ತಿದ್ದಂತೆ ಸಿಡಿಲು-ಗುಡುಗು ಸದ್ದಿನೊಂದಿಗೆ ಮಳೆ ಸುರಿಯಲಾರಂಭಿಸಿದೆ. ರಾತ್ರಿಯ ಬಳಿಕ ಭಾರೀ ಸಿಡಿಲು-ಗುಡುಗಿನೊಂದಿಗೆ ಧಾರಾಕಾರ ಮಳೆಯಾಗಿದೆ. ಕೆಲವೆಡೆಗಳಲ್ಲಿ ನಿರಂತರ 12 ಗಂಟೆಗಳ ಕಾಲ ಮಳೆಯಾಗಿರುವ ಕುರಿತು ವರದಿಯಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ಧಾರಾಕಾರ ಮಳೆಯಾಗಿದೆ. ಮಳೆ ನೀರಿನ ರಭಸಕ್ಕೆ ಮಡಿಕೇರಿ ನಗರದ ಚರಂಡಿಗಳು ತುಂಬಿಕೊಂಡು ರಸ್ತೆ ಮೇಲೆಯೇ ನೀರು ಹರಿದು ಚರಂಡಿಯಲ್ಲಿದ್ದ ತ್ಯಾಜ್ಯಗಳು, ಕಲ್ಲುಗಳು ರಸ್ತೆಯಲ್ಲಿ ಶೇಖರಣೆಗೊಂಡಿದ್ದುದು ಗೋಚರಿಸಿದೆ. ಹೊಂಡ ಬಿದ್ದಿದ್ದ ರಸ್ತೆಗಳು, ಡಾಮರು ಕಾಣದ ರಸ್ತೆಗಳಿಗೆ ಮತ್ತಷ್ಟು ಹಾನಿಯಾಗಿದೆ. ಕೊಚ್ಚಿ ಹೋದ ರಸ್ತೆ ಮಡಿಕೇರಿ ಸನಿಹದ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಸಬ್ಬಂಡ್ರ ಕುಟುಂಬಸ್ಥರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿದೆ. 2018ರ ಭೂಕುಸಿತ ಸಂದರ್ಭ ಗದ್ದೆ ಸಹಿತ ರಸ್ತೆ ಕೊಚ್ಚಿ ಹೋಗಿತ್ತು. ಸಂಪರ್ಕ ಕಡಿತಗೊಂಡು ಈ ಬಾರಿ ಪಂಚಾಯಿತಿಯಿಂದ ಮೋರಿ ಅಳವಡಿಸುವುದ ರೊಂದಿಗೆ ಕುಟುಂಬಸ್ಥರೇ ಸೇರಿ ರಸ್ತೆ ನಿರ್ಮಿಸಿಕೊಂಡಿದ್ದರು. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಹೊಸ ರಸ್ತೆಯೂ ಕೊಚ್ಚಿ ಹೋಗಿ ಮತ್ತೆ ಸಂಪರ್ಕ ಕಡಿತಗೊಂಡಿದೆ. (ಮೊದಲ ಪುಟದಿಂದ) ನಾಲ್ಕುನಾಡು ವ್ಯಾಪ್ತಿಯಲ್ಲಿ 7 ಗಂಟೆ ಮಳೆ ನಾಪೆÇೀಕ್ಲು: ನಾಲ್ಕುನಾಡು ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗಿನ ಜಾವ 5 ಗಂಟೆಗೆ ಆರಂಭವಾದ ಮಳೆ ಬೆಳಿಗ್ಗೆ 11 ಗಂಟೆಯವರೆಗೆ ಸುರಿಯುವ ಮೂಲಕ ಜನರಿಗೆ ಆತಂಕ ಮೂಡಿಸಿದೆ. ನಂತರವೂ ತುಂತುರು ಮಳೆ, ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಗಾಳಿ ಇಲ್ಲದ ಪರಿಣಾಮ ಯಾವದೇ ಅನಾಹುತ ಸಂಭವಿಸಿಲ್ಲ.

