ಮಡಿಕೇರಿ, ಮೇ 18: ಇಂದು ಜಿಲ್ಲೆಯಲ್ಲಿ ಮೊದಲನೆಯ ಸೋಂಕು ದೃಢಪಟ್ಟು 60 ದಿನಗಳ ನಂತರ ಮತ್ತೊಂದು ಸೋಂಕು ಪತ್ತೆಯಾಗಿದೆ. ಕೊಡಗು ಜಿಲ್ಲೆಗೆ ಹೊರಜಿಲ್ಲೆ, ಹೊರ ರಾಜ್ಯ ಹಾಗೂ ಹೊರರಾಷ್ಟ್ರ ಗಳಿಂದ ಜನರು ಆಗಮಿಸುತ್ತಿದ್ದು, ಈ ಪೈಕಿ ಮುಂಬೈನಿಂದ ಜಿಲ್ಲೆಗೆ ಆಗಮಿಸಿದ ಮಡಿಕೇರಿ ತಾಲೂಕಿನ ನಿವಾಸಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೋಂಕಿತ ಮಹಿಳೆಯು 45 ವರ್ಷದವಳಾಗಿದ್ದು, ಮುಂಬೈನಲ್ಲಿ ಹೋಮ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಸುಧಾರಣೆಯಲ್ಲಿದೆ ಎಂದು ಕೂಡ ಜಿಲ್ಲಾಧಿಕಾರಿ ತಿಳಿಸಿದರು.ಮಾರ್ಚ್ 19 ರಂದು ಜಿಲ್ಲೆಯಲ್ಲಿ ಮೊದಲನೇ ಕೊರೊನಾ ಸೋಂಕು ಪತ್ತೆಯಾಗಿದ್ದು, ಏಪ್ರಿಲ್ 7 ರಂದು ಸೋಂಕಿತನು ಸಂಪೂರ್ಣ ಗುಣ ಮುಖರಾಗಿದ್ದರು. ಕೆಲವೇ ದಿನಗಳಲ್ಲಿ ಪುನಃ ಈತನಿಗೆ ಜ್ವರದ ಲಕ್ಷಣ ಕಂಡುಬಂದಿದ್ದು ಆಸ್ಪತ್ರೆಗೆ ಮತ್ತೆ ದಾಖಲಾಗಿ ಯಾವುದೇ ತೊಂದರೆ ಇಲ್ಲ ಎಂದು ದೃಢಪಟ್ಟ ನಂತರ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದರಾದರೂ, ಇದೀಗ ಮತ್ತೊಂದು ಪ್ರಕರಣ ಜಿಲ್ಲೆಯ ಜನತೆಯ ನೆಮ್ಮದಿ ಕೆಡಿಸಿದೆ. P-15 ನಂತರ P-1224 ಸೋಂಕಿನಿಂದ ಚೇತರಿಸಿಕೊಳ್ಳುವ ತನಕ, ಸೋಂಕಿತರ ಹೆಸರನ್ನು ಸರಕಾರ ಬಯಲು ಮಾಡುತ್ತಿಲ್ಲ. ಸೋಂಕಿತರನ್ನು P-1, P-2 &hellidiv;.. ಎಂದು ಗುರುತಿಸಲಾಗುತ್ತಿದೆ. ಈ ಹಿಂದೆ ಜಿಲ್ಲೆಯ ಮೊದಲನೆಯ ಸೋಂಕಿತನನ್ನು P-15 ಎಂದು ಗುರುತಿಸಲಾಗಿತ್ತು. P-15 ಎಂದರೆ ಕರ್ನಾಟಕದಲ್ಲಿ 15 ನೇ ಸೋಂಕಿತನು ಎಂದರ್ಥ. ಇದೀಗ ದೃಢಪಟ್ಟಿರುವ ಸೋಂಕಿತಳನ್ನು P-1224 ಎಂದು ಗುರುತಿಸಲಾಗಿದ್ದು ಕರ್ನಾಟಕದ 1224 ನೇ ಸೋಂಕಿತರಾಗಿದ್ದಾರೆ.
