ಮಡಿಕೇರಿ, ಮೇ 18: ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯ ಹಾಗೂ ಭೂಕುಸಿತದಿಂದಾಗಿ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ಮನೆಗಳ ಹಂಚಿಕೆ ಕಾರ್ಯ ನಡೆಯುತ್ತಿದ್ದು, ಈ ಸಂಬಂಧ ಎರಡನೇ ಹಂತದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮನೆಗಳ ಪರಿಶೀಲನಾ ಕಾರ್ಯ ಜಿಲ್ಲಾಡಳಿತದ ಮೂಲಕ ನಡೆಯುತ್ತಿದೆ.

2018ರಲ್ಲಿ ಭೂಕುಸಿತ ಸಂಭವಿಸಿದ ಸಂದರ್ಭ ಸಾಕಷ್ಟು ಮಂದಿ ಮನೆಗಳನ್ನು ಕಳೆದುಕೊಂಡಿ ದ್ದರು. ಸರಕಾರದ ಆದೇಶದಂತೆ ಸಂಪೂರ್ಣ ಹಾನಿಗೊಳಗಾದ ಕುಟುಂಬಗಳಿಗೆ ರೂ. 10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲು ಸರಕಾರದ ಆದೇಶದನ್ವಯ ಮೊದಲ ಹಂತದ ಪಟ್ಟಿಯನ್ನು ತಯಾರು ಮಾಡಿ ಈಗಾಗಲೇ ಗೋಳಿಕಟ್ಟೆ ಹಾಗೂ ಕರ್ಣಂಗೇರಿಯಲ್ಲಿ ಮನೆ ಗಳನ್ನು ನೀಡಲಾಗಿದೆ. ಮಾದಾಪುರ ಬಳಿಯ ಜಂಬೂರು ಬಾಣೆಯಲ್ಲಿ 383 ಮನೆಗಳ ನಿರ್ಮಾಣ ಕಾರ್ಯ ಪೂರ್ಣಹಂತದಲ್ಲಿದ್ದು, ತಾ. 29 ರಂದು ಉಸ್ತುವಾರಿ ಸಚಿವರು ಮನೆಗಳ ಹಕ್ಕು ಪತ್ರ ಹಸ್ತಾಂತರಿಸಲಿ ದ್ದಾರೆ. ಈ ಸಂಬಂಧ ಈಗಾಗಲೇ ಫಲಾನುಭವಿಗಳಿಗೆ ಮನೆ ಸಂಖ್ಯೆಗಳನ್ನು ಹಂಚಿಕೆ ಮಾಡಲಾಗಿದೆ. ಗಾಳಿಬೀಡು ಹಾಗೂ ಕೆ. ನಿಡುಗಣೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ ಆಗುತ್ತಿದೆ.

ಈ ಹಿಂದೆ ಸಂಪೂರ್ಣ ಹಾನಿಗೊಳಗಾದವರಿಗೆ ಮೊದಲ ಪಟ್ಟಿಯಲ್ಲಿ ಆದ್ಯತೆ ನೀಡಲಾಗಿತ್ತು. ತದನಂತರದಲ್ಲಿ ಸಾಕಷ್ಟು ಬೇಡಿಕೆ, ಒತ್ತಾಯಗಳು ಕೇಳಿಬಂದ ಹಿನ್ನೆಲೆ ಯಲ್ಲಿ ಎರಡನೇ ಹಂತದ ಪಟ್ಟಿಯನ್ನು ತಯಾರಿ ಮಾಡಲಾಯಿತು. ಆದರೆ, ಎರಡನೇ ಹಂತದ ಪಟ್ಟಿಯಲ್ಲಿ ಕೆಲವು ಹಾನಿಗೊಳಗಾಗದ, ಯಾವದೇ ತೊಂದರೆ ಇಲ್ಲದ, ಈಗಲೂ ಜನರು ವಾಸವಿರುವವರಿಗೂ ಮನೆಗಳನ್ನು ನೀಡಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಮನೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ.