ನಾಲ್ಕುನಾಡು ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಪ್ರತೀ ದಿನ ಸುರಿಯುತ್ತಿದ್ದ ಮಳೆಯ ಕಾರಣ ಕಾಫಿ ತೋಟಗಳಿಗೆ ರಸಗೊಬ್ಬರ ಹಾಕುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೂ ಅವಧಿಗೆ ಮುನ್ನ ರಸಗೊಬ್ಬರ ನೀಡಿದ್ದಲ್ಲಿ ಕಾಫಿ ಕಾಯಿಗಳು ಮಳೆಗಾಲದಲ್ಲಿ ಉದುರುತ್ತವೆ ಎಂಬ ಕಾರಣದಿಂದ ಕೆಲವು ಬೆಳೆಗಾರರು ರಸಗೊಬ್ಬರ ಹಾಕಲು ವಿಳಂಬ ಮಾಡುತ್ತಿದ್ದಾರೆ. ಅಂತಹವರಿಗೆ ಈ ಮಳೆಯು ವರದಾನವಾಗಿ ಪರಿಣಮಿಸಿದೆ ಎನ್ನಬಹುದು.

ನಾಲ್ಕುನಾಡು ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 16ರಿಂದ 18 ಇಂಚುಗಳಷ್ಟು ಮಳೆ ಸುರಿದಿದ್ದು, ಮಳೆಯ ನಡುವೆಯೂ ನಾಪೆÇೀಕ್ಲು ಪಟ್ಟಣದಲ್ಲಿ ಹೆಚ್ಚಿನ ವಾಹನ ಸಂಚಾರ, ಜನ ಸಂಚಾರ ಕಂಡು ಬಂತು.

ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ಇಂದು ಬೆಳಗಿನ ಜಾವ 4ಗಂಟೆಯ ಸಮಯದಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ನಿನ್ನೆ ಅಪರಾಹ್ನದಿಂದಲೇ ಈ ವಿಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು ಇಂದು ಇದೇ ವಾತಾವರಣ ಮುಂದುವರೆದಿತ್ತು. ಇಂದು ಬೆಳಗಿನ ಜಾವ 10-8 ಮಿ.ಮೀ. ಮಳೆ ಸುರಿದಿದೆ.

ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಹುದುಗೂರು, ಮದಲಾಪುರ, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದೆ.

ಈ ವ್ಯಾಪ್ತಿಯಲ್ಲಿ ಭೂಮಿ ಹದ ಅಗುವ ರೀತಿಯಲ್ಲಿ ಮಳೆ ಬಿದ್ದಿರುವುದರಿಂದ ಹಾರಂಗಿ ಅಚ್ಚುಕಟ್ಟು ಪ್ರದೇಶ ರೈತರು ತಮ್ಮ ಜಮೀನಿನ ಉಳುಮೆ ಪ್ರಾರಂಭ ಮಾಡಿದ್ದಾರೆ.

ಮನೆ ಮೇಲೆ ಮರ ಬಿದ್ದು ಹಾನಿ

ಕುಶಾಲನಗರ: ಭಾನುವಾರ ಮಧ್ಯಾಹ್ನ ಸುರಿದ ಭಾರೀ ಗಾಳಿ ಮಳೆಗೆ ಕುಶಾಲನಗರದ ಗಡಿಭಾಗ ಕೊಪ್ಪ, ಬೈಲುಕೊಪ್ಪ ವ್ಯಾಪ್ತಿಯಲ್ಲಿ ಹಲವು ಮರಗಳು ನೆಲಕಚ್ಚಿದ್ದು ಮನೆಗಳು ಜಖಂಗೊಂಡಿವೆ. ಮರಡಿಯೂರು ವ್ಯಾಪ್ತಿಯಲ್ಲಿ ಹಲವು ಮನೆಗಳ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ. ಕಾವೇರಿ ನದಿ ಸೇತುವೆ ಭಾಗದ ಮೈಸೂರು ಕೋವಿಡ್-19 ತಪಾಸಣಾ ಕೇಂದ್ರದ ಶೆಡ್ ಗಾಳಿಗೆ ಹಾರಿಹೋಗಿದೆ.

