ಮಡಿಕೇರಿ, ಮೇ 18: ಅರೆಭಾಷಿಕ ಗೌಡ ಜನಾಂಗದ ಸಂಸ್ಕøತಿ ಹಾಗೂ ಜನಪ್ರತಿನಿಧಿಗಳಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಾಸಕ ಕೆ.ಜಿ. ಬೋಪಯ್ಯ ಅವರುಗಳ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಅರೆಭಾಷಿಕ ಗೌಡ ಸಂಘಟನೆಗಳಿಂದ ಪೊಲೀಸ್ ದೂರು ನೀಡಲಾಗಿದೆ.

ಕೊಡಗಿನಲ್ಲಿ ಮತ್ತೆ ಜನಾಂಗೀಯ ನಿಂದನೆ ಹೆಚ್ಚುತ್ತಿದ್ದು, ಕೊಡಗಿನ ಪ್ರಮುಖ ಜನಾಂಗವಾದ ಅರೆಭಾಷಿಕ ಹಾಗೂ ಕೊಡವ ಜನಾಂಗದ ಮಧ್ಯೆ ಈ ಹಿಂದೆ ತಲಕಾವೇರಿ ಹಬ್ಬದ ಸಮಯದಲ್ಲಿ ಆದ ಜನಾಂಗೀಯ ನಿಂದನೆ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಪ್ರಕರಣಗಳಿಂದ ಕೊಡಗು ಗೌಡ ಫೆಡರೇಶನ್ ವತಿಯಿಂದ ತಮ್ಮ ಸಮುದಾಯಗಳಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಇದಾದ ಸುಮಾರು 7 ತಿಂಗಳ ಬಳಿಕ ಕೊಡವ ಜನಾಂಗದ ಮೂವೆರ ರಾಯ್ ಪೆÇನ್ನಣ್ಣ ಎನ್ನುವಾತ ಭಾಷಿಕರ ಬಗ್ಗೆ ಹಾಗೂ ಉಡುಗೆ-ತೊಡುಗೆ ಬಗ್ಗೆ ಅವಾಚ್ಯವಾಗಿ ನಿಂದಿಸಿದಲ್ಲದೆ, ಶಾಸಕರಾದ ಅರೆಭಾಷಿಕ ಜನಾಂಗದ ಬೋಪಯ್ಯರವರ ಬಗ್ಗೆ ವ್ಯಂಗ್ಯ ಚಿತ್ರವನ್ನು ಬಿಡಿಸಿ ಅವಹೇಳನ ಮಾಡಿದ್ದಾನೆ.

ಮತ್ತೊಬ್ಬ ಆರೋಪಿ ಮುಕ್ಕಾಟಿರ ಅಯ್ಯಪ್ಪ ಎನ್ನುವಾತ ಅರೆಭಾಷಿಕ ಜನಾಂಗದ ಬಗ್ಗೆ ಕೊಡಗಿಗೆ ಇವರುಗಳು ಮಲೆಯಾಳಿಗಳಿಗಿಂತ ಅಪಾಯಕಾರಿ ಎಂದು ಹೇಳಿದ್ದು, ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡರ ಬಗ್ಗೆ ಕೀಳು ಮಟ್ಟದ ಕೆಟ್ಟ ಪದಗಳನ್ನು ಬಳಕೆ ಮಾಡಿರುತ್ತಾನೆ. ಇದನ್ನು ಮನಗಂಡ ಗೌಡ ಫೆಡರೇಶನ್ ಅಧ್ಯಕ್ಷರು ಇದರ ಬಗ್ಗೆ ಎಲ್ಲ ಜನಾಂಗದ ಜನರು ಸೌಹಾರ್ದಯುತವಾಗಿ ಬಾಳಲು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಮನ್ವಯ ಸಭೆ ನಡೆಸಲು ಕೊಡವ ಜನಾಂಗದ ಪ್ರಮುಖರಿಗೆ ಆಹ್ವಾನವಿತ್ತಿದ್ದರು.

ಆದರೆ 8 ದಿನ ಕಳೆದರೂ ಕೊಡವ ಜನಾಂಗದ ಪ್ರಮುಖರು ಸಂಧಾನ ಸಭೆಯಲ್ಲಿ ಭಾಗವಹಿಸದೆ, ಸರಿಯಾದ ಉತ್ತರವು ನೀಡದೆ ನಿರ್ಲಕ್ಷ್ಯ ತೋರಿದ್ದರ ಪರಿಣಾಮ ಇಂದು ಅರೆಭಾಷಿಕ ಜನಾಂಗದ ಪ್ರಮುಖ ಸಂಘಟನೆಗಳು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ. ಕೊಡಗು ಗೌಡ ಸಮಾಜ, ಕೊಡಗು ಗೌಡ ವಿದ್ಯಾಸಂಘ ಹಾಗೂ ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸೈಬರ್ ಕ್ರೈಂ ಬ್ರಾಂಜ್‍ಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಜನಾಂಗೀಯ ನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.