ಅರ್ಹರಿಗೆ ಮಾತ್ರ ಮನೆ

2018ರಲ್ಲಿ ಭೂಕುಸಿತ ಸಂಭವಿಸಿದ ಸಂದರ್ಭ ಹಲವಷ್ಟು ಮನೆಗಳು ಅಪಾಯದ ಅಂಚಿಗೆ ಸಿಲುಕಿದ್ದವು. ಅಂತಹ ಮನೆಗಳನ್ನು ಗುರುತಿಸಿ, ಅವುಗಳನ್ನು ವಾಸಕ್ಕೆ ಯೋಗ್ಯವಲ್ಲವೆಂದು ಪರಿಗಣಿಸಿ ಎರಡನೇ ಹಂತದ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದೀಗ ದೂರುಗಳು ಬರುತ್ತಿರುವದರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಯಾವದೇ ಕಾರಣಕ್ಕೂ ಸುಳ್ಳು ಮಾಹಿತಿ ನೀಡಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ದ್ದರೆ, ಅಂತಹವರಿಗೆ ಮನೆ ನೀಡಲಾಗು ವದಿಲ್ಲ. ಅರ್ಹರಿಗೆ ಮಾತ್ರ ನೀಡಲಾಗು ತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮನೆ ನೆಲಸಮ

ಸಂತ್ರಸ್ತರ ಪಟ್ಟಿಯಲ್ಲಿ ಹೆಸರಿದ್ದು, ಮನೆಗಳನ್ನು ಪಡೆದುಕೊಂಡ ಬಳಿಕವೂ ಅಂತಹ ಮನೆಗಳು ವಾಸಕ್ಕೆ ಯೋಗ್ಯವಾಗಿವೆ ಎಂದು ತಿಳಿದು ಬಂದರೆ ಅಂತಹವರಿಗೆ ನೀಡಲಾದ ಮನೆಗಳನ್ನು ಷರತ್ತುಬದ್ಧವಾಗಿ ವಾಪಸ್ ಪಡೆದುಕೊಳ್ಳಲು ಜಿಲ್ಲಾಡಳಿತಕ್ಕೆ ಅಧಿಕಾರವಿದೆ. ಅಲ್ಲದೆ ಮನೆ ಪಡೆದುಕೊಂಡವರ, ಹಾನಿಯಾಗಿರುವ ಮನೆಗಳನ್ನು ವಾಸಕ್ಕೆ ಯೋಗ್ಯವಲ್ಲವೆಂದು ದೃಢೀಕರಣ ದೊಂದಿಗೆ ಪರಿಗಣಿಸಲಿದ್ದು, ಅಂತಹವರಿಗೆ ಮನೆಗಳನ್ನು ನೀಡಿದ ಬಳಿಕ ಅವರುಗಳಿದ್ದ ಹಿಂದಿನ ಮನೆಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ನೆಲಸಮಗೊಳಿಸುವ ಅಧಿಕಾರ ಜಿಲ್ಲಾಡಳಿತಕ್ಕಿರುವದಾಗಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪೊಲೀಸ್ ಮೆಟ್ಟಿಲು