ಅದೃಷ್ಟವಶಾತ್ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು, ಅಧಿಕಾರಿಗಳು ಓಡಿ ಹೋಗಿ ಸಮೀಪದ ಕಟ್ಟಡದಲ್ಲಿ ರಕ್ಷಣೆ ಪಡೆದಿದ್ದಾರೆ. ಕೇಂದ್ರದಲ್ಲಿದ್ದ ದಾಖಲೆಗಳು, ಕಂಪ್ಯೂಟರ್, ಸಿಸಿ ಕ್ಯಾಮೆರ ಹಾನಿಗೊಳಗಾಗಿವೆ. ಕಳೆದ 15 ದಿನದ ಅವಧಿಯಲ್ಲಿ ಮೂರನೇ ಈ ಬಾರಿ ಈ ಕೇಂದ್ರದ ಶೆಡ್ ಹಾನಿಗೊಳಗಾಗಿದೆ ಎಂದಿರುವ ಸಿಬ್ಬಂದಿಗಳು ತಮಗೆ ಶಾಶ್ವತ ಕಛೇರಿಯೊಂದನ್ನು ಕಲ್ಪಿಸುವಂತೆ ಪತ್ರಿಕೆ ಮೂಲಕ ಕೋರಿದ್ದಾರೆ.

ಇದರಂತೆ ಸುತ್ತಮುತ್ತ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಮರಗಳ ರಂಬೆ ಕೊಂಬೆ ಮುರಿದು ಬಿದ್ದ ದೃಶ್ಯ ಕಂಡುಬಂತು. ಬೈಲುಕೊಪ್ಪೆಯಲ್ಲಿ ಚಂದ್ರಶೇಖರ್ ಎಂಬವರು ಬೆಳೆದಿದ್ದ ಸಾವಿರಾರು ಸಂಖ್ಯೆ ನೇಂದ್ರ ಬಾಳೆ ಮರ ಮುರಿದುಬಿದ್ದು 9 ಲಕ್ಷಕ್ಕೂ ಅಧಿಕನಷ್ಟ ಉಂಟಾಗಿದೆ.

ಸಿದ್ದಾಪುರದಲ್ಲಿ ಮಳೆ

ಸಿದ್ದಾಪುರ ಸುತ್ತಮುತ್ತ ಪ್ರದೇಶದಲ್ಲಿ ಭಾನುವಾರದಂದು ರಾತ್ರಿಯಿಂದ ಬೆಳಿಗ್ಗಿನವÀರೆಗೆ ಮಳೆ ಸುರಿದಿರುತ್ತದೆ. ಸಿದ್ದಾಪುರದ ಸಮೀಪದ ಮಾಲ್ದಾರೆ, ಗುಡ್ಲೂರು, ಗುಹ್ಯ ಬಾಗದಲ್ಲಿ ಶುಂಠಿ ಕೃಷಿ ಮಾಡಿದ ಬೆಳೆಗಾರರಿಗೆ ಮಳೆ ಸುರಿದಿರುವುದು ಅನುಕೂಲವಾಗಿದೆ. ಭತ್ತದ ಕೃಷಿ ಮಾಡುವ ಕೃಷಿಕರು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾಗಮಂಡಲದಲ್ಲಿ 13 ಗಂಟೆ ಮಳೆ

ಭಾಗಮಂಡಲ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಆರು ಗಂಟೆಯಿಂದ ಸೋಮವಾರ ಬೆಳಗ್ಗಿನ ಜಾವ ಏಳು ಗಂಟೆಯವರೆಗೆ ನಿರಂತರವಾಗಿ ಸುಮಾರು 13ಗಂಟೆಗಳ ಕಾಲ ಮಳೆ ಸುರಿಯಿತು. ನದಿ ತೋಡುಗಳಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಅಲ್ಪಮಟ್ಟಿನ ಏರಿಕೆ ಕಂಡುಬಂದಿದೆ. ಮಳೆಯಿಂದಾಗಿ ಈ ವ್ಯಾಪ್ತಿಯ ರೈತರಿಗೆ ಸಂತಸವಾಗಿದೆ. ಭಾಗಮಂಡಲ ಪಟ್ಟಣದ ಎಲ್ಲೆಡೆ ಕೆಸರಿನಿಂದಾವೃತವಾಗಿದೆ. ಮೇಲ್ಸೇತುವೆ ಕಾಮಗಾರಿಯಿಂದ ಚರಂಡಿಗಳು ಮುಚ್ಚಿಹೋಗಿದ್ದು, ರಸ್ತೆಯಲ್ಲಿ ಕೆಸರು ನೀರು ಹರಿದು ಸಂತೆಯ ದಿನವಾದ ಸೋಮವಾರ ಭಾಗಮಂಡಲದಲ್ಲಿ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಯಿತು. ಭಾಗಮಂಡಲದಲ್ಲಿ ಒಳ ಚರಂಡಿ ವ್ಯವಸ್ಥೆಯನ್ನು ಕೈಗೊಂಡು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದರ ಮೂಲಕ ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೋಮವಾರಪೇಟೆಯಾದ್ಯಂತ ಉತ್ತಮ ಮಳೆ

ಸೋಮವಾರಪೇಟೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಕೃಷಿ ಕಾರ್ಯ ಚುರುಕುಗೊಂಡಿದೆ.

