ಸೋಮವಾರಪೇಟೆ, ಮೇ 16: ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ ಬಂದಿತರಾಗಿರುವ ನಾಗರಿಕ ಮತ್ತು ಶಿಕ್ಷಣ ಹಕ್ಕುಗಳ ಪ್ರತಿಪಾದಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಡಾ. ಆನಂದ್ ತೇಲ್ತಂಬ್ಡೆ, ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಾಕ್ ಅವರನ್ನು ಬಿಡುಗಡೆಗೊಳಿಸಬೇಕೆಂದು ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟ ಆಗ್ರಹಿಸಿದೆ.

ತಾಲೂಕು ತಹಶೀಲ್ದಾರ್ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ ಪದಾಧಿಕಾರಿಗಳು, ಸುಳ್ಳು ಮೊಕದ್ದಮೆಯನ್ನು ಹೂಡಿ ಹೋರಾಟಗಾರರನ್ನು ಬಂಧಿಸಿರುವದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 129ನೇ ಜನ್ಮದಿನದಂದೇ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ತಳ್ಳುವದರ ಮೂಲಕ ಇಡೀ ಸಮುದಾಯದ ಪರವಿರುವ ಧ್ವನಿಯನ್ನು ಅಡಗಿಸುವ ತಂತ್ರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಉಪಾಧ್ಯಕ್ಷ ಎಂ.ಪಿ. ಹೊನ್ನಪ್ಪ, ಗೌರವ ಸಲಹೆಗಾರ ಬಿ.ಇ. ಜಯೇಂದ್ರ, ಖಜಾಂಚಿ ಹೆಚ್.ಎ. ನಾಗರಾಜ್, ಸಹಕಾರ್ಯದರ್ಶಿ ಹೆಚ್.ಎಂ. ಸೋಮಪ್ಪ ಉಪಸ್ಥಿತರಿದ್ದರು.