ಬೆಂಗಳೂರು, ಮೇ 18: ನಿನ್ನೆ ತಾನೆ ಲಾಕ್‍ಡೌನ್ 4.0 ಕ್ಕೆ ಸಂಬಂಧಿಸಿದಂತೆ ಮಾರ್ಗ ಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಸಂಪುಟ ಸಚಿವರೊಂದಿಗೆ ಚರ್ಚೆ ನಡೆಸಿದ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರ್ಕಾರವು ಜನಸಂದಣಿ ಉಂಟಾಗಬಹುದಾದ ಚಟುವಟಿಕೆ ಹೊರತುಪಡಿಸಿ ಮಂಗಳವಾರದಿಂದ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ಸಂಚಾರ ಮತ್ತು ವ್ಯಾಪಾರ ವಹಿವಾಟು ಮಾಡಲು ಸಂಪೂರ್ಣ ಅವಕಾಶ ನೀಡಿದೆ. ಆದರೆ, ಸಿನಿಮಾ ಮಂದಿರಗಳು, ಮಾಲುಗಳು, ಜಿಮ್ ತರಬೇತಿ ಕೇಂದ್ರಗಳನ್ನು ತೆರೆಯಲು ಇನ್ನೂ ಅವಕಾಶÀ ಮಾಡಿಕೊಟ್ಟಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಅನುಮತಿ ಕೊಟ್ಟಿದ್ದೇವೆ .ಹೊಟೇಲ್‍ಗಳಲ್ಲಿಯೂ ಪಾರ್ಸಲ್ ಸೇವೆ ಮಾತ್ರ ಮುಂದುವರಿದಿದೆ.ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲು ರೆಡ್ ಜೋನ್ ಹಾಗೂ ಕಂಟೈನ್‍ಮೆಂಟ್ ಝೋನ್ ಬಿಟ್ಟು ಇತರ ಎಲ್ಲೆಡೆಯೂ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಂಗಳವಾರದಿಂದಲೇ ಬಸ್ ಸಂಚಾರ ಪ್ರಾರಂಭವಾಗಲಿದೆ. ಖಾಸಗಿ ಬಸ್‍ಗಳಿಗೂ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಸ್‍ಗಳಲ್ಲಿ ಕೇವಲ ಮೂವತ್ತು ಮಂದಿ ಮಾತ್ರ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ, ಪ್ರತಿಯೊಬ್ಬ ಪ್ರಯಾಣಿಕರೂ ಮಾಸ್ಕ್ ಧರಿಸುವದು ಕಡ್ಡಾಯ, ಇಲ್ಲದಿದ್ದರೆ ಪೊಲೀಸ್ ಇಲಾಖೆಯಿಂದ ದಂಡ ವಿಧಿಸಲಾಗುತ್ತದೆ ಎಂದರು. ಪ್ರಸ್ತುತ ರಾಜ್ಯದ ಒಳಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಸ್ ಟಿಕೆÀಟ್ ಶುಲ್ಕವನ್ನು ಸದ್ಯಕ್ಕೆ ಹೆಚ್ಚಿಸುವದಿಲ್ಲ. ಈಗ ಆಗಿರುವ ನಷ್ಟವನ್ನು ಸರ್ಕಾರವೇ ತುಂಬಿಕೊಡುತ್ತದೆ. ಹೊರ ರಾಜ್ಯಗಳಿಂದ ಬರುವವರಿಗೆ ಹಂತ ಹಂತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೊರ ರಾಜ್ಯಗಳಿಂದ ಬರುತ್ತಿರುವವರಿಗೆ ಈಗಿನಂತೆಯೇ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು; ಹೊರ ರಾಜ್ಯಗಳಿಗೆ ಹೋಗುವವರು

(ಮೊದಲ ಪುಟದಿಂದ) ಹೋಗಬಹುದು. ಆಟೋ ಮತ್ತು ಟ್ಯಾಕ್ಸಿಗಳು ಮಂಗಳವಾರದಿಂದ ಎಂದಿನಂತೆ ರಸ್ತೆಗಿಳಿಯಬಹುದು; ಆದರೆ, ಆಟೋಗಳಲ್ಲಿ ಚಾಲಕನನ್ನು ಹೊರತು ಪಡಿಸಿ ಇಬ್ಬರು ಪ್ರಯಾಣಿಕರು ಹಾಗೂ ಮ್ಯಾಕ್ಸಿ ಕ್ಯಾಬ್‍ಗಳಲ್ಲಿ ಚಾಲಕ ಹೊರತುಪಡಿಸಿ ಮೂವರು ಪ್ರಯಾಣಿಕರು ಮಾತ್ರ ತೆರಳಬಹುದಾಗಿದೆ ಎಂದು ಘೋಷಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಓಡಾಡಲು ರೈಲುಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಹೊರ ರಾಜ್ಯಗಳಿಂದÀ ಬರುವ ರೈಲುಗಳಿಗೆ ಅವಕಾಶ ನೀಡುವದಿಲ್ಲ ಎಂದರು. ಭಾನುವಾರ ಮಾತ್ರ ಎಲ್ಲ ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ. ಯಾವದೇ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ . ಜನರ ಓಡಾಟಕ್ಕೂ ಅವಕಾಶ ಇರುವದಿಲ್ಲ. ಮೇ 31 ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

ರಾಜ್ಯದ ಎಲ್ಲ ಪಾರ್ಕ್‍ಗಳಲ್ಲಿ ಬೆಳಿಗ್ಗೆ 7 ರಿಂದ 9 ಮತ್ತು ಸಂಜೆ 5ರಿಂದ 7 ರವರೆಗೆ ವಾಕಿಂಗ್ ಮಾಡಲು , ಓಡಾಡಲು ಅವಕಾಶ ಕೊಡಲಾಗಿದೆ ಎಂದರು. ಪ್ರತಿ ನಿತ್ಯ ರಾತ್ರಿ ಏಳು ಗಂಟೆಯಿಂದ ಬೆಳಿಗ್ಗೆ ಏಳು ಗಂಟೆವರೆಗೂ ಕಫ್ರ್ಯೂ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವರಿಸಿದರು.