ಕೂಡಿಗೆ, ಮೇ 16: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಸರಕಾರಿ ಕಾಮಗಾರಿಗಳು ಮತ್ತು ಪ್ರಮುಖವಾದ ರಸ್ತೆ ಕಾಮಗಾರಿಗಳ ಭೂಮಿಪೂಜೆ ನಡೆಸಿ ಮೂರು ತಿಂಗಳುಗಳು ಕಳೆದಿವೆ.

ಆದರೆ ಕೆಲ ಸರಕಾರಿ ಕಾಮಗಾರಿ ಗಳು ಪ್ರಾರಂಭವಾಗಿ ಲಾಕ್‍ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದವು. ಲಾಕ್‍ಡೌನ್ ಸಡಿಲಿಕೆಯಿಂದ ಪ್ರಾರಂಭಗೊಂಡ ಕಾಮಗಾರಿಗಳು ನಡೆಸಲು ಕಾರ್ಮಿಕರ ಕೊರತೆಯಿಂದ ಕಾಮಗಾರಿಗಳಿಗೆ ತಾತ್ಕಾಲಿಕ ಅಡಚಣೆ ಉಂಟಾಗಿದೆ.

ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರು ಹೆಚ್ಚು ಅನುಭವವಿರುವ ಮತ್ತು ಸಿಮೆಂಟ್ ಕೆಲಸದಲ್ಲಿ ಪರಿಣತಿ ಪಡೆದ ಅಂತರರಾಜ್ಯ ಕಾರ್ಮಿಕರನ್ನು ಹೆಚ್ಚಾಗಿ ಕರೆತಂದು ತಮ್ಮ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೊಳ್ಳುತ್ತಿದ್ದರು.

ಆದರೆ ಲಾಕ್‍ಡೌನ್ ಹಿನ್ನೆಲೆ ಹೋಬಳಿ ವ್ಯಾಪ್ತಿಯ ಅನೇಕ ಕೈಗಾರಿಕಾ ಪ್ರದೇಶದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ ನೂರಾರು ಅಂತರರಾಜ್ಯ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ.

ಕುಶಾಲನಗರ ಹೋಬಳಿ ಕೈಗಾರಿಕಾ ಘಟಕ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿ ಕೆಲ ತಿಂಗಳುಗಳಿಂದ ಸ್ಥಗಿತಗೊಂಡಿತ್ತು. ಆದರೆ ಇದೀಗ ಲಾಕ್‍ಡೌನ್ ಸಡಿಲಿಗೆಯಿಂದ ಕಾಮಗಾರಿ ಪ್ರಾರಂಭವಾಗಿದ್ದು, ಕಾರ್ಮಿಕರ ಕೊರತೆ ಕಾಣುತ್ತಿದೆ. ಮೊದಲು ಭರದಿಂದ ಸಾಗುತ್ತಿದ ಕೆಲಸ ನಿಧಾನಗತಿಗೆ ಬಂದಿದೆ.

ಅನೇಕ ಕೈಗಾರಿಕಾ ಪ್ರದೇಶಗಳಲ್ಲಿ ವಿವಿಧ ಬಗೆಯ ಘಟಕಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಸಹ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡು ಆರೋಗ್ಯ ತಪಾಸಣೆಯ ನಂತರ ತಮ್ಮ ಊರುಗಳಿಗೆ ಹೊರಡಲು ಸಿದ್ಧರಾಗಿದ್ದಾರೆ.