ಸೋಂಕಿತಳ ಪ್ರಯಾಣ ಇತಿಹಾಸ ಮುಂಬೈನಿಂದ 14 ಪ್ರಯಾಣಿಕರನ್ನು ಒಳಗೊಂಡ ಖಾಸಗಿ (ಸಂತೋಷ್) ಬಸ್ ಮೂಲಕ, ಈ ಮಹಿಳೆÀ ಮಂಗಳೂರಿಗೆ ಬಂದಿದ್ದಾರೆ. ಈ ಬಸ್ ತಾ.14 ರಂದು ಮುಂಬೈ ನಿಂದ ಹೊರಟಿದ್ದು, ತಾ.15 ರಂದು ಸಂಜೆ 5:30 ಕ್ಕೆ ಮಂಗಳೂರಿಗೆ ತಲುಪಿದೆ. ಮಂಗಳೂರು ಊರ್ವ ಪೊಲೀಸ್ ಠಾಣೆಯಿಂದ ಖಾಸಗಿ ಟ್ಯಾಕ್ಸಿ ಒಂದರಲ್ಲಿ ಪ್ರಯಾಣಿಸಿ ಸಂಪಾಜೆ ಚೆಕ್‍ಪೋಸ್ಟ್‍ಗೆ ತಾ.15 ರ ರಾತ್ರಿ 9 ಗಂಟೆಗೆ ತಲುಪಿದ್ದಾರೆ. ಟ್ಯಾಕ್ಸಿ ಚಾಲಕನು
(ಮೊದಲ ಪುಟದಿಂದ) ಸಂಪಾಜೆ ಚೆಕ್‍ಪೋಸ್ಟ್ ಬಳಿ ವಾಹನ ನಿಲ್ಲಿಸಿ ಈ ಮಹಿಳೆಯನ್ನು ಬಿಟ್ಟು ಮಂಗಳೂರಿಗೆ ಹಿಂತೆರಳಿದ್ದಾರೆ. ಆಂಬುಲೆನ್ಸ್ ಮೂಲಕ ಈಕೆಯನ್ನು ಸಂಪಾಜೆಯಿಂದ ಕರೆತಂದು ತಾ.16ರ ಮುಂಜಾನೆ 1 ಗಂಟೆಗೆ ಕೊಡಗು ವೈದ್ಯಕೀಯ ಕೋವಿಡ್ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು ತಾ.18 ಬೆಳಿಗ್ಗೆ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ದೃಢವಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಟ್ಯಾಕ್ಸಿ ಚಾಲಕನಿಗೆ ಮಂಗಳೂರಿನಲ್ಲೆ ಕ್ವಾರಂಟೈನ್
ಈಕೆಗೆ ಸೋಂಕು ದೃಢವಾದ ಕೂಡಲೇ ಕೊಡಗು ಜಿಲ್ಲಾಧಿಕಾರಿಯು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಸಂಪಾಜೆಯ ತನಕ ಈಕೆಯನ್ನು ಟ್ಯಾಕ್ಸಿಯಲ್ಲಿ ಕರೆತಂದವನನ್ನು ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮುಂಬೈನಿಂದ ಬಸ್‍ನಲ್ಲಿ ಬಂದಿದ್ದ ಇನ್ನುಳಿದ 13 ಪ್ರ್ರಯಾಣಿಕರನ್ನು ದ.ಕ ಜಿಲ್ಲಾಡಳಿತ ಪತ್ತೆಹಚ್ಚುತ್ತಿದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕಂಟೈನ್‍ಮೆಂಟ್ ಜೋನ್ ಇಲ್ಲ
ಈ ಹಿಂದೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದ ವ್ಯಕ್ತಿ ಜಿಲ್ಲೆಗೆ ಆಗಮಿಸಿದ್ದಾಗ, ಆತನು ತನ್ನ ಕೊಂಡಂಗೇರಿಯ ನಿವಾಸಕ್ಕೆ ತೆರಳಿ ನಂತರ ಜ್ವರದ ಲಕ್ಷಣ ಬರುತ್ತಿದ್ದಂತೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಕೊಂಡಂಗೇರಿಯನ್ನು ನಿರ್ಬಂಧಿತ ಪ್ರದೇಶವನ್ನಾಗಿ ರೂಪುಗೊಳಿಸಲಾಗಿತ್ತು. ಆದರೆ ಈ ಮಹಿಳೆಯ ಪ್ರಕರಣದಲ್ಲಿ, ಅವರನ್ನು ಸಂಪಾಜೆ ಚೆಕ್‍ಪೋಸ್ಟ್‍ನಿಂದ ನೇರ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ಸ್ಥಳಾಂತರಿಸಿರುವುದರಿಂದ ಯಾವುದೇ ಕಂಟೈನ್‍ಮೆಂಟ್ ಜೋನ್ ಇಲ್ಲ; ಸಾರ್ವಜನಿಕರು ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಅನೀಸ್ ಕಣ್ಮಣಿ ಜಾಯ್ ಭರವಸೆ ನೀಡಿದರು.
ವಿದೇಶದಿಂದ 6 ಜನರ ಆಗಮನ
ಲಾಕ್‍ಡೌನ್ ಸಡಿಲಿಕೆಯ ನಂತರ ಹೊರರಾಜ್ಯ, ರಾಷ್ಟ್ರ ಹಾಗೂ ಹೊರಜಿಲ್ಲೆಗಳಿಂದ ಜಿಲ್ಲೆಯ ನಿವಾಸಿಗಳು ಬರಲಾರಂಭಿಸಿದ್ದಾರೆ. ಈ ಪೈಕಿ 6 ಜನ ವಿದೇಶದಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಹಾರಾಷ್ಟ್ರದಿಂದ 40, ತಮಿಳುನಾಡಿನಿಂದ 75, ಕೇರಳದಿಂದ 192, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಒಟ್ಟು 14, ರಾಜಸ್ತಾನದಿಂದ 8, ಗುಜರಾತ್‍ನಿಂದ ಇಬ್ಬರು, ಇತ್ಯಾದಿ ಸೇರಿ ಹೊರರಾಜ್ಯಗಳಿಂದ ಈವರೆಗೆ ಜಿಲ್ಲೆಗೆ 420 ಮಂದಿ ಆಗಮಿಸಿದ್ದಾರೆ. ಇವರುಗಳ ದ್ರವ ಪರೀಕ್ಷೆಯ ನಂತರ ಸೋಂಕು ದೃಢವಾದರೂ ಕೂಡ, ಸಾರ್ವಜನಿಕರು ಯಾವುದೇ ಭಯಪಡಬೇಕಾಗಿಲ್ಲ. ಎಲ್ಲಾ ರೀತಿಯ ಮುಂಜಾಗರುಕತೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ಗರ್ಭಿಣಿಯರು, ವಯಸ್ಸಾದವರಿಗೆ ವಿಶೇಷ ಕಾಳಜಿ
ಹೊರರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತಿದೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವವರು, ಗರ್ಭಿಣಿಯರು ಹಾಗೂ ವಯಸ್ಸಾದವರನ್ನು ಪರೀಕ್ಷೆಗೊಳಪಡಿಸಿ ವರದಿ ‘ನೆಗೆಟಿವ್’ ಆದಲ್ಲಿ ಮನೆಯಲ್ಲೇ ಇರಲು ಸೂಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪಣ್ಣೇಕರ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಇದ್ದರು.