ನಿನ್ನೆ ರಾತ್ರಿಯಿಂದ ಮುಂಜಾನೆಯವರೆಗೂ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿದ್ದು, ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ತೊರೆ, ತೋಡುಗಳಲ್ಲಿ ನೀರಿನ ಹರಿವು ಕಂಡುಬಂದಿದೆ.

ತಾಲೂಕಿನ ಶಾಂತಳ್ಳಿ ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದೆ. ಕೆಲವೆಡೆ 3 ಇಂಚು ಮಳೆ ಸುರಿದಿದ್ದು, ಚರಂಡಿಗಳು ತುಂಬಿ ಹರಿದಿವೆ. ಪರಿಣಾಮ ಅಲ್ಲಲ್ಲಿ ರಸ್ತೆಗಳ ಮೇಲೆ ಕಲ್ಲುಮಣ್ಣು ಶೇಖರಣೆಗೊಂಡಿದ್ದು, ಸಂಚಾರಕ್ಕೆ ಅಲ್ಪ ತೊಂದರೆಯೊಡ್ಡಿದೆ.

ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಶಾಂತಳ್ಳಿಯಲ್ಲಿ 2.75 ಇಂಚು ಮಳೆಯಾಗಿದ್ದು, ಪ್ರಸಕ್ತ ವರ್ಷ ಈವರೆಗೆ 5 ಇಂಚು ಮಳೆ ಸುರಿದಿದೆ. ಹರಗದಲ್ಲಿ 1.80 ಇಂಚು ಮಳೆಯಾಗಿದ್ದರೆ, ಈವರೆಗೆ 9.50 ಇಂಚಿನಷ್ಟು ಮಳೆಯಾದ ಬಗ್ಗೆ ವರದಿಯಾಗಿದೆ.

ಇನ್ನು ಗೌಡಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 1 ಇಂಚು ಮಳೆಯಾಗಿದ್ದರೆ, ಅಭಿಮಠ ಬಾಚಳ್ಳಿಯಲ್ಲಿ 1.70 ಇಂಚು (ಈವರೆಗೆ 5 ಇಂಚು), ಕುಮಾರಳ್ಳಿ ಬಾಚಳ್ಳಿಯಲ್ಲಿ 3 ಇಂಚು (ಈವರೆಗೆ 5) ಸೂರ್ಲಬ್ಬಿಯಲ್ಲಿ 2 ಇಂಚು, ಗರ್ವಾಲೆ ವ್ಯಾಪ್ತಿಯಲ್ಲಿ 1 ಇಂಚು, ತಾಕೇರಿಯಲ್ಲಿ 2.40 ಇಂಚು, ನೇಗಳ್ಳೆ ಗ್ರಾಮದಲ್ಲಿ 70 ಸೆಂಟ್ಸ್, ತೋಳೂರುಶೆಟ್ಟಳ್ಳಿಗೆ 1.80 ಇಂಚು, ಕುಡಿಗಾಣಕ್ಕೆ 2.50 ಇಂಚು ಮಳೆಯಾಗಿದೆ.

ಸೋಮವಾರಪೇಟೆ ಪಟ್ಟಣವನ್ನು ಒಳಗೊಂಡ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 31.4 ಮಿ.ಮೀ. ಮಳೆಯಾಗಿದ್ದು, ಪ್ರಸಕ್ತ ವರ್ಷ ಇಲ್ಲಿಯವರೆಗೆ 6 ಇಂಚಿನಷ್ಟು ಮಳೆ ದಾಖಲಾಗಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಕಾರ್ಯ ಚುರುಕುಗೊಂಡಿದೆ. ಕಾಫಿ ತೋಟದಲ್ಲಿ ಗೊಬ್ಬರ ಹಾಕುವ ಕಾರ್ಯ ಭರದಿಂದ ಸಾಗುತ್ತಿದ್ದು, ಹಲವೆಡೆ ಸ್ಪ್ರೇ ಮಾಡಲಾಗುತ್ತಿದೆ.