ದೂರಿನ ಅನ್ವಯ ಅಧಿಕಾರಿಗಳು ಮನೆಗಳನ್ನು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಕ್ಕಂದೂರು ಗ್ರಾಮದ ಹೆಮ್ಮೆತ್ತಾಳುವಿನ ಫಲಾನುಭವಿಯೊಬ್ಬರ ಮನೆ ಪರಿಶೀಲನಾ ಫೋಟೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಂದೂರು ರಸ್ತೆ ಬದಿಯಲ್ಲಿ ಸುಸಜ್ಜಿತವಾದ ಎರಡು ತಾರಸಿ ಮನೆಗಳನ್ನು ಹೊಂದಿದ್ದರೂ ಅವರನ್ನು ಫಲಾನುಭವಿಯ ಪಟ್ಟಿಯಲ್ಲಿ ಸೇರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಗೊಂಡಿತ್ತು. ಎರಡು ಮನೆಗಳೂ ಸುಸಜ್ಜಿತವಾಗಿದ್ದರೂ ಮನೆಯ ಹಿಂಬದಿಗೆ ಟಾರ್ಪಲ್ ಹಾಕಿ, ಅಧಿಕಾರಿಗಳು ಬಂದಾಗ ಫೋಟೋ ತೆಗೆಸಿ ಪುನರ್ ವಸತಿ ಮನೆ ಪಡೆದುಕೊಳ್ಳಲು ಪ್ರಯತ್ನಿಸುವುದಾಗಿ ಪೋಸ್ಟ್ ಹಾಕಲಾಗಿತ್ತು. ಇದನ್ನು ಆಕ್ಷೇಪಿಸಿ ರೆನಿಟಾ ಎಂಬವರು ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿ ಫೋಟೋ ವೈರಲ್ ಮಾಡಿದ್ದ ಯುವಕ ಹಾಗೂ ಫೋಟೋ ನೀಡಿದವರ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದರು. ಉಭಯ ಕಡೆಯವರನ್ನು ಠಾಣೆಗೆ ಕರೆಸಿದ ಠಾಣಾಧಿಕಾರಿ ಚಂದ್ರಶೇಖರ್ ಅವರು, ಮುಂದಕ್ಕೆ ಫೋಟೋ ವೈರಲ್ ಮಾಡದಂತೆ ಯುವಕರಿಗೆ ಸೂಚಿಸಿದ್ದಲ್ಲದೆ, ಈ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅನ್ಯಾಯವಾಗಬಾರದು

ಭೂಕುಸಿತ ಸಂದರ್ಭದಲ್ಲಿ ಸಾಕಷ್ಟು ಮಂದಿಗೆ ನಷ್ಟವಾಗಿದೆ. ಅರ್ಹರಿಗೆ ಸರಕಾರದ ಯೋಜನೆಗಳು ತಲಪಬೇಕಿದೆ. ಮನೆಗಳಿರುವವರಿಗೆ ಮತ್ತೆ ಮನೆ, ಪರಿಹಾರ ನೀಡುವದು ಸರಿಯಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಗ್ರಾ.ಪಂ., ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಕಳೆದು ಕೊಂಡವರಿಗೆ ಅನ್ಯಾಯವಾಗಬಾರ ದೆಂದು ಸ್ಥಳೀಯ ನಿವಾಸಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಅಭಿಪ್ರಾಯಪಟ್ಟಿದ್ದಾರೆ.

ನೈಜವಾಗಿ ಮನೆ ಕಳೆದುಕೊಂಡವರಿಗೆ, ತೊಂದರೆಯಲ್ಲಿ ಸಿಲುಕಿರುವ ಬಡವರಿಗೆ ಮನೆಗಳನ್ನು ನೀಡಲಿ. ಕಷ್ಟದಲ್ಲಿರುವವರಿಗೆ ಸರಕಾರದ ಸವಲತ್ತುಗಳು ದೊರಕಬೇಕು. ಈ ಬಗ್ಗೆ ಅಧಿಕಾರಿ ಗಳು ಕೂಲಂಕಷವಾಗಿ ಪರಿಶೀಲಿಸಿ ಕಾರ್ಯೋನ್ಮುಖರಾಗ ಬೇಕಿದೆ. ನೊಂದವರಿಗೆ ಅನ್ಯಾಯವಾಗಬಾರ ದೆಂದು ಉದಯಗಿರಿಯ ನಂದಕುಮಾರ್ (ಗಣೇಶ್) ಪ್ರತಿಕ್ರ್ರಿಯಿಸಿದ್ದಾರೆ.