ನಿನ್ನೆ ಸುರಿದ ಮಳೆ ಕರಿಮೆಣಸಿಗೆ ಪೂರಕವಾಗಿದ್ದು, ಬಳ್ಳಿಗಳು ಚಿಗುರೊಡೆಯಲು ಅನುಕೂಲಕರವಾಗಿದೆ. ಜೂನ್ ತಿಂಗಳಿನಲ್ಲಿಯೇ ಕರಿ ಮೆಣಸು ಕಾಳು ಕಟ್ಟುವ ನಿರೀಕ್ಷೆಯಿದೆ ಎಂದು ಹರಗ ಗ್ರಾಮದ ಕೃಷಿಕ ಶರಣ್ ಅಭಿಪ್ರಾಯಿಸಿದ್ದಾರೆ.

ನಿನ್ನೆ ಸುರಿದ ಮಳೆಗೆ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು, ಮೆಣಸಿನಕಾಯಿ ಫಸಲು ನಷ್ಟವಾಗಿದೆ. ಗದ್ದೆಯಲ್ಲಿ ಉಳಿದಿದ್ದ ಹಸಿ ಮೆಣಸಿನಕಾಯಿ ಕೊಳೆಯಲಾರಂಭಿಸಿದ್ದು, ತರಕಾರಿ ಬೆಳೆಯೂ ನಷ್ಟಗೊಂಡಿದೆ ಎಂದು ಕೂತಿ ಗ್ರಾಮದ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

ಶನಿವಾರಸಂತೆಯಲ್ಲಿ ಉತ್ತಮ ಮಳೆ

ಪಟ್ಟಣ ಹಾಗೂ ಹೋಬಳಿಯಾದ್ಯಂತ ಸೋಮವಾರ ಬೆಳಗ್ಗಿನ ಜಾವ ಗುಡುಗು-ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಬೆಳಿಗ್ಗೆ 3 ಗಂಟೆಯಿಂದ ಆರಂಭವಾದ ಮಳೆ 7ರ ವರೆಗೂ ಜಿನುಗುತ್ತಲೇ ಇದ್ದು ಒಂದೂಕಾಲು ಇಂಚು ಮಳೆಯಾಗಿದೆ.

ಈ ವಿಭಾಗದಲ್ಲಿ ಒಂದೂವರೆ ತಿಂಗಳಿನಿಂದ ಮಳೆ ಆರಂಭವಾಗಿದ್ದು, ಆಗಾಗ್ಗೆ ಮಳೆಯಾಗುತ್ತಿದೆ. ಈವರೆಗೆ ಒಟ್ಟು 3 ಇಂಚು ಮಳೆಯಾಗಿದೆ. ಹಸಿಮೆಣಸಿನಕಾಯಿ, ಚೆಂಡು ಹೂ ಬೆಳೆಯಿಂದ ಸಂಪೂರ್ಣ ನಷ್ಟ ಅನುಭವಿಸಿದ ರೈತರು ಹದವಾಗಿ ಸುರಿಯುತ್ತಿರುವ ಮಳೆಯಿಂದ ಕೊಂಚ ನೆಮ್ಮದಿ ಕಾಣುತ್ತಿದ್ದಾರೆ. ಕೃಷಿ ಚಟುವಟಿಕೆ ಚುರುಕು ಕಾಣುತ್ತಿದೆ.

ಕೋವಿಡ್-19 ಲಾಕ್‍ಡೌನ್ ರೈತರ ಜೀವನದಲ್ಲೂ ಪ್ರಭಾವ ಬೀರಿತು. ಮಳೆಗಾಲದಲ್ಲಿ ಸಂಸಾರ ನಿರ್ವಹಣೆಗಾಗಿ ರೈತರು ಬೇಸಿಗೆಯಲ್ಲಿ ಬೆಳೆದ ಬೆಳೆ ಕೊಳ್ಳುವವರಿಲ್ಲದೇ ಮಾರುಕಟ್ಟೆಯಿಲ್ಲದೆ ಸಂಪೂರ್ಣ ನೆಲಕಚ್ಚಿತ್